ಭಾನುವಾರ, ಮಾರ್ಚ್ 29, 2020
19 °C
ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌

ಜವಾಬ್ದಾರಿ ಹೆಗಲ ಮೇಲಿರಲಿ, ತಲೆಗೆ ಹತ್ತದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಿಜೆಪಿಯಲ್ಲಿ ಅಧ್ಯಕ್ಷತೆ ಎನ್ನುವುದು ಹುದ್ದೆ, ಅಧಿಕಾರ ಅಲ್ಲ. ಅದು ಜವಾಬ್ದಾರಿ. ಈ ಜವಾಬ್ದಾರಿಯನ್ನು ಹೆಗಲ ಮೇಲಿರಲಿ. ಭಾವನೆ ಹೃದಯದಲ್ಲಿರಲಿ. ಕಾರ್ಯಕರ್ತರ ಹೃದಯಲ್ಲಿ ಅರಳಲಿ. ಆದರೆ ಜವಾಬ್ದಾರಿ ಭುಜದಿಂದ ತಲೆಗೆ ಏರಬಾರದು. ತಲೆಗೇರಿದರೆ ಅಹಂಕಾರ ಬರುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದ ಶಾಮನೂರು ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿಯಲ್ಲಿ ಪದಗ್ರಹಣ ಅಂದರೆ ಅಧಿಕಾರ ವಹಿಸಿಕೊಂಡಷ್ಟೇ ಸಂತೋಷದಲ್ಲಿ ಅಧಿಕಾರವನ್ನು ಹಸ್ತಾಂತರ ಮಾಡುತ್ತಾರೆ. ಬೇರೆ ಪಕ್ಷಗಳಲ್ಲಿ ಈ ಸಂಸ್ಕೃತಿಯನ್ನು ಕಾಣಲು ಸಾಧ್ಯವಿಲ್ಲ. ಹಿಂದಿನವರು ಪಕ್ಷವನ್ನು ಬೆಳೆಸಿದ್ದಾರೆ. ಮುಂದಿನವರು ಅದನ್ನು ಇನ್ನಷ್ಟು ಮುಂದಕ್ಕೆ ಒಯ್ಯುತ್ತಾರೆ. ಮಧ್ಯದಲ್ಲಿ ಮೂರು ವರ್ಷಗಳ ಅವಧಿಯ ಗುರುತರ ಜವಾಬ್ದಾರಿ ನಿಮ್ಮದು ಎಂದು ತಿಳಿಸಿದರು.

ಹತ್ತಾರು ಮಂದಿಯ ತ್ಯಾಗದಿಂದ ಪಕ್ಷ ಬೆಳೆದಿದೆ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದವರು, ಬೀದಿಯಲ್ಲಿ ಪ್ರಾಣ ಕಳೆದುಕೊಂಡವರು ಪಕ್ಷ ಬೆಳೆಯಲು ಕಾರಣ. ಅವರೆಲ್ಲರಿಂದಾಗಿ ನಾವು ಅಧಿಕಾರ ಹಿಡಿದಿದ್ದೇವೆ. ಪಕ್ಷದ ಎಲ್ಲರೂ 35 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪಕ್ಷವನ್ನು ಕಟ್ಟಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಮ್ಮ ನೇತೃತ್ವದಲ್ಲಿ ಅಧಿಕಾರ ಹಿಡಿಯಬೇಕು ಎಂದು ಹೇಳಿದರು.

‘ಸಿಎಎ ಬಗ್ಗೆ 6 ತಿಂಗಳ ಕಾಲ ಚರ್ಚೆಗೆ ಅವಕಾಶ ಕೊಡಲಾಗಿತ್ತು. ಆದರೆ ಕಾಂಗ್ರೆಸ್‌ ಆಗ ಸುಮ್ಮನಿತ್ತು. ಈಗ ಅಪಪ್ರಚಾರದ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಹೀಗೆ ಮಾಡುವುದನ್ನು ದೇಶದ್ರೋಹ ಎಂದು ಹಿಂದೆಯೇ ಮಹಾತ್ಮಗಾಂಧಿ ಹೇಳಿದ್ದರು. ಭಾರತ್‌ ಮಾತಾ ಕೀ ಜೈ ಎನ್ನದ ಕಾಂಗ್ರೆಸ್ಸಿಗರ ಬಾಯಲ್ಲಿ ಆ ವಾಕ್ಯ ಬರುವಂತೆ ಮಾಡಿದ್ದು ಮಾತ್ರ ಮೋದಿ. 370 ವಿಧಿ ರದ್ದತಿಗೆ ಮತ್ತು ಸಿಎಎ ಪರ ಮತ ಚಲಾಯಿಸಲು ಸಿಕ್ಕಿದ ಅವಕಾಶವೇ ನಮ್ಮ ಬದುಕಿನಲ್ಲಿ ಸಿಕ್ಕಿದ ಅತ್ಯಂತ ದೊಡ್ಡ ಪುಣ್ಯದ ಕೆಲಸ’ ಎಂದು ಬಣ್ಣಿಸಿದರು.

ನೂತನ ಅಧ್ಯಕ್ಷ ಹನಗವಾಡಿ ವೀರೇಶ್‌ ಮಾತನಾಡಿ, ‘ಎಲ್ಲರ ಸಹಕಾರ ಪಡೆದು ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತೇನೆ. ಅಧಿಕಾರ ವಿಕೇಂದ್ರೀಕರಣವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಅತ್ಯಂತ ಕಟ್ಟಕಡೆಯಲ್ಲಿ ಇರುವ ಪೇಜ್‌ ಪ್ರಮುಖ್‌ ಕೂಡ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಹೇಳಿದರು.

ಮುಂದೆ ಬರಲಿರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಕಾರ್ಯಕರ್ತರ ಚುನಾವಣೆಗಳಾಗಿರುತ್ತವೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರಿಗೂ ಪದಗ್ರಹಣ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಬಿಜೆಪಿ ನಾಯಕರಾದ ರಾಜನಹಳ್ಳಿ ಶಿವಕುಮಾರ್‌, ಶೈಲಜಾ ಬಸವರಾಜ್‌, ಜಿ.ಎನ್‌. ಸುರೇಶ್‌,  ಮಹೇಶ್‌ ತೆಂಗಿನಕಾಯಿ, ಡಾ.ಎ.ಎಸ್‌. ಶಿವಯೋಗಿಸ್ವಾಮಿ, ಬಿ.ಪಿ. ಹರೀಶ್‌, ದತ್ತಾತ್ರೇಯ, ಜೀವನಮೂರ್ತಿ, ಆನಂದಪ್ಪ ಅವರೂ ಇದ್ದರು.

‘ಬೆನ್ನೆಲುಬಾಗಿ ನಿಲ್ಲಬೇಕಾದವರೇ ದೂರ ಉಳಿದರು’

‘ನಾನು ಯಾವತ್ತೂ ಇಂಥದ್ದೇ ಬೇಕು ಎಂದು ಕೇಳಿದವನಲ್ಲ. ಆದರೆ ಹಿಂದುಳಿದ ವರ್ಗದವನೊಬ್ಬ ಜಿಲ್ಲಾ ಘಟಕದ ಅಧ್ಯಕ್ಷನಾಗಲಿ ಎಂದು ನನ್ನನ್ನು ಆಯ್ಕೆ ಮಾಡಿದರು. ಆದರೆ ಯಾರು ನನಗೆ ಬೆನ್ನೆಲುಬಾಗಿ ನಿಲ್ಲಬೇಕಿತ್ತೋ ಅಂಥವರೇ ಒಂದು ವರ್ಷ ದೂರ ಉಳಿದರು’ ಎಂದು ನಿರ್ಗಮಿತ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಬೇಸರ ವ್ಯಕ್ತಪಡಿಸಿದರು.

‘ಶೇ 50ರಷ್ಟು ಅಲ್ಪಸಂಖ್ಯಾತರೇ ಇರುವ ದಕ್ಷಿಣ ಕ್ಷೇತ್ರದಲ್ಲಿ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೇನೆ. ಅದರ ಬಗ್ಗೆ ಬೇಸರವಿಲ್ಲ. ಸ್ಪರ್ಧಿಸು ಎಂದು ಪಕ್ಷ ಸೂಚಿಸಿದ್ದರಿಂದ ಸ್ಪರ್ಧಿಸಿದ್ದೇನೆ. ಕೆಲವರನ್ನು ಕಾಂಗ್ರೆಸ್‌ನಿಂದ ಕರೆತಂದು ಬಿಜೆಪಿಯಿಂದ ಎಲ್ಲ ಅಧಿಕಾರ ನೀಡಿದ್ದರೂ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೂತನ ಅಧ್ಯಕ್ಷರಿಗೆ ಪೂರ್ಣ ಬೆಂಬಲ ನೀಡುತ್ತೇನೆ. ಅವರು ಯಾವ ಕ್ಷಣದಲ್ಲಿ ಕರೆದರೂ ಬಂದು ಸಹಕಾರ ನೀಡುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು