ಅಭಿವೃದ್ಧಿಗೆ ಶ್ರಮಿಸಲು ಕಟಿಬದ್ಧರಾಗೋಣ

7
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್

ಅಭಿವೃದ್ಧಿಗೆ ಶ್ರಮಿಸಲು ಕಟಿಬದ್ಧರಾಗೋಣ

Published:
Updated:
Deccan Herald

ದಾವಣಗೆರೆ: ಜಿಲ್ಲೆಯು ಜನಪರ ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ಸರ್ವತೋಮುಖ ಅಭಿವೃದ್ಧಿ ಕಾಣಬೇಕಿದ್ದು, ಇದಕ್ಕಾಗಿ ಶ್ರಮಿಸಲು ಕಟಿಬದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್. ಶ್ರೀನಿವಾಸ ಕರೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪರಿಣಾಮಕಾರಿ ಸುಧಾರಣೆ ತಂದು ಅವುಗಳ ಉದ್ದೇಶಗಳನ್ನು ಈಡೇರಿಸೋಣ. ನಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ ದೇಶಪ್ರೇಮದ ಧ್ಯೋತಕವಾಗಿ ಸೌಹಾರ್ದದಿಂದ ಬಾಳೋಣ' ಎಂದು ಹೇಳಿದರು.

ಸವಾಲುಗಳನ್ನು ಸ್ವೀಕರಿಸುತ್ತಾ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿಶ್ವಕ್ಕೆ ಶಾಂತಿ, ಸೌಹಾರ್ದದ ಸಂದೇಶ ಸಾರುತ್ತಿದೆ. ದೇಶದ ಸ್ವಾತಂತ್ರ್ಯ ಚಳವಳಿಗೆ ದೊಡ್ಡ ಇತಿಹಾಸವಿದೆ. ಅದನ್ನೆಲ್ಲಾ ನೆನೆಯುತ್ತಾ ಮುಂದಿನ ಸವಾಲುಗಳನ್ನು ಎದುರಿಸಿ ಸಾಗಬೇಕು ಎಂದರು.

ಇದಕ್ಕೂ ಮುನ್ನ ಡಿಎಆರ್‌ ಪೊಲೀಸ್‌, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಎನ್‌ಸಿಸಿ, ಅಬಕಾರಿ ದಳ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಧ್ವಜವಂದನೆ ಸಲ್ಲಿಸಿದರು.

ನಂತರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಹಿರಿಯ ಹೋರಾಟಗಾರರನ್ನು ಗೌರವಿಸಲಾಯಿತು.

ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ, ಮೇಯರ್ ಶೋಭಾ ಪಲ್ಲಾಗಟ್ಟೆ, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷ್‌ಕುಮಾರ್, ಪಾಲಿಕೆ ಆಯುಕ್ತ ಮಂಜುನಾಥ ಆರ್‌. ಬಳ್ಳಾರಿ ಅವರೂ ಇದ್ದರು.

ದೇಶಾಭಿಮಾನ ಉಕ್ಕಿಸಿದ ನೃತ್ಯ ರೂಪ‍ಕ:

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯರೂಪಕಗಳು ಪ್ರೇಕ್ಷಕರಲ್ಲಿ ದೇಶಾಭಿಮಾನ ಉಕ್ಕಿಸಿದವು.

ಸಿದ್ಧಗಂಗಾ ಶಾಲೆ ವಿದ್ಯಾರ್ಥಿಗಳು  ‘ಹೇ ಮೇರೆ ವತನ್ ಕಿ ಲೊಗೋ’ ದೃಶ್ಯ ರೂಪಕದಲ್ಲಿ ಇಡೀ ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿಕೊಟ್ಟರು. 1957ರ ಸ್ವಾತಂತ್ರ್ಯ ಸಂಗ್ರಾಮ, ದಂಡಿ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಜಲಿಯಾನ ವಾಲ್‌ಬಾಗ್‌ ದುರಂತ, ಭಗತ್‌ಸಿಂಗ್‌ ನೇಣಿಗೇರಿದ ಪ್ರಸಂಗ... ಹೀಗೆ ಚಳವಳಿಯ ಪ್ರಮುಖ ಮಜಲುಗಳನ್ನು ಮಕ್ಕಳು ಅನಾವರಣಗೊಳಿಸಿದರು. ಸೈನಿಕ ಪ್ರಾಣ ಬಿಡುತ್ತಾ ಧ್ವಜವನ್ನು ನೆಟ್ಟಗೆ ನಿಲ್ಲಿಸುವ ದೃಶ್ಯಾವಳಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತು.

ಸೇಂಟ್‌ ಪಾಲ್ಸ್‌ ಕಾನ್ವೆಂಟ್‌, ಪುಷ್ಪಾ ಮಹಾಲಿಂಗಪ್ಪ, ಜೈನ್‌ ವಿದ್ಯಾಸಂಸ್ಥೆ ವಿದ್ಯಾರ್ಥಿಗಳೂ ಭಾವಪೂರ್ಣವಾಗಿ ನೃತ್ಯಗಳನ್ನು ಪ್ರದರ್ಶಿಸಿ, ಪ್ರೇಕ್ಷಕರ ಮನಗೆದ್ದರು. ಮಳೆಯಿಂದ ಕೆಸರಾಗಿದ್ದ ಮೈದಾನದಲ್ಲೇ ಅಳುಕದೇ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ದೇಶಾಭಿಮಾನ ಮೆರೆದರು.

1,500 ಅಡಿ ಉದ್ದದ ಧ್ವಜ ಮೆರವಣಿಗೆ:

ವಾಸವಿ ಯುವ ಸಂಘದ ನೇತೃತ್ವದಲ್ಲಿ 1,500 ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.

ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರು ಧ್ವಜ ಹಿಡಿದು ಕ್ರೀಡಾಂಗಣವನ್ನು ಒಂದು ಸುತ್ತು ಹಾಕಿದರು. ಡೊಳ್ಳು, ಖಡ್ಗ ಕುಣಿತಗಳು ಧ್ವಜ ಮೆರವಣಿಗೆಯ ವೈಭವ ಹೆಚ್ಚಿಸಿದ್ದವು.

‘ಹಸಿರು ಕರ್ನಾಟಕ’ಕ್ಕೆ ಚಾಲನೆ

ಮನೆ ಮನೆ ಅಂಗಳದಲ್ಲಿ, ಕಚೇರಿ ಆವರಣದಲ್ಲಿ ಹಸಿರು ಚಿಗುರಿಸುವ ’ಹಸಿರು ಕರ್ನಾಟಕ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಜೆಜೆಎಂಸಿ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಸಚಿವರ ಸುದ್ದಿಗೋಷ್ಠಿ ರದ್ದು:

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿ, ಮಾದರಿ ನೀತಿ ಸಂಹಿತೆ ಜಾರಿ ಇರುವ ಕಾರಣ ಜಿಲ್ಲಾ ಉಸ್ತುವಾರಿ ಸಚಿವರ ಸುದ್ದಿಗೋಷ್ಠಿ ರದ್ದು ಪಡಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಅಭಿವೃದ್ಧಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಸಂಪ್ರದಾಯ ಇತ್ತು.

ಬಹುಮಾನ ವಿತರಣೆ:

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಕರ್ಷಕ ಪಥಸಂಚಲನ ನಡೆಸಿದ ತಂಡಗಳಿಗೆ ಬಹುಮಾನ ಘೋಷಿಸಲಾಯಿತು.

ಪಡೆ: ಅಗ್ನಿಶಾಮಕ ದಳ (ಪ್ರ), ಅರಣ್ಯ ಇಲಾಖೆ (ದ್ವಿ), ಗೃಹರಕ್ಷಕ ದಳ (ತೃ)

ಎನ್‌ಸಿಸಿ: ಎಆರ್‌ಜಿ ಕಾಲೇಜು (ಪ್ರ), ಡಿಆರ್‌ಎಂ ವಿಜ್ಞಾನ ಕಾಲೇಜು (ದ್ವಿ), ಸೇಂಟ್‌ ಪಾಲ್ಸ್‌ ಶಾಲೆ (ತೃ)

ಶಾಲೆ: ಎಸ್‌ಟಿಜೆ ಹೈಸ್ಕೂಲ್ ಸ್ಪೆಷಲ್ ಟ್ರೂಪ್ (ಪ್ರ), ಪುಷ್ಪಾ ಮಹಲಿಂಗಪ್ಪ ಶಾಲೆ (ದ್ವಿ), ಮೌನೇಶ್ವರ ವಾಕ್‌ ಶ್ರವಣದೋಷವುಳ್ಳವರ ಶಾಲೆ (ತೃ)

ಸಮವಸ್ತ್ರ ಸ್ಪರ್ಧೆ: ಪಿ.ಎಸ್‌.ಎಸ್‌.ಇ.ಎಂ.ಆರ್‌.ಎಸ್‌. ತೋಳಹುಣಸೆ (ಪ್ರ), ಅನಮೋಲ್‌ ಶಾಲೆ (ದ್ವಿ), ಸರ್ಕಾರಿ ಪ್ರೌಢಶಾಲೆ ನಿಟುವಳ್ಳಿ (ತೃ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !