ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಮಾವಿಗೆ ಅಂಟು, ಕಪ್ಪುಜಿಗಿ ರೋಗಾಣು ಬಾಧೆ

ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ಗೇಣಿದಾರರಿಗೆ ಆಘಾತ
ಅಕ್ಷರ ಗಾತ್ರ

ಸಂತೇಬೆನ್ನೂರು: ಈ ಬಾರಿ ಮಾವು ಬೆಳೆ ಇಳುವರಿ ತೀವ್ರ ಕುಸಿತ ಕಂಡಿತ್ತು. ಕೆಲ ತೋಟಗಳಲ್ಲಿ ಸಾಧಾರಣ ಫಸಲು ಇತ್ತು. ಇಳುವರಿ ಕಡಿಮೆ ಇರುವ ಕಾರಣ ಗೇಣಿದಾರರು ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದರು. ಆದರೆ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನ ಫಸಲಿಗೆ ಅಂಟು, ಕಪ್ಪು ಜಿಗಿ ರೋಗಾಣು ಬಾಧೆ ಕಂಡು ಬಂದಿದ್ದು ಗೇಣಿದಾರರಿಗೆ ಆಘಾತ ನೀಡಿದೆ.

ರೈತರ ತೋಟಗಳನ್ನು ಗೇಣಿ ಪಡೆದ ವರ್ತಕರು ಬಿರುಸಿನ ಮಾವು ಕೊಯ್ಲು ನಡೆಸಿದ್ದಾರೆ. ಹಣ್ಣಿಗೆ ಬಂದ ಉತ್ಕೃಷ್ಟ ತಳಿಗಳಲ್ಲಿ ಆಲ್ಫಾನ್ಸೊ ಸಿಂಹಪಾಲು ಪಡೆದಿದೆ. ಮಳೆಯಿಂದಾಗಿ ಕಾಯಿಯ ಹೊರ ಭಾಗದಲ್ಲಿ ಕಪ್ಪು ಕಲೆ ಆವರಿಸಿದೆ. ಅಂಟಿನಂತ ದ್ರವ ಒಸರುತ್ತಿದೆ. ಮಳೆ ಹೆಚ್ಚಾದರೆ ಹುಳು ಬೀಳುವ ಸಾಧ್ಯತೆ ಇದೆ. ಇದರಿಂದಾಗಿ ಹೊರ ರಾಜ್ಯಗಳಿಗೆ ರಫ್ತು ಕಳಿಸಿದರೆ ತಿರಸ್ಕೃತಗೊಳ್ಳುತ್ತಿವೆ.

‘ಸದ್ಯ 50 ಟನ್ ಮಾವಿನ ಹಣ್ಣುಗಳನ್ನು ನಮ್ಮ ಮಂಡಿಯಲ್ಲಿ ಶೇಖರಿಸಲಾಗಿದೆ. ಮುಂಬಯಿ, ಪುಣೆಗೆ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದೆವು. ಫಸಲು ತಡವಾದ ಕಾರಣ ಮಳೆಗೆ ಸಿಕ್ಕಿವೆ. ರೋಗ ಬಾಧೆಯಿಂದ ಧಾರಣೆ ಕುಸಿದಿದೆ. ಬೇಡಿಕೆಯೂ ಕುಸಿದಿದೆ. ಈ ಬಾರಿ ₹ 50 ಲಕ್ಷದ ಗೇಣಿಗೆ ತೋಟ ಹಿಡಿದಿದ್ದೆವು. ಮಾವು ಮಾರಾಟದಿಂದ ₹ 30 ಲಕ್ಷ ಹಿಂಪಡೆಯುವುದು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಮಾವು ಖರೀದಿ ಮಂಡಿ ಮಾಲೀಕ ಇರ್ಫಾನ್.

‘ಕಡಿಮೆ ಫಸಲು ಇದ್ದರೂ ಉತ್ತಮ ಲಾಭದ ನಿರೀಕ್ಷೆ ಇತ್ತು. ರೋಗ ಬಾಧೆಯಿಂದ ಹಣ್ಣು ತಿರಸ್ಕೃತಗೊಳ್ಳುತ್ತಿವೆ. ತಮಿಳುನಾಡು, ಆಂಧ್ರ ಪ್ರದೇಶದ ಜ್ಯೂಸ್ ಫ್ಯಾಕ್ಟರಿಗಳಿಗೆ ನಿರಂತರ ಮಾವು ಸರಬರಾಜು ಮಾಡುತ್ತಿದ್ದೆವು. ಕಳೆದ ಬಾರಿ ಗ್ರಾಮದಲ್ಲಿ ನಿತ್ಯ 200 ಟನ್‌ಗಿಂತ ಹೆಚ್ಚು ಮಾವು ಹೊರ ರಾಜ್ಯಗಳಿಗೆ ಕಳುಸುತ್ತಿದ್ದೆವು. ಈ ಬಾರಿ ಶೇ 25ರಷ್ಟೂ ರಫ್ತು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ವರ್ತಕ ಮಸೂದ್.

‘ಪ್ರತಿ ಕೆ.ಜಿ. ಆಲ್ಫಾನ್ಸೊಗೆ ಸಗಟು ಮಾರಾಟದಲ್ಲಿ ₹ 32 ಇದೆ. ಉಳಿದ ತಳಿಗಳು ₹ 12ಕ್ಕೆ ಕುಸಿದಿವೆ. ಧಾರಣೆಯಲ್ಲಿ ಸ್ಥಿರತೆ ಇಲ್ಲ. ಒಟ್ಟಾರೆ ಗೇಣಿದಾರರು ಕೈಸುಟ್ಟುಕೊಂಡಿದ್ದಾರೆ’ ಎನ್ನುತ್ತಾರೆ ಲಾಲು, ನಾಗರಾಜ್.

ಶೇ 25 ರಷ್ಟು ಇಳುವರಿ ಮಾತ್ರ
‘ಹೋಬಳಿಯಲ್ಲಿ ಸದ್ಯ 1,600 ಹೆಕ್ಟೇರ್ ಮಾವು ಬೆಳೆ ಇದೆ. ಅದರಲ್ಲಿ ಶೇ 25 ರಷ್ಟು ಮರಗಳಲ್ಲಿ ಮಾವು ಇತ್ತು. ಅದೂ ಕೂಡ ಶೇ 25 ರಷ್ಟು ಇಳುವರಿ. ಕೆಲವು ಗೇಣಿದಾರರು ರೈತರಿಗೆ ಮುಂಗಡ ಹಣ ನೀಡಿ ಗೇಣಿ ಮಾಡಿದ್ದರು. ಇದರಿಂದಾಗಿ ಗೇಣಿ ಹಿಡಿದವರಿಗೆ ತೋಟಕ್ಕೆ ಸಿಂಪಡಿಸಿದ ಔಷಧ, ಒಕ್ಕಣೆ ಕೂಲಿ, ಸಾಗಣೆ ಖರ್ಚೂ ಸಿಗುತ್ತಿಲ್ಲ.

– ಮಸೂದ್, ಮಂಡಿ ಮಾಲೀಕ

**
ಐದು ಎಕರೆ ವ್ಯಾಪ್ತಿಯಲ್ಲಿ ಕೇವಲ 1 ಟನ್ ಆಲ್ಫಾನ್ಸೊ ಮಾವು ಇಳುವರಿ ಬಂದಿತ್ತು. ನೇರ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರತಿ ಕೆ.ಜಿ.ಗೆ ₹ 120 ರಂತೆ ಮಾರಾಟ ಮಾಡಿದ್ದೇನೆ.
-ತಿಪ್ಪೇಸ್ವಾಮಿ, ದೊಡ್ಡಬ್ಬಿಗೆರೆ ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT