ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳು ರಾಜಕಾರಣಿಗಳು ದಾಳಗಳಾಗದಿರಲಿ

ಶರಣ ಸಂಸ್ಕೃತಿ ಉತ್ಸವದಲ್ಲಿ ಸಾಹಿತಿ ಡಾ.ಕೆ. ಮರುಳಸಿದ್ಧಪ್ಪ
Last Updated 1 ಮಾರ್ಚ್ 2021, 4:33 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕಾರಣಿಗಳು ತಮ್ಮ ಕಲಹಗಳಿಗೆ, ಜಾತಿ ಜಗಳಗಳಿಗೆ ಮಠಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮಠಗಳು ರಾಜಕೀಯ ದಾಳವಾಗದಂತೆ ಎಚ್ಚರವಹಿಸಬೇಕು ಎಂದು ಸಾಹಿತಿ ಡಾ.ಕೆ. ಮರುಳಸಿದ್ಧಪ್ಪ ತಿಳಿಸಿದರು.

ಮುರುಘರಾಜೇಂದ್ರ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಭಾನುವಾರ ನಡೆದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ 64ನೇ ಸರಳ ಸ್ಮರಣೋತ್ಸವ, ಜಯದೇವಶ್ರೀ, ಶೂನ್ಯಪೀಠ ಪ್ರಶಸ್ತಿ ಪ್ರದಾನ, ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ‘ಜಯದೇವ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಸರ್ವಸಮಾಜಗಳಿಗೆ ಗುರುವಾಗಿರಲು ಸಾಧ್ಯವಾಗುವವರು ಮಾತ್ರ ಜಗದ್ಗುರು ಎಂಬ ವಿಶೇಷಣವನ್ನು ಬಳಸಿಕೊಳ್ಳಬಹುದು. ಜಾತಿಗೆ, ಉಪಜಾತಿಗಳಿಗೆ ಸೀಮಿತರಾಗುವ ಸ್ವಾಮೀಜಿಗಳು ಜಗದ್ಗುರು ಎಂಬ ವಿಶೇಷಣವನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದರು.

ವೈವಿಧ್ಯತೆಯೇ ಭಾರತದ ಶಕ್ತಿ. ಅದನ್ನು ಹಾಳು ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ಹಾಳಾದರೆ ದೇಶವೇ ಚಿದ್ರವಾಗಲಿದೆ ಎಂದು ಎಚ್ಚರಿಸಿದರು.

ಗುರುಗಳಿಲ್ಲ, ಮಠಗಳಿಲ್ಲದ ಅನೇಕ ಸಮಾಜಗಳಿಗೆ ಮುರುಘಾ ಶರಣರು ಗುರುಗಳನ್ನು ನೀಡಿದ್ದಾರೆ. ಜಾತಿ ಹುಟ್ಟು ಹಾಕುತ್ತಿದ್ದಾರೆ ಎಂದು ಬಹಳ ಮಂದಿ ಟೀಕಿಸುತ್ತಿದ್ದಾರೆ. ಆದರೆ ಸ್ವಾಮೀಜಿ ಅವರು ಹೊಸ ಜಾತಿಯನ್ನು ಹುಟ್ಟು ಹಾಕಿಲ್ಲ. ಇರುವ ಜಾತಿಗಳು ಗುರುಗಳಿಲ್ಲದೇ ಕೀಳರಿಮೆಯಿಂದ ಬಳಲುತ್ತಿದ್ದಾಗ, ಅಸ್ಮಿತೆಯನ್ನು ಕಟ್ಟಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿದ್ದಾಗ ಅವರಿಗೊಂದು ಅಸ್ಮಿತೆ ನೀಡುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

‘ಶೂನ್ಯಪೀಠ ಅಲ್ಲಮ’ ಪ್ರಶಸ್ತಿ ಸ್ವೀಕರಿಸಿದ ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜಸ್ವಾಮಿ ಮಾತನಾಡಿ, ‘ವಿಜ್ಞಾನದಂತೆ ವಚನಗಳನ್ನು ಕೂಡ ಬದುಕಿನ ಸೂತ್ರಗಳಾಗಿ ತೆಗೆದುಕೊಳ್ಳಬೇಕು. ನುಡಿ ಮತ್ತು ನಡೆ ಒಂದಾಗಬೇಕು. ಕಣ್ಣಲ್ಲಿ ಹಾದರ ಕಂಡು, ಬಾಯಲ್ಲಿ ಅಕ್ಕತಂಗಿ ಎಂದು ಹೇಳುವ ಕ್ಷತ್ರಿಮತೆ ಬಿಡಬೇಕಿದ್ದರೆ ವಚನ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಒಂದು ಕಲ್ಲನ್ನು ಕಲ್ಲು ಎಂದು ನೋಡಲು ಸಾಧ್ಯವಾಗುತ್ತದೆ. ಆ ಕಲ್ಲಿನಿಂದ ಮಸೀದಿ, ಚರ್ಚು, ಮಂದಿರ ನಿರ್ಮಾಣವಾದರೆ ಆಗ ಕೆಲವರಿಗೆ ನಮ್ಮದು ಎಂಬ ಭಾವ, ಕೆಲವರಿಗೆ ನಮ್ಮದಲ್ಲ ಎಂಬ ದುರ್ಭಾವ ಉಂಟಾಗುತ್ತದೆ. ಅದೂ ಒಂದು ಕಲ್ಲು ಎಂಬ ನಿರ್ಭಾವ ಉಂಟಾದರೆ ಆತನೇ ಜ್ಞಾನಿ ಎಂದು ವಿಶ್ಲೇಷಿಸಿದರು.

‘ಶೂನ್ಯಪೀಠ ಚನ್ನಬಸವ’ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಪ್ರೊ.ಎಚ್‌. ಲಿಂಗಪ್ಪ, ‘ಆಳುವ ವರ್ಗ ಸುಖಸಂಪತ್ತಿನಲ್ಲಿ ನೆಮ್ಮದಿಯಿಂದ ಇರುತ್ತದೆ. ಆಳಿಸಿಕೊಳ್ಳುವವರು ಕಷ್ಟ ಕಾರ್ಪಣ್ಯದಲ್ಲಿ ಇರುತ್ತಾರೆ. ಬಸವಣ್ಣ ಆಳುವ ವರ್ಗಕ್ಕೆ ಸೇರಿದರೂ ಆಳಿಸಿಕೊಳ್ಳುವವರ ಧ್ವನಿಯಾದರು. ಶರಣರ ವಚನಗಳನ್ನು ಅಳವಡಿಸಿಕೊಂಡು ನಡೆ–ನುಡಿ ಒಂದು ಎಂಬ ಆದರ್ಶದಲ್ಲಿ ಬದುಕಲು ಸಾಧ್ಯವಾಗಬೇಕು. ವಚನಗಳು ಪ್ರತಿ ಮನೆಗಳಲ್ಲಿ ನಿತ್ಯ ಪಠಣವಾಗಬೇಕು’ ಎಂದು ಸಲಹೆ ನೀಡಿದರು.

ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು. ವಿರಕ್ತಮಠದ ಚರಮೂರ್ತಿ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಯಕುಮಾರ್‌ ಸ್ವಾಗಿತಿಸದರು. ಬಕ್ಕಪ್ಪ ಕಾರ್ಯಕ್ರಮ ನಿರೂಪಿಸಿದರು.

ಜನರ ಬಳಿಗೆ ಮಠ ಒಯ್ದವರು ಜಯದೇವಶ್ರೀಗಳು: ಮುರುಘಾಶ್ರೀ

ಮಠಗಳಿಗೆ ಜನರು ಬರುವುದು ಸಾಮಾನ್ಯ. ಜನರ ಬಳಿಗೇ ಮಠವನ್ನು ಒಯ್ದವರು ಜಯದೇವ ಸ್ವಾಮೀಜಿ. ಪಾರಮಾರ್ಥಿಕ, ಆಧ್ಯಾತ್ಮಿಕವಾಗಿ ಇರುದರ ಜತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕೆಲಸ ಮಾಡಿದರು. ಅವರು ವರ್ಷದ 11 ತಿಂಗಳು ಸುತ್ತಾಟದಲ್ಲಿಯೇ ಇರುತ್ತಿದ್ದರು. ಕಿತ್ತಾಟದ ಬದುಕು ನಡೆಸಿದವರು ಇತಿಹಾಸದ ಪುಟಗಳಲ್ಲಿ ದಾಖಲಾಗುವುದಿಲ್ಲ. ಸುತ್ತಾಟ ನಡೆಸಿದವರು, ಭಕ್ತರ ಒಡನಾಟ ಮಾಡಿ ಒಳನೋಟ ಬೆಳೆಸಿಕೊಂಡವರಿಂದ ಸಾಧನೆ ಸಾಧ್ಯ ಎಂದು ಚಿತ್ರದುರ್ಗಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶೂನ್ಯಪೀಠದ ಪರಂಪರೆ ಅಂದರೆ ಬಸವ ಪರಂಪರೆ, ಶರಣ ಪರಂಪರೆ, ವಚನ ಪರಂಪರೆಯನ್ನು ನಾಡಿನ ಜನರಿಗೆ ತಲುಪಿಸುವ ಕೆಲಸವನ್ನು ಮುರುಘಾ ಪರಂಪರೆ ಮಾಡುತ್ತಿದೆ ಎಂದರು.

ಜೀವನ ಎಂದರೆ ಜವಾಬ್ದಾರಿ. ಅನೇಕರು ಬೇಜವಾಬ್ದಾರಿಯಿಂದ ಜೀವನ ಸಾಗಿಸುತ್ತಾರೆ. ಅವರಿಗೆ ಉಜ್ವಲ ಬದುಕು ಇರುವುದಿಲ್ಲ. ಬಸವಣ್ಣನ ಅಂತರಂಗದಲ್ಲಿ ವಿಶ್ವತ್ವ ಇತ್ತು. ಹೊರಗೆ ವಿಶ್ವಮಾನವತ್ವ ಇತ್ತು. ಹಾಗಾಗಿ ಎಲ್ಲರನ್ನೂ ಅಪ್ಪಿಕೊಂಡರು. ಜಯದೇವ ಸ್ವಾಮೀಜಿಯವರ ಅಂತರಂಗದಲ್ಲಿ ಬಸವತ್ವ ಇತ್ತು. ದೈವತ್ವ, ಗುರುತ್ವ ಇಟ್ಟುಕೊಳ್ಳುವುದು ಸುಲಭ. ಬಸವತ್ವ ಅಂದರೆ ಬಸವತತ್ವ ಇಟ್ಟುಕೊಂಡು ಅದನ್ನು ಸಾಕಾರಗೊಳಿಸುವುದು ಸುಲಭದ ಕೆಲಸವಲ್ಲ. ನಿಂದೆ, ನೋವು, ಅಪಮಾನಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅವೆಲ್ಲವನ್ನು ಸಹಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯಗಳನ್ನು ತೆರೆದು ಲಕ್ಷಾಂತರ ಜನರ ಬದುಕು ಬೆಳಗಿದರು ಎಂದು ಹೇಳಿದರು.

‘ಇವನಾರ’ ಹಾಡಿದ ರೂಪಾ
ಇವನಾರವ ಇವನಾರವ ಇವನಾರ ಎನ್ನದಿರಿ ಎಂಬ ವಚನವನ್ನು ಸುಶ್ರಾವ್ಯವಾಗಿ ಹಾಡಿ ರೂಪಾ ಡಿ/ ಮೌದ್ಗೀಲ್‌ ಗಮನ ಸೆಳೆದರು.

‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂದರ್ಭದಲ್ಲಿ ಸಂಗೀತ ಕಲಿಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡು ಹಾಡಿದರು.

ಮಕ್ಕಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಬೇಡಿ. ಕಷ್ಟಗಳನ್ನು, ಸವಾಲುಗಳನ್ನು ಎದುರಿಸಲು ಕಲಿಸಿ. ಕಠಿಣ ನಿಯಂತ್ರಣದ ಬದಲು ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಿ. ಐಎಎಸ್, ಐಪಿಎಸ್‌ನಿಂದ ಹಿಡಿದು ವ್ಯಕ್ತಿತ್ವ ವಿಕಸನದ ವರೆಗೆ ತರಬೇತಿ ಶಿಬಿರಗಳಿವೆ. ಸಂಸ್ಕೃತಿಯನ್ನು ಅಂಥ ತರಬೇತಿ ಶಿಬಿರಗಳಿಂದ ಕಲಿಯಲು ಸಾಧ್ಯವಿಲ್ಲ. ಮಕ್ಕಳಿರುವಾಗಲೇ ಸಂಸ್ಕೃತಿಯ ಬೀಜ ಬಿತ್ತಿ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT