ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಆಳಕ್ಕಿಳಿದ ‘ಕಮಲ’ದ ಬೇರು

ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಮೊದಲ ಬಾರಿಗೆ ಮುನ್ನಡೆ ಕಾಯ್ದುಕೊಂಡ ಸಂಸದ ಸಿದ್ದೇಶ್ವರ
Last Updated 24 ಮೇ 2019, 20:16 IST
ಅಕ್ಷರ ಗಾತ್ರ

ದಾವಣಗೆರೆ: ಈ ಬಾರಿಯ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಮುನ್ನಡೆಯೊಂದಿಗೆ ಗಳಿಸಿದ 6.51 ಲಕ್ಷಕ್ಕೂ ಹೆಚ್ಚು ಮತಗಳು ಜಿಲ್ಲೆಯಲ್ಲಿ ‘ಕಮಲ’ದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಇದುವರೆಗೆ ಈ ಕ್ಷೇತ್ರಕ್ಕೆ ನಡೆದ 12 ಚುನಾವಣೆಗಳ ಪೈಕಿ ಎಂಟರಲ್ಲಿ ಮಾತ್ರ ಬಿಜೆಪಿ ಸ್ಪರ್ಧಿಸಿತ್ತು. ಆ ಚುನಾವಣೆಗಳಲ್ಲಿ ಆರು ಬಾರಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಫಲಿತಾಂಶಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ಮೊದಲ ಬಾರಿಗೆ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

ಈ ಬಾರಿಯ ಮತಗಳಿಕೆ ಪ್ರಮಾಣ ಶೇ 54.63ಕ್ಕೆ ಏರಿದ್ದು, ಇದು ಬಿಜೆಪಿಯ ಇದುವರೆಗಿನ ವೈಯಕ್ತಿಕ ದಾಖಲೆಯಾಗಿದೆ. ಇದುವರೆಗೂ ಬಿಜೆಪಿ 50ರ ಗಡಿಯನ್ನು ದಾಟಿರಲಿಲ್ಲ. ಇದೇ ಮೊದಲ ಬಾರಿಗೆ ಒಟ್ಟು ಮತಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮತಗಳಿಸಿರುವ ಬಿಜೆಪಿ ಜಿಲ್ಲೆಯಲ್ಲಿ ‘ಕೇಸರಿ’ ಕೋಟೆ ಇನ್ನಷ್ಟು ಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯ ಲಾಭವೂ ಬಿಜೆಪಿಗೇ ಆಗಿರುವುದು ಎದ್ದುಕಾಣುತ್ತಿದೆ.

2014ರ ಲೋಕಸಭಾ ಚುನಾವಣೆ ನಡೆದಾಗ ಬಿಜೆಪಿಯ ಒಬ್ಬ ಶಾಸಕನೂ ಇರಲಿಲ್ಲ. ಅಂಥ ವಿಷಮ ಪರಿಸ್ಥಿತಿಯಲ್ಲೂ ದಾವಣಗೆರೆ ಉತ್ತರ (23,007 ಮತಗಳು), ಹರಪನಹಳ್ಳಿ (15,909) ಹೊನ್ನಾಳಿ (7,598), ಚನ್ನಗಿರಿ (858) ಕ್ಷೇತ್ರಗಳಲ್ಲಿ ‘ಕಮಲ’ ಪಕ್ಷ ಮುನ್ನಡೆ ಸಾಧಿಸಿ ಒಟ್ಟು 17,607 ಮತಗಳ ಅಂತರದಿಂದ ಗೆಲುವಿನ ಕಂಪು ಸೂಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅಲೆಯ ಜೊತೆಗೆ ಬಿಜೆಪಿಯ ಆರು ಶಾಸಕರ ಬಲದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿ, 1,69,702 ಮತಗಳ ಅಂತರದಿಂದ ಮತ್ತೆ ‘ಕಮಲ’ ಅರಳಿದೆ. ಬಿಜೆಪಿ ಶಾಸಕರು ಪೈಪೋಟಿಗೆ ಇಳಿದು ತಮ್ಮ ಕ್ಷೇತ್ರಗಳಲ್ಲಿ ಮತ ಬೇಟೆಯಾಡಿ ಸಿದ್ದೇಶ್ವರ ಅವರಿಗೆ ‘ವಿಜಯದ ಊಟ’ವನ್ನೇ ಉಣಬಡಿಸಿದ್ದಾರೆ.

ಒಂದು ಕೂಗು ಹಾಕಿದರೆ ಮನೆ ಮುಂದೆ 10 ಸಾವಿರ ಜನ ಸೇರುತ್ತಾರೆ ಎಂದು ಅಬ್ಬರಿಸಿದ್ದ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಕ್ಷೇತ್ರವಾಗಿದ್ದ ದಾವಣಗೆರೆ ಉತ್ತರದಲ್ಲೇ 54,106 ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿರುವುದು ಕಾಂಗ್ರೆಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಮಲ್ಲಿಕಾರ್ಜುನ ಅವರನ್ನು ಸೋಲಿಸಿದ್ದ ಮತದಾರರು ಈಗ ಇನ್ನೊಮ್ಮೆ ‘ಜನಾದೇಶ’ದ ಸಂದೇಶವನ್ನು ರವಾನಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಭಾವಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಹಲವು ವರ್ಷಗಳಿಂದ ಪ್ರತಿನಿಧಿಸುತ್ತಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ 8,516 ಮುನ್ನಡೆ ಸಿಕ್ಕಿರುವುದು ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಅಲ್ಪಸಂಖ್ಯಾತ ಮತಗಳೇ ಹೆಚ್ಚಿರುವ ದಾವಣಗೆರೆ ದಕ್ಷಿಣದಲ್ಲೂ ‘ಕೇಸರಿ’ ಪತಾಕೆ ಹಾರಿದ್ದು ಶಾಮನೂರು ಕುಟುಂಬದವರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರ ತವರು ಕ್ಷೇತ್ರವಾದ ಹೊನ್ನಾಳಿಯಲ್ಲಿ ತಮಗೆ ಒಳ್ಳೆಯ ಮುನ್ನಡೆ ಸಿಗಬಹುದು ಎಂದು ಲೆಕ್ಕ ಹಾಕಿದ್ದರು. ಆದರೆ, ಈ ಕ್ಷೇತ್ರದಲ್ಲಿ 13,375 ಮತಗಳ ಮುನ್ನಡೆ ಸಿಕ್ಕಿದ್ದು ಬಿಜೆಪಿಗೆ! ಕಳೆದ ಬಾರಿ ಇಲ್ಲಿ ಬಿಜೆಪಿಗೆ ಕೇವಲ 7,598 ಮತಗಳ ಮುನ್ನಡೆ ಸಿಕ್ಕಿತ್ತು.

ಕಳೆದ ಚುನಾವಣೆಯಲ್ಲಿ ಚನ್ನಗಿರಿಯಲ್ಲಿ ಬಿಜೆಪಿಗೆ ಕೇವಲ 858 ಮತಗಳ ಮುನ್ನಡೆ ಸಿಕ್ಕಿತ್ತು. ಈ ಬಾರಿ ಇಲ್ಲಿ ತಮ್ಮ ಪಕ್ಷಕ್ಕೆ ಒಳ್ಳೆಯ ಮುನ್ನಡೆ ಸಿಗಬಹುದು ಎಂಬ ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರವೂ ತಲೆಕೆಳಗಾಗಿದೆ. ನಿರೀಕ್ಷೆ ಮೀರಿ 19,692 ಮತಗಳ ಮುನ್ನಡೆ ಲಭಿಸಿರುವುದು ಕಾಂಗ್ರೆಸ್‌ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.

ಅಂಕಿ–ಸಂಖ್ಯೆ

54.63 % ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ

40.43 % ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ

ವಿಧಾನಸಭಾವಾರು ಸಿದ್ದೇಶ್ವರ್‌– ಮಂಜಪ್ಪ ಮತಗಳಿಕೆ

ವಿಧಾನಸಭಾ ಕ್ಷೇತ್ರ-ಜಿ.ಎಂ. ಸಿದ್ದೇಶ್ವರ–ಎಚ್‌.ಬಿ. ಮಂಜಪ್ಪ–ಬಿಜೆಪಿ ಲೀಡ್‌

ಜಗಳೂರು– 72,958– 56,968– 15,990

ಹರಪನಹಳ್ಳಿ– 83,226–61,210–22,016

ಹರಿಹರ– 80,779– 67,215– 13,584

ದಾವಣಗೆರೆ ಉತ್ತರ– 1,04,480– 50,374– 54,106

ದಾವಣಗೆರೆ ದಕ್ಷಿಣ– 70,765– 62,249– 8,516

ಮಾಯಕೊಂಡ– 80,955– 59,534– 21,421

ಚನ್ನಗಿರಿ– 78,343– 58,651– 19,692

ಹೊನ್ನಾಳಿ– 79,857– 66,482– 13,375

ಅಂಚೆ ಮತ– 1,643– 611– 1,032

ಒಟ್ಟು– 6,52,996 – 4,83,294– 1,69,702

ಬಿಜೆಪಿ–ಕಾಂಗ್ರೆಸ್‌ ಮತಗಳಿಕೆ ಪ್ರಮಾಣ (ಶೇಕಡಾವಾರು)

ಚುನಾವಣೆ ವರ್ಷ– ಬಿಜೆಪಿ – ಕಾಂಗ್ರೆಸ್‌

2019 –54.63 – 40.43

2014 – 46.53 – 44.95

2009 – 46.67 – 46.45

2004 – 40.69 – 37.10

1999 – 46.93 – 45.02

1998 – 40.82 – 42.21

1996 – 36.81 – 22.08

1991 – 39.78 – 39.85

1989 – ಸ್ಪರ್ಧಿಸಿಲ್ಲ – 52.31

1984 – ಸ್ಪರ್ಧಿಸಿಲ್ಲ – 54.09

1980 – ಸ್ಪರ್ಧಿಸಿಲ್ಲ – 55.58

1977 – ಸ್ಪರ್ಧಿಸಿಲ್ಲ – 59.24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT