ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಪಾದಯಾತ್ರೆ

Published 7 ಜೂನ್ 2023, 6:27 IST
Last Updated 7 ಜೂನ್ 2023, 6:27 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಮಾದಿಗ ಸಮುದಾಯದವರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಮಂಗಳವಾರ ಪಾದಯಾತ್ರೆ ನಡೆಸಲಾಯಿತು.

ಭಾನುವಳ್ಳಿ ಗ್ರಾಮದಿಂದ ಹರಿಹರ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿದ ವಸತಿ ರಹಿತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 

‘ಭಾನುವಳ್ಳಿ ಗ್ರಾಮದ ಎ.ಕೆ.ಕಾಲೋನಿಯಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿರುವ ಬಹುತೇಕ ಕುಟುಂಬಗಳು ನೆರಿಕೆ, ಕರಿ ಹೆಂಚು, ಕೆಂಪು ಹೆಂಚಿನ ಚಿಕ್ಕ ಮನೆಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದಾರೆ. ಮಕ್ಕಳ ಮದುವೆಯಾದ ನಂತರ ಅವರ ಕುಟುಂಬಗಳೂ ಆ ಮನೆಗಳಲ್ಲೇ ನೆಲೆಸಿವೆ. ಈ ಮನೆಗಳಲ್ಲಿ ಬಾಗಿಲು, ಕಿಟಕಿ, ಶೌಚಾಲಯ ಹಾಗೂ ಸ್ನಾನದ ಕೋಣೆಯ ಸೌಕರ್ಯವೂ ಇಲ್ಲ’ ಎಂದು ಕ.ದ.ಸಂ.ಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು. 

‘ವಸತಿ ಸೌಲಭ್ಯ ಒದಗಿಸುವಂತೆ ಕೋರಿ ಈ ಹಿಂದೆ ಶಾಸಕರು, ತಹಶೀಲ್ದಾರ್‌, ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಹೀಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು. 

ಮನೆ ಇಲ್ಲದವರಿಗೆ ವಸತಿ ಸೌಕರ್ಯ ಕಲ್ಪಿಸದೆ ಹೋದರೆ ತಾಲ್ಲೂಕು ಕಚೇರಿ ಎದುರು ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದರು. 

‘ಈ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ವಸತಿ ಸೌಕರ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಭರವಸೆ ನೀಡಿದರು.  

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಕೆ.ಕನ್ನಪ್ಪ, ದ.ಸಂ.ಸ ತಾಲ್ಲೂಕು ಸಂಘಟನಾ ಸಂಚಾಲಕ ಸಿ.ಚೌಡಪ್ಪ, ಭಾನುವಳ್ಳಿ ಗ್ರಾಮದ ನಿವಾಸಿಗಳಾದ ಕೆಂಚಪ್ಪ, ವಿ.ಬಿ.ಹಳದಪ್ಪ, ಹನುಮಂತಪ್ಪ, ಸಂತೋಷ್, ಚೌಡಮ್ಮ, ರತ್ನಮ್ಮ, ದುರುಗಮ್ಮ, ಹನುಮಕ್ಕ, ಪುಷ್ಪ, ನಾಗಮ್ಮ, ಸಾವಿತ್ರ, ಸುಶೀಲಮ್ಮ, ನಾಗಮ್ಮ ಹನುಮಮ್ಮ, ಲಕ್ಷ್ಮಣಪ್ಪ, ನೀಲಪ್ಪ, ಹರೀಶ್ ಹಾಗೂ ನೂರಕ್ಕೂ ಹೆಚ್ಚು ನಿವಾಸಿಗಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT