ಸೋಮವಾರ, ಜನವರಿ 20, 2020
24 °C
ಮುಟ್ಟಾದ ಮಹಿಳೆಯರನ್ನು ಗ್ರಾಮಕ್ಕೆ ಕರೆತಂದ ಪೂರ್ಣಿಮಾ ಶ್ರೀನಿವಾಸ್‌

ಮುಟ್ಟಾದವರನ್ನು ಹೊರಗಿಡುವ ಗೊಲ್ಲರಹಟ್ಟಿ ಕಂದಾಚಾರಕ್ಕೆ ತಿಲಾಂಜಲಿಯಿಟ್ಟ ಶಾಸಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು (ದಾವಣಗೆರೆ): ಸಮೀಪದ ಹಿರೇಗಂಗೂರು ಗೊಲ್ಲರಹಟ್ಟಿಯಲ್ಲಿನ ಮುಟ್ಟಾದ ಮಹಿಳೆಯರನ್ನು ಹೊರಗಿಡುವ ಪದ್ಧತಿಯನ್ನು ಪ್ರತ್ಯಕ್ಷ ಕಂಡ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಅವರನ್ನು ಗ್ರಾಮಕ್ಕೆ ಪ್ರವೇಶ ಮಾಡಿಸಿ ಶತಮಾನದ ಕಂದಾಚಾರಕ್ಕೆ ತಿಲಾಂಜಲಿಯಿತ್ತರು.

ವೈಕುಂಠ ಏಕಾದಶಿ ನಿಮಿತ್ತ ಸೋಮವಾರ ಗೊಲ್ಲರಹಟ್ಟಿಯಲ್ಲಿ ಸಾಮೂಹಿಕವಾಗಿ ಆಚರಿಸುವ ಪೂಜಾ ಸಮಾರಂಭಕ್ಕೆ ಬಂದ ಸಂದರ್ಭದಲ್ಲಿ ಅವರು ಮೌಢ್ಯ ನಿವಾರಣೆಗೆ ಮುನ್ನುಡಿ ಬರೆದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿತ್ರದುರ್ಗ, ತುಮಕೂರು, ದಾವಣಗೆರೆ ಹಾಗೂ ಶಿವಮೊಗ್ಗದ ಕೆಲಭಾಗಗಳಲ್ಲಿ ಮುಟ್ಟು, ಹೆರಿಗೆ ಆದ ಮಹಿಳೆಯರನ್ನು ಗ್ರಾಮದಿಂದ ಹೊರಗೆ ಇಡುವ ಪದ್ಧತಿ ಜಾರಿಯಲ್ಲಿದೆ. ಹಿಂದಿನ ಕಾಲದಲ್ಲಿ ಸೌಕರ್ಯಗಳಿಲ್ಲದ ಕಾರಣ ಇದು ರೂಢಿಯಲ್ಲಿರಬಹುದು. ಈಗಾಗಲೇ ರಾಜ್ಯದಾದ್ಯಂತ ಸಂಚರಿಸಿ ಶೇ 50ರಷ್ಟು ಗೊಲ್ಲರಹಟ್ಟಿಗಳಲ್ಲಿ ಈ ಕಂದಾಚಾರವನ್ನು ಬಿಡಿಸಿದ್ದೇನೆ. ಕೆಲವರು ಸ್ವಯಂ ಪ್ರೇರಿತರಾಗಿ ಬಿಟ್ಟಿದ್ದಾರೆ’ ಎಂದು ತಿಳಿಸಿದರು.

‘ಗ್ರಾಮದಲ್ಲಿ ಇನ್ನು ಮುಂದೆ ಇಂಥ ಮೌಢ್ಯಾಚರಣೆ ನಿಲ್ಲಿಸಿ ಎಂದು ಗ್ರಾಮಸ್ಥರ ಮನವೊಲಿಸಲಾಯಿತು. ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ಯಾರಾದರೂ ದೂಷಿಸಬಹುದು ಎಂದು ಭಯ ವ್ಯಕ್ತಪಡಿಸಿದ ಮಹಿಳೆಯರಿಗೆ ಧೈರ್ಯ ತುಂಬಲಾಗಿದೆ.

ಚನ್ನಗಿರಿ ಶಾಸಕರು ಗೊಲ್ಲರಹಟ್ಟಿ ಅಭಿವೃದ್ಧಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಹಿರಿಯೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕುಗಳ ಗೊಲ್ಲರಹಟ್ಟಿಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಹಾಗಾಗಿ ಬದಲಾವಣೆ ಕಾಣುತ್ತಿಲ್ಲ. ಗೊಲ್ಲ ಸಮುದಾಯದವರ ಅಭಿವೃದ್ಧಿಗೆ ಬದ್ಧಳಾಗಿದ್ದೇನೆ. ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ. ವಾಗೀಶ್, ಶಾಂತಕುಮಾರಿ ಶಶಿಧರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಉಷಾ ಶಶಿಧರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು