ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುವಿಗೆ ಸಾಧಿಸುವ ಛಲವಿರಲಿ: ಇಮ್ತಿಯಾಜ್ ಅಹಮದ್‌

ರಾಷ್ಟ್ರೀಯ ವಾಲಿಬಾಲ್ ಆಟಗಾರ ಇಮ್ತಿಯಾಜ್ ಅಹಮದ್‌ ಅಭಿಪ್ರಾಯ
Last Updated 31 ಜನವರಿ 2023, 4:43 IST
ಅಕ್ಷರ ಗಾತ್ರ

ದಾವಣಗೆರೆ: ಕ್ರೀಡೆಯಲ್ಲಿ ಆಸಕ್ತಿ ಮತ್ತು ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯವಿದೆ. ಕ್ರೀಡಾಪಟುವಿಗೆ ಸಾಧಿಸುವ ಛಲ ಮುಖ್ಯ ಎಂದು ರಾಷ್ಟ್ರೀಯ ವಾಲಿಬಾಲ್ ಆಟಗಾರ ಕೆ. ಇಮ್ತಿಯಾಜ್ ಅಹಮದ್‌ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆರ್.ಎಲ್. ಕಾನೂನು ಕಾಲೇಜು ವತಿಯಿಂದ ನಡೆದ ರಾಜ್ಯ ಕಾನೂನು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜುಗಳ ವಾಲಿಬಾಲ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಕಾಲದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸೌಲಭ್ಯಗಳ ಕೊರತೆಯಿತ್ತು. ಈಗ ಹಾಗಿಲ್ಲ. ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಸೋತವರಿಂದ ಕಲಿಯುವುದು ಹೆಚ್ಚಿರುತ್ತದೆ. ಶಿಸ್ತುಬದ್ಧವಾಗಿ ಮುಂದುವರಿದಾಗ ಯಶಸ್ಸು ಸಿಗುತ್ತದೆ. ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಹೆಚ್ಚು ನೀರು ಸೇವಿಸಬೇಕು. 7-8 ಗಂಟೆ ನಿದ್ದೆ ಮಾಡಬೇಕು. ವ್ಯಾಯಾಮ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸೋತವರಿಗೆ ಕೀಳರಿಮೆ ಬೇಡ. ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಭವಿಷ್ಯದಲ್ಲಿ ವಕೀಲರಾಗುವ ನೀವು ಜೀವನದುದ್ದಕ್ಕೂ ಸಮಚಿತ್ತದಿಂದ ಇರಬೇಕು. ಸೋಲು, ಗೆಲುವನ್ನು ಹೇಗೆ ಸ್ವೀಕರಿಸಬೇಕು ಎಂಬ ಪಾಠ ಕ್ರೀಡೆಗಳಿಂದ ದೊರೆಯುತ್ತದೆ. ನಿಮ್ಮ ವೃತ್ತಿಗೂ ಇದು ಪೂರಕವಾಗುತ್ತದೆ’ ಎಂದು ಆರ್.ಎಲ್. ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಸೋಮಶೇಖರಪ್ಪ ಸಲಹೆ ನೀಡಿದರು.

ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಾಲಿದ್ ಖಾನ್ ಮಾತನಾಡಿದರು. ಪ್ರಾಧ್ಯಾಪಕ ಡಾ.ಜಿ.ಎಸ್. ಯತೀಶ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪವನ್ ಇದ್ದರು.

ಎರಡು ದಿನಗಳ ಟೂರ್ನಿಯಲ್ಲಿ ವಿವಿಧ ಜಿಲ್ಲೆಗಳ 38 ತಂಡಗಳು ಭಾಗವಹಿಸಿವೆ. ಪ್ರತಿ ತಂಡಕ್ಕೆ 12 ಜನರಂತೆ ಒಟ್ಟು 493 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 35 ಮಂದಿ ವ್ಯವಸ್ಥಾಪಕರಿದ್ದಾರೆ. ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಸೋಮವಾರ 22 ಪಂದ್ಯಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT