ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ರಾಮಪ್ಪ ವಿರುದ್ಧ ಸಿಡಿದೆದ್ದ ಲಿಂಗಾಯತರು

ನೇರ್ಲಗಿ ಗ್ರಾಮದಲ್ಲಿ ಬೈಗುಳದ ವಿಡಿಯೊ ವೈರಲ್‌ * ಕ್ಷಮೆಯಾಚನೆಗೆ ಒತ್ತಾಯ
Last Updated 25 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ನೇರ್ಲಗಿ ಗ್ರಾಮದಲ್ಲಿ ತಮ್ಮ ಸಮುದಾಯ ಹಾಗೂ ಇಷ್ಟ ದೇವನಾದ ಶಿವನನ್ನು ನಿಂದಿಸಿದ ಆರೋಪ ಎದುರಿಸುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಡಾ. ವೈ. ನಾಗಪ್ಪ ವಿರುದ್ಧ ಸಿಡಿದೆದ್ದಿರುವ ವೀರಶೈವ ಲಿಂಗಾಯತರು ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿ ಸಮಾಜದ ಶಕ್ತಿ ಪ್ರದರ್ಶಿಸಿದರು.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಹಲವು ನಾಯಕರು ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ವೀರಶೈವ ಲಿಂಗಾಯತ ಸಮಾಜದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಸಾರಿದರು.

ಮತದಾನದ ದಿನವಾದ ಏಪ್ರಿಲ್‌ 23ರಂದು ನೇರ್ಲಗಿ ಗ್ರಾಮದಲ್ಲಿ ರಾಮಪ್ಪ ಅವರು ಒಂದು ನಿರ್ದಿಷ್ಟ ಸಮುದಾಯ ಹಾಗೂ ಶಿವನನ್ನು ಅವಾಚ್ಯವಾಗಿ ನಿಂದಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ‘ಮನೆಯಲ್ಲಿ ಸುಮ್ಮನೆ ಇರಿ; ಅದನ್ನು ಬಿಟ್ಟು ರಸ್ತೆಗೆ ಬಂದರೆ ಏನು ಮಾಡುತ್ತೇವೆ ನೋಡಿ’ ಎಂದು ಬೆದರಿಕೆ ಹಾಕಿರುವುದೂ ವಿಡಿಯೊದಲ್ಲಿ ದಾಖಲಾಗಿತ್ತು. ಇದರ ಜೊತೆಯಲ್ಲೇ ರಾಮಪ್ಪ ಅವರು ಗ್ರಾಮದ ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಅಟ್ರಾಸಿಟಿ ಪ್ರಕರಣವನ್ನೂ ದಾಖಲಿಸಿದ್ದರು. ಇದು ಲಿಂಗಾಯತ ಸಮಾಜದವರನ್ನು ಕೆರಳಿಸಿದೆ.

ಲಿಂಗಾಯತ ವೀರಶೈವ ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ಲಿಂಗಾಯತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬೆಳಿಗ್ಗೆ 11ಕ್ಕೆ ಜಮಾವಣೆಗೊಂಡರು. ರಾಮಪ್ಪ ಮುಖಕ್ಕೆ ಕಪ್ಪು ಮಸಿಯಲ್ಲಿ ಕ್ರಾಸ್‌ ಮಾರ್ಕ್‌ ಹಾಕಿರುವ ಭಾವಚಿತ್ರ ಇರುವ ನೂರಾರು ನಾಮಫಕಗಳನ್ನು ಹಿಡಿದು ರಸ್ತೆಗೆ ಇಳಿದರು. ಹೋರಾಟ ಯಾವುದೇ ಸಮಾಜದ ವಿರುದ್ಧ ಅಲ್ಲ; ತಮ್ಮ ಸಮಾಜವನ್ನು ನಿಂದಿಸಿದ ವ್ಯಕ್ತಿಯ ವಿರುದ್ಧ ಎಂದು ಮುಖಂಡರು ಧ್ವನಿವರ್ಧಕದಲ್ಲಿ ಕೂಗುತ್ತಿದ್ದರು.

ಸುಮಾರು ಎರಡು ಸಾವಿರ ಜನ ಬಿಸಿಲನ್ನೂ ಲೆಕ್ಕಿಸದೆ ಅಂಬೇಡ್ಕರ್‌ ವೃತ್ತದಿಂದ ಜಯದೇವ ವೃತ್ತಕ್ಕೆ ಬಂದರು. ಸ್ವಾಮೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ವಾಹನಗಳ ಸಂಚಾರ ತಡೆದು ಜನರಿಗೆ ‘ಬಿಸಿ’ ಮುಟ್ಟಿಸಿದರು. ಜಯದೇವ ವೃತ್ತದಲ್ಲಿ ರಾಮಪ್ಪ ಅವರ ಭಾವಚಿತ್ರದ ಬ್ಯಾನರ್‌ ಹರಿದು ಬೆಂಕಿ ಹಾಕಿ ಕೇಕೇ ಹಾಕಿದರು. ‘ರಾಮಪ್ಪ’ ಹೆಸರಿನಲ್ಲಿರುವ ಗೌರವ ಸೂಚಕ ಅಕ್ಷರ ‘ಪ್ಪ’ವನ್ನು ತೆಗೆದು ‘ರಾಮ’ನಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಬಳಿಕ ಪ್ರವಾಸಿ ಮಂದಿರ ರಸ್ತೆಯ ಮೂಲಕ ಪಿ.ಬಿ. ರಸ್ತೆಯನ್ನು ತಲುಪಿದರು. ಉಪವಿಭಾಗಾಧಿಕಾರಿ ಕಚೇರಿಗೆ ಬಂದು ರಾಮಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್‌ ಗಿರೀಶ್‌ ಬಾಬು ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್‌, ‘ವೀರಶೈವ ಲಿಂಗಾಯತ ಶಾಂತಿಪ್ರಿಯ ಸಮಾಜವಾಗಿದೆ. ಆದರೆ, ರಾಮಪ್ಪ ನಮ್ಮ ಸಮಾಜವನ್ನು ಅವಹೇಳನ ಮಾಡಿದ್ದಾನೆ. ಜೊತೆಗೆ ನಮ್ಮ ದೇವರನ್ನೂ ನಿಂದಿಸಿದ್ದಾನೆ. ಲಿಂಗಾಯತ ಸಮಾಜದ ಮತಗಳನ್ನು ಪಡೆದು ಜಿಲ್ಲಾ ಪಂಚಾಯಿತಿ ಸದಸ್ಯ, ಅಧ್ಯಕ್ಷರಾಗಿರುವುದನ್ನು ಮರೆತಿದ್ದಿದ್ದಾರೆ’ ಎಂದು ಹರಿಹಾಯ್ದರು.

‘ನಮ್ಮ ಸಮಾಜದ ಸ್ವಾಮೀಜಿ ಎದುರಿಗೆ ಬಂದು ರಾಮಪ್ಪ ಕ್ಷಮೆಯಾಚಿಸಬೇಕು. ಜೊತೆಗೆ ನೇರ್ಲಿಗಿಯ ಬಸ್‌ನಿಲ್ದಾಣದ ಬಳಿಯೇ ಬಹಿರಂಗವಾಗಿ ಸಮಾಜದ ಜನರನ್ನು ಕ್ಷಮೆಯಾಗಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಮಾಜದ ಮುಖಂಡರಾದ ಎಪಿಎಂಸಿ ಸದಸ್ಯ ಗಿರೀಶ್‌ ಮುದ್ದೇಗೌಡ, ‘ಸಮಾಜವನ್ನು ನಿಂದಿಸಿದ ರಾಮಪ್ಪ ಅವರನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಇದರ ಕೆಟ್ಟ ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ. ಅಟ್ರಾಸಿಟಿ ಪ್ರಕರಣ ದಾಖಲಿಸಿದರೆ ನಾವು ಹೆದರುವುದಿಲ್ಲ. ರಾಮಪ್ಪ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಒಂದೆರಡು ದಿನಗಳಲ್ಲಿ ಸಮಾಜದ ಮುಖಂಡರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಹೊನ್ನೂರು ಮುನಿಯಪ್ಪ, ಶಿವನಳ್ಳಿ ರಮೇಶ್‌, ಶಿವಗಂಗಾ ಬಸವರಾಜ್‌, ಶಶಿಧರ್‌ ಯಮನಬೇತೂರು, ಲೋಕಿಕೆರೆ ನಾಗರಾಜ್‌, ಎಚ್‌.ಎನ್‌. ಶಿವಕುಮಾರ್‌, ಶೀಲಾಕುಮಾರ್‌, ಚನ್ನಬಸಪ್ಪ ಆಲೂರು, ಅಜ್ಜಂಪೂರಶೆಟ್ರು ಮೃತ್ಯುಂಜಯ, ಶಿವಯೋಗಪ್ಪ, ಕಡ್ಲೆಬಾಳು ಧನಂಜಯ ಹಾಗೂ ಸಮಾಜದ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ರಾಮ ಎಲ್ಲಿದ್ಯಪ್ಪಾ...?’

‘ನಿಖಿಲ್‌ ಎಲ್ಲಿದ್ಯಪ್ಪಾ?’ ಮಾದರಿಯಲ್ಲೇ ಪ್ರತಿಭಟನಾಕರರು ‘ರಾಮ ಎಲ್ಲಿದ್ಯಪ್ಪಾ?’ ಎಂದು ಘೋಷಣೆಗಳನ್ನು ಕೂಗುತ್ತ ಗೇಲಿ ಮಾಡಿದರು.

ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಆಕ್ರೋಶ ವ್ಯಕ್ತಪಡಿಸಿದರು. ರಾಮಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ‘ರಕ್ತವನ್ನು ಚಲ್ಲುತ್ತೇವೆ; ಸಮಾಜವನ್ನು ಕಟ್ಟುತ್ತೇವೆ’, ‘ಸುಮ್ಮನಿದ್ದರೆ ಶಾಂತಿ, ನಮ್ಮನ್ನು ಕೆಣಕಿದರೆ ಕ್ರಾಂತಿ’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಮಾಜದ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT