ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃ ಭಾಷೆ ಕಾಪಾಡಿಕೊಂಡು, ಇತರ ಭಾಷೆ ಕಲಿಯಿರಿ’

Last Updated 22 ನವೆಂಬರ್ 2020, 5:19 IST
ಅಕ್ಷರ ಗಾತ್ರ

ದಾವಣಗೆರೆ: ನಮ್ಮ ಮಾತೃಭಾಷೆಯನ್ನು ಕಾಪಾಡಿಕೊಳ್ಳಬೇಕು. ಜತೆಗೆ ಇತರ ಭಾಷೆಗಳನ್ನು ಕಲಿಯುವುದು ಇಂದಿನ ಅಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಸಾಬಪ್ಪ ಹೇಳಿದರು.

ಆಜಾದ್ ನಗರ– ಮಾಗಾನಹಳ್ಳಿ ರಸ್ತೆಯ ಸ್ಟಾರ್ ಬುತ್ತಿ ಸ್ಟೀಲ್ ಟ್ರೇಡರ್ಸ್‌ನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ರಾಬ್ತಾಯೆ ಮಿಲ್ಲತ್ ಸಂಘಟನೆ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಭಾಷಾ ಸೌಹಾರ್ದ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಯುಗದಲ್ಲಿ ಬೇರೆ ಭಾಷೆಗಳನ್ನು ಕಲಿಯುವುದು ಅಗತ್ಯ. ಭಾಷೆಗಳಿಗೆ ಯಾವುದೇ ಭೇದ ಭಾವ ಇರುವುದಿಲ್ಲ. ಭಾಷೆ, ಧರ್ಮ, ವರ್ಗಗಳ ಹೆಸರಿನಲ್ಲಿ ನಾವು ಯಾವುದೇ ತಾರತಮ್ಯ ಮಾಡಕೂಡದು ಎಂದು ಪ್ರತಿಪಾದಿಸಿದರು.

ಭಾರತ ಅನೇಕ ಭಾಷೆ, ಜನಾಂಗಗಳಿರುವ ದೇಶವಾಗಿದ್ದು, ಭಾಷಾ ಸೌಹಾರ್ದ ಅಗತ್ಯವಾಗಿದೆ. ಪ್ರತಿಯೊಬ್ಬರೂ ಇನ್ನೊಂದು ಭಾಷೆಗೆ ಗೌರವ ಕೊಡುವುದರ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕು ಎಂದು ತಿಳಿಸಿದರು.

ವಿಶೇಷ ಅಭಿಯೋಜಕ ಶೌಕತ್ ಅಲಿ, ‘ಭಾಷೆಗಳು ನಮಗೆ ಸೇತುವೆಯಾಗಬೇಕೇ ಹೊರತು ಗೋಡೆಗಳಾಗಬಾರದು. ಭಾರತವು ಭಾಷಾ ಸೌಹಾರ್ದಕ್ಕೆ ಹೆಸರಾಗಿದೆ. ನಮ್ಮ ನಾಡು ಮತ್ತು ನಮ್ಮ ದೇಶ ಎನ್ನುವ ಮೂಲತತ್ವದಡಿಯಲ್ಲಿ ಎಲ್ಲರೂ ಸಾಗಬೇಕಾಗಿದೆ’ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣಕುಮಾರ್, ‘ಭಾಷೆಯೆನ್ನುವುದು ಮನುಕುಲಕ್ಕೆ ಮಾತ್ರ ಸೀಮಿತವಾಗಿದೆ. ಮನುಷ್ಯ ಉತ್ಪಾದಿಸುವ ಪ್ರತಿಯೊಂದು ಶಬ್ದಕ್ಕೂ ಅರ್ಥವಿದೆ. ಹೀಗೆ ಶಬ್ದವೇ ಒಂದು ಭಾಷೆಯಾಗಿ ಹೊರಬರುತ್ತದೆ’ ಎಂದು ಹೇಳಿದರು.

ಜಗತ್ತಿನಲ್ಲಿ ಎಷ್ಟೋ ಭಾಷೆಗಳಿಗೆ ಲಿಪಿಯೇ ಇರುವುದಿಲ್ಲ. ಅವು ಬಾಯಿಂದ ಬಾಯಿಗೆ ಹರಡುತ್ತಲೇ ಉಳಿದುಕೊಂಡು ಬಂದಿವೆ. ಭಾಷೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಭಾವೈಕ್ಯಕ್ಕೆ ದಾರಿ ಎಂದು ತಿಳಿಸಿದರು.

ಕರ್ನಾಟಕ ನಾಗರಿಕ ಹಿತರಕ್ಷಣಾ ಮತ್ತು ಸೇವಾ ಸಮಿತಿ ಅಧ್ಯಕ್ಷ ಬುತ್ತಿ ಹುಸೇನ್ ಪೀರ್‌ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ, ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್‌ನ ನಿರ್ದೇಶಕ ಎಸ್.ಜಿ. ಮೊಹಿಯುದ್ದೀನ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT