ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಮೇ 7ರಂದು ಮತದಾನ;16.79 ಲಕ್ಷ ಮತದಾರರು

ಲೋಕಸಭೆ ಚುನಾವಣೆ: 36,849 ಹೊಸ ಮತದಾರರ ಸೇರ್ಪಡೆ
Published 17 ಮಾರ್ಚ್ 2024, 7:23 IST
Last Updated 17 ಮಾರ್ಚ್ 2024, 7:23 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಲೋಕಸಭಾ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು. 

ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾಜಕೀಯ ಪಕ್ಷಗಳು, ಚುನಾಯಿತ ಪ್ರತಿನಿಧಿಗಳ ಫ್ಲೆಕ್ಸ್‌ಗಳನ್ನು ತೆರವು ಮಾಡಲಾಯಿತು. ಅಲ್ಲದೇ ಮಾದರಿ ನೀತಿ ಸಂಹಿತೆಯನ್ನು ಪಾಲಿಸಬೇಕು. ಚುನಾವಣಾ ಪ್ರಚಾರಕ್ಕಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು 24 ಗಂಟೆಯೊಳಗೆ ತೆರವುಗೊಳಿಸಬೇಕು’ ಎಂದು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  

36,849 ಹೊಸ ಮತದಾರರು

‘ಜಿಲ್ಲೆಯಲ್ಲಿ 19,507 ಯುವಕರು ಹಾಗೂ 17,339 ಯುವತಿಯರು ಸೇರಿ ಒಟ್ಟು 36,849 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಮತದಾರರು ಎಪಿಕ್ ಕಾರ್ಡ್ ಹೊಂದಿದ ಮಾತ್ರಕ್ಕೆ ಮತ ಚಲಾಯಿಸಲು ಅರ್ಹರಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವು ಪ್ರಗತಿಯಲ್ಲಿದ್ದು, ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕದ ಹಿಂದಿನ 10 ದಿನಗಳವರೆಗೆ ಸೇರ್ಪಡೆ ಹಾಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ’ ಎಂದು ಮಾಹಿತಿ ನೀಡಿದರು. 

ಚುನಾವಣಾಧಿಕಾರಿಗಳ ಕೊಠಡಿಯ ಸ್ಥಾಪನೆ:

‘ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ. 8ಎ ರಲ್ಲಿ ಚುನಾವಣಾಧಿಕಾರಿ ಕೊಠಡಿಯನ್ನು ಸ್ಥಾಪಿಸಿದ್ದು, ಇದೇ ಕೊಠಡಿಯಲ್ಲಿ ನಾಮಪತ್ರಗಳ ಸ್ವೀಕಕರಿಸಲಾಗುವುದು. ಚುನಾವಣೆಗೆ ಸ್ಪರ್ಧಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಯು ₹25,000 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ₹12,500 ಭದ್ರತಾ ಠೇವಣಿ ಇಡಬೇಕಾಗುತ್ತದೆ’ ಎಂದು ಹೇಳಿದರು.

ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸುವ ಎಲ್ಲಾ ವಾಹನಗಳಿಗೆ ಅಭ್ಯರ್ಥಿಯು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಬಳಸಬೇಕಿದ್ದು, ಪರವಾನಗಿಯ ಮೂಲ ಪ್ರತಿಯನ್ನು ವಾಹನದ ಮುಂಭಾಗದಲ್ಲಿ ಕಾಣುವಂತೆ ಪ್ರದರ್ಶಿಸಬೇಕಿರುತ್ತದೆ. ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಎನ್‌ಕೋರ್ ಸಾಫ್ಟ್‌ವೇರ್ ಮೂಲಕ ಪರವಾನಗಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಫ್ಲೆಕ್ಸ್ ಅಳವಡಿಸಲು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದು, ಅನುಮತಿ ನೀಡಿದ ಅವಧಿ ಮತ್ತು ಸ್ಥಳದಲ್ಲಿ ಮಾತ್ರ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಎಲ್ಲಾ ಸರ್ಕಾರಿ ಇಲಾಖೆಗಳ ವೆಬ್‍ಸೈಟ್, ಕಾರ್ಯಕ್ರಮಗಳ ಪ್ರದರ್ಶನದಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಬಳಸಿದ್ದಲ್ಲಿ ತೆರವು ಮಾಡಬೇಕು. ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವಂತಿಲ್ಲ, ಈಗಾಗಲೇ ಆರಂಭಿಸಿದ ಕಾಮಗಾರಿಗಳನ್ನು ಮುಂದುವರೆಸಬಹುದಾಗಿದೆ’ ಎಂದರು.

‘₹50,000 ನಗದು ಸಾಗಣೆ; ಸಾರ್ವಜನಿಕರು ಯಾವುದೇ ದಾಖಲೆಗಳಿಲ್ಲದೇ ₹50 ಸಾವಿರವರೆಗೆ ಪ್ರಯಾಣದ ವೇಳೆ ಕೊಂಡೊಯ್ಯಬಹುದಾಗಿದೆ. ಇನ್ನು ಹೆಚ್ಚಿನ ನಗದು ತೆಗೆದುಕೊಂಡು ಹೋಗಲು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ’ ಎಂದರು.

ಕಂಟ್ರೋಲ್ ರೂಂ ಸ್ಥಾಪನೆ:

‘ಮತದಾರರಿಗೆ ಆಮಿಷವೊಡ್ಡಿ ಅನಧಿಕೃತವಾಗಿ ಮದ್ಯ, ಹಣ ಹಾಗೂ ಇತರೆ ವಸ್ತುಗಳ ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿದಲ್ಲಿ ದೂರು ನೀಡಲು ಹಾಗೂ ಸಹಾಯಕ್ಕಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. 1950  ಹಾಗೂ 18004250380 ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಬಹುದಾಗಿದೆ. ಮತ್ತು ಸಿವಿಜಿಲ್ ಆಫ್ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಅದರ ಛಾಯಾಚಿತ್ರ, ವೀಡಿಯೋ ಮೂಲಕ ಮಾಹಿತಿಯನ್ನು ನೀಡಬಹುದಾಗಿದೆ’ ಎಂದು ಹೇಳಿದರು.  

ಮಾಧ್ಯಮಗಳಲ್ಲಿ ಬರುವ ಕಾಸಿಗಾಗಿ ಸುದ್ದಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ತೇಜೋವಧೆ ಮಾಡುವಂತಹ ಸುದ್ದಿಗಳನ್ನು ಪೋಸ್ಟ್ ಮಾಡುವುದರ ಮೇಲೆ ನಿಗಾವಹಿಸಲು ಮೀಡಿಯಾ ಮಾನಿಟರಿಂಗ್ ತಂಡ, ಸಾಮಾಜಿಕ ಜಾಲತಾಣಾ ವೀಕ್ಷಣಾ ತಂಡವನ್ನು ನೇಮಕ ಮಾಡಲಾಗಿದೆ. ಯಾವುದೇ ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮ ಹೊರತುಪಡಿಸಿ ಇತರೆ ಮಾಧ್ಯಮಗಳಲ್ಲಿ ಜಾಹಿರಾತು ನೀಡಲು ಎಂ.ಸಿ.ಎಂ.ಸಿ ಅನುಮತಿ ಕಡ್ಡಾಯವಾಗಿರುತ್ತದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಪಾಲಿಕೆ ಆಯುಕ್ತೆ ರೇಣುಕಾ ಉಪಸ್ಥಿತರಿದ್ದರು.

ಡಾ.ಎಂ.ವಿ ವೆಂಕಟೇಶ್
ಡಾ.ಎಂ.ವಿ ವೆಂಕಟೇಶ್
 ಉಮಾ ಪ್ರಶಾಂತ್
 ಉಮಾ ಪ್ರಶಾಂತ್
ಸುರೇಶ್‌ ಇಟ್ನಾಳ್‌
ಸುರೇಶ್‌ ಇಟ್ನಾಳ್‌

ವೆಚ್ಚದ ಮಿತಿ ₹ 95 ಲಕ್ಷ ನಿಗದಿ

ಒಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿದಾಗಿನಿಂದ ಫಲಿತಾಂಶ ಬರುವವರೆಗೆ ಒಬ್ಬ ಅಭ್ಯರ್ಥಿಯು ₹ 95 ಲಕ್ಷದವರೆಗೆ ವೆಚ್ಚ ಮಾಡಬಹುದಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು ಹಾಗೂ ವೆಚ್ಚಗಳ ಲೆಕ್ಕಪತ್ರ ಬರೆದಿಡಬೇಕಾಗುತ್ತದೆ’ ಎಂದು ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಪ್ರಚೋದನಾಕಾರಿ ಭಾಷಣದ ಮೇಲೂ ನಿಗಾ:

ಎಸ್‌ಪಿ ‘ಜಿಲ್ಲೆಯಲ್ಲಿ 15 ಹಾಗೂ 20 ಅಂತರ ಜಿಲ್ಲಾ ಸೇರಿ 35 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಹಣ ಹಾಗೂ ಮದ್ಯ ಸಾಗಣೆಯ ಮೇಲೆ ನಿಗಾ ಇಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು. ಸಾಮಾಜಿಕ ಮಾಧ್ಯಮಗಳ ಮೇಲೂ ನಿಗಾ ಇಟ್ಟಿದ್ದು ಪ್ರಚೋದನಾಕಾರಿ ಪೋಸ್ಟ್ ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇವುಗಳಲ್ಲದೇ ಪ್ರಚೋದನಾಕಾರಿ ಭಾಷಣದ ಮೇಲೂ ಕಣ್ಣಿಟ್ಟಿದ್ದು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಭಾಷಣ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಎಚ್ಚರಿಸಿದರು. ‘ರೌಡಿ ಶೀಟರ್‌ಗಳು ದುರ್ನಡತೆಯುಳ್ಳವರಿಗೆ ಮೇಲೆ ನಿಗಾ ವಹಿಸಲಾಗಿದ್ದು ಜಿಲ್ಲೆಯಾದ್ಯಂತ ಪರವಾನಗಿ ಹೊಂದಿರುವ 628 ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲು ಆದೇಶ ಹೊರಡಿಸಲಾಗಿದೆ. ಹೊಸದಾಗಿ ಪರವಾನಗಿ ನೀಡುವುದಾಗಲೀ ಲೈಸೆನ್ಸ್ ನವೀಕರಣ ಮಾಡುವುದಿಲ್ಲ’ ಎಂದು ಹೇಳಿದರು.

ಮತದಾನ ಪ್ರಮಾಣ ಹೆಚ್ಚಿಸಲು ಸಿದ್ಧತೆ

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡಿದ್ದರಿಂದ ಮತದಾನದ ಪ್ರಮಾಣ ಶೇ 5ರಷ್ಟು ಹೆಚ್ಚಾಗಿತ್ತು. ಈ ಬಾರಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲಾ ಮತದಾರರು ಮತದಾನ ಮಾಡಲು ಪ್ರೇರೇಪಣೆ ನೀಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದರು.   ‘ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಸಖಿ ಅಂಗವಿಕಲರು ಯುವ ಮತದಾರರು ಸಂಪ್ರದಾಯ ಧ್ಯೇಯ ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ. ಒಂದುವರೆ ತಿಂಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳುವಂತೆ ಮತಗಟ್ಟೆಯ ಸೌಲಭ್ಯ ಮಾಹಿತಿ ನೀಡಲಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT