ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೇ ಸಾಹಿತ್ಯ ಮೇಳ' ದಾವಣಗೆರೆಯಲ್ಲಿ ನಡೆಸಲು ನಿರ್ಧಾರ

Last Updated 15 ಮಾರ್ಚ್ 2020, 13:35 IST
ಅಕ್ಷರ ಗಾತ್ರ

ದಾವಣಗೆರೆ: ಲಡಾಯಿ ಪ್ರಕಾಶನ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಮಟ್ಟದ ಮೇ ಸಾಹಿತ್ಯ ಮೇಳ ಈ ಬಾರಿ ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ನಗರದ ನಿರೀಕ್ಷಣಾ ಮಂದಿರದಲ್ಲಿ ಭಾನುವಾರ ನಡೆದ ಒಡನಾಡಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಶುದ್ಧ ಸಾಹಿತ್ಯ ಮೇಳ ಎಂದು ಕೆಲವನ್ನು ಕರೆಯಲಾಗುತ್ತದೆ. ಅಂಥ ಮೇಳ ಇದಲ್ಲ. ಸಾಹಿತ್ಯದ ಜತೆಗೆ ಸೌಹಾರ್ದ, ಗೌರವಯುತ ಸಮಾಜವನ್ನು ಕಟ್ಟುವ ಜನರ ಮೇಳ ಇದು. ಆಳುವವರ ಮರ್ಜಿಯಲ್ಲಿ, ಉದ್ಯಮಿಗಳ ಮುಲಾಜಿನಲ್ಲಿ, ರಾಜಕಾರಣಿಗಳ ಹಣದಲ್ಲಿ ಮೇ ಸಾಹಿತ್ಯ ಮೇಳ ನಡೆಸುವುದಿಲ್ಲ. ರಾಜ್ಯದ ವಿವಿಧ ಕಡೆಗಳಿಂದ ಬರುವ ಜನರು ನೀಡುವ ಸಹಾಯ, ಸಂಘಟಕರು, ಜನಸಾಮಾನ್ಯರ ನೆರವಿನಿಂದ ನಡೆಸಲಾಗುತ್ತಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ್‌ ಸೂಳಿಬಾವಿ ತಿಳಿಸಿದರು.

ಎರಡು ದಿನಗಳ ಕಾಲ ಸಾಹಿತ್ಯದ ಚರ್ಚೆಯ ಜತೆಗೆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆಯೂ ಚರ್ಚೆಮ ಸಂವಾದ, ಗೋಷ್ಠಿಗಳು ನಡೆಯಲಿವೆ. ಮೇ 16 ಮತ್ತು 17ರಂದು ಮೇ ಸಾಹಿತ್ಯ ಮೇಳ ನಡೆಸಲಾಗುವುದು ಎಂದು ವಿವರಿಸಿದರು.

ಧಾರವಾಡ, ಗದಗಗಳಿಗೆ ಸೀಮಿತವಾಗದೇ ರಾಜ್ಯದ ಎಲ್ಲ ಕಡೆಗಳಲ್ಲಿ ನಡೆಯಬೇಕು. ದಾವಣಗೆರೆಯಲ್ಲಿ ನಡೆಯುತ್ತಿರುವ ಎಲ್ಲ ಪ್ರಗತಿಪರ ಹೋರಾಟಗಳಿಗೆ ಬೆಂಬಲವಾಗಿ ಈ ಬಾರಿ ಇಲ್ಲಿ ನಡೆಸಬೇಕು ಎಂದು ಬಿ. ಶ್ರೀನಿವಾಸ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸಗಳು ನಡೆಯುತ್ತಿವೆ. ಇಂಥ ಮೇಳಗಳ ಮೂಲಕ ವಿಷ ಬೀಜ ಕಿತ್ತು ಹಾಕುವ, ಮಕ್ಕಳನ್ನು ತಿದ್ದುವ ಕೆಲಸಗಳಾಗಬೇಕು ಎಂದು ಅನಿಸ್‌ಪಾಷಾ ಸಲಹೆ ನೀಡಿದರು.

ಮೇಳದ ರೂಪುರೇಷೆ ಮಾಡಲು ಸಮಿತಿಗಳನ್ನು ರಚಿಸಬೇಕು. ಯುವಜನರು ಹೆಚ್ಚು ಮಂದಿ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಸಾಹಿತಿ ಕಲೀಂ ಪಾಷಾ ತಿಳಿಸಿದರು.

ಸೈದ್ಧಾಂತಿಕ ಹೋರಾಟದ ಕೇಂದ್ರ ದಾವಣಗೆರೆ. ಈ ಮೇಳದ ಮೂಲಕ ಇಲ್ಲಿನ ಹೋರಾಟಗಾರರು ಮತ್ತೆ ಕ್ರಿಯಾಶೀಲರಾಗಬೇಕು. ವಿವಿಧ ಸಂಘಟನೆಗಳ ಹೆಸರಲ್ಲಿ ಮತ್ತೆ ಮತ್ತೆ ನಾವೇ ಕಾಣಿಸಿಕೊಳ್ಳುವಂತಾಗಿದೆ. ಈ ಮೇಳದ ಮೂಲಕ ಜನಪರ ಹೋರಾಟಗಳಿಗೆ ಹೊಸಬರು ಬರುವಂತಾಗಲಿ ಎಂದು ಉಪನ್ಯಾಸಕ ಡಾ. ಎ.ಬಿ. ರಾಮಚಂದ್ರಪ್ಪ ಆಶಯ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಮಲ್ಲಿಕಾರ್ಜುನ್ ಕಲ್ಮರಳಿ, ಮಹಾಂತೇಶ್, ರಾಘು ದೊಡ್ಮನಿ, ಆವರಗೆರೆ ರುದ್ರಮುನಿ, ಷಣ್ಮುಖಪ್ಪ, ಸತೀಶ್‌ ಅರವಿಂದ್‌, ಶ್ರೀನಿವಾಸ್‌, ಬಸವರಾಜ ಪೂಜಾರ, ಶಬೀರ್ ಅಲಿ, ಶಿವಕುಮಾರ್, ಗಂಗಾಧರ್ ಅವರೂ ತಿಳಿಸಿದರು.

ಮಾರ್ಚ್‌ 22ರಂದು ಬೆಳಿಗ್ಗೆ 10.30ಕ್ಕೆ ಬಿಇಇಟಿ ಕಾಲೇಜು ರಸ್ತೆ ಹೇಮಾವತಿ ವಸತಿನಿಲಯದ ಮುಂದೆ ಇರುವ ಜೆ.ಎಚ್‌. ಪಟೇಲ್‌ ಕಾಲೇಜಿನ ಸಭಾಂಗಣದಲ್ಲಿ ಈ ಸಾಹಿತ್ಯ ಮೇಳದ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT