ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧ ಹಕ್ಕಾಗಲಿ’

ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹ
Last Updated 14 ಸೆಪ್ಟೆಂಬರ್ 2021, 6:59 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧ ಹಕ್ಕಾಗಬೇಕು ಹಾಗೂ ಮೆಕ್ಕೆಜೋಳ ಸೇರಿ 23 ಬೆಳೆಗಳಿಗೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ಇಲ್ಲಿನ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಜಯದೇವ ವೃತ್ತದಿಂದ ಬೈಕ್ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಸಮಿತಿ‌ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ‘ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಖರೀದಿ ಮಾಡುವ ಕಂಪನಿ, ಖಾಸಗಿ ಖರೀದಿದಾರರ ಪರವಾನಗಿ ರದ್ದು ಮಾಡಿ, ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಪ್ರತಿ ವರ್ಷ 23 ಬೆಳೆಗಳಿಗೆ ಬೆಂಬಲ ಬೆಲೆ
ಯನ್ನು ಘೋಷಿಸುತ್ತಿದ್ದು, ಅದರಲ್ಲಿ ಭತ್ತ, ಮೆಕ್ಕೆಜೋಳ, ರಾಗಿ, ಶೇಂಗಾ, ಹತ್ತಿ, ಸೂರ್ಯಕಾಂತಿ ಸೇರಿವೆ. ಮೆಕ್ಕೆಜೋಳಕ್ಕೆ ಒಂದು ಕ್ವಿಂಟಲ್‌ಗೆ ₹ 1,860 ಬೆಂಬಲ ಬೆಲೆ ಘೋಷಿಸಿದ್ದು, ಆದರೆ ಖಾಸಗಿ ಖರೀದಿದಾರರು ಮಾರುಕಟ್ಟೆಯಲ್ಲಿ ₹ 1,400ಕ್ಕೆ ಖರೀದಿಸುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ.ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡರೂ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ರೈತ ಮುಖಂಡರಾದ ಗುಮ್ಮನೂರು ಬಸವರಾಜ್, ಎಸ್.ಎಚ್. ಪ್ರಕಾಶ್, ನಾಗರಾಜು, ಕೆ. ಹನುಮಂತಪ್ಪ, ಹುಚ್ಚವ್ವನಹಳ್ಳಿ ಪ್ರಕಾಶ್, ಜಗಳೂರು ಚಿರಂಜೀವಿ, ದ್ಯಾಮಜ್ಜರ ಹನುಮಂತ, ಯಲೋದಹಳ್ಳಿ ರವಿಕುಮಾರ್, ಬೇವಿನಹಳ್ಳಿ ರವಿಕುಮಾರ್, ಕೆಂಚಮನಹಳ್ಳಿ ಹನುಮಂತ, ನೀರ್ಥಡಿ ತಿಪ್ಪೇಶ್, ನಾಗೇಂದ್ರಪ್ಪ ನಾಗನೂರು, ಮಧುರಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT