ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಫೋಟೊ ಶೂಟ್ ಗೀಳು: ಇಬ್ಬರು ನೀರು ಪಾಲು

ಹರಿಹರ: ಹರಗನಹಳ್ಳಿ ಹಳ್ಳದಲ್ಲಿ ದುರ್ಘಟನೆ
Last Updated 2 ಅಕ್ಟೋಬರ್ 2022, 4:42 IST
ಅಕ್ಷರ ಗಾತ್ರ

ಹರಿಹರ: ಟಿಕ್‌ಟಾಕ್ ಫೋಟೊ ಶೂಟ್‌ಗೆಂದು ಹೋಗಿದ್ದ ಮೂವರು ಯುವಕರಲ್ಲಿ ಇಬ್ಬರು ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ತಾಲ್ಲೂಕಿನ ಹರಗನಹಳ್ಳಿ ಬಳಿಯ ಸೂಳೆಕೆರೆ ಚೆಕ್ ಡ್ಯಾಂನಲ್ಲಿ ನಡೆದಿದೆ. ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

ನಗರದ ಆಶ್ರಯ ಕಾಲೊನಿ ನಿವಾಸಿಗಳಾದ ಮಲ್ಲೇಶಪ್ಪ ಅವರ ಪುತ್ರ ಪವನ್ (25) ಮತ್ತು ಹನುಮಂತಪ್ಪ ಅವರ ಪುತ್ರ ಪ್ರಕಾಶ್ (24) ಮೃತರು.

ವಿವರ: ಪವನ್, ಪ್ರಕಾಶ್ ಮತ್ತು ಹೇಮಂತ್ ಸ್ನೇಹಿತರಾಗಿದ್ದರು. ಪವನ್ ದಾವಣಗೆರೆಯ ಎಸ್‌ಎಸ್ ಮಾಲ್‌ನಲ್ಲಿ, ಪ್ರಕಾಶ್ ಹರಿಹರದ ಮಾಲ್ ಸೆಂಟರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹರಗನಹಳ್ಳಿ ಸಮೀಪ ಚೆಕ್ ಡ್ಯಾಂಗೆ ಬುಧವಾರ ಮಧ್ಯಾಹ್ನ 2ಕ್ಕೆ ಪೋಟೊಶೂಟ್ ಮಾಡಲೆಂದು ಹೋಗಿದ್ದರು ಎಂದು ತಿಳಿದು ಬಂದಿದೆ.

ಹಳ್ಳದ ಚೆಕ್ ಡ್ಯಾಂ ಕಟ್ಟೆಯ ಮೇಲೆ ನಡೆಯುವಾಗ ಮೊದಲು ಪ್ರಕಾಶ್ ಹಳ್ಳಕ್ಕೆ ಜಾರಿ ಬಿದ್ದಿದ್ದಾರೆ. ಈಜು ಬಾರದ ಪ್ರಕಾಶ್ ರಕ್ಷಣೆಗೆ ಪವನ್ ಮತ್ತು ಹೇಮಂತ್ ಧಾವಿಸಿದ್ದಾರೆ. ಪ್ರಕಾಶ್ ಮತ್ತು ಪವನ್ ಇಬ್ಬರೂ ನೀರಿನ ಸೆಳೆವಿಗೆ ಸಿಲುಕಿದ್ದಾರೆ. ಹೇಮಂತ್ ಈಜಿ ದಡ ಸೇರಿದರು ಎನ್ನಲಾಗಿದೆ.

ನಿರ್ಜನ ಪ್ರದೇಶವಾಗಿದ್ದರಿಂದ ಬೇರೆಯವರ ಸಹಾಯ ಸಿಕ್ಕಿಲ್ಲ. ಇಬ್ಬರು ನೀರು ಪಾಲಾದ ಮಾಹಿತಿ ಅವರ ಕುಟುಂಬದವರಿಗೆ ತಿಳಿಸಲು ಹಿಂದೇಟು ಹಾಕಿದ ಹೇಮಂತ್ ತನ್ನ ಮನೆ ಸೇರಿಕೊಂಡಿದ್ದಾನೆ. ತಡರಾತ್ರಿಯಾದರೂ ಮನೆಗೆ ಬಾರದ್ದರಿಂದ ಪ್ರಕಾಶ್ ಮತ್ತು ಪವನ್ ಪೋಷಕರು ಹೇಮಂತ್‌ ಅವರನ್ನು ವಿಚಾರಿಸಿದಾಗ ಎಲ್ಲಿಗೆ ಹೋಗಿದ್ದಾರೋ ತಿಳಿಯದು ಎಂದಿದ್ದಾರೆ. ಈ ಇಬ್ಬರ ಪೋಷಕರು ಗುರುವಾರ ನಗರ ಠಾಣೆಯಲ್ಲಿ ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಶುಕ್ರವಾರ ಆಶ್ರಯ ಬಡಾವಣೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಈ ಮೂವರೂ ಒಂದೇ ಬೈಕ್‌ನಲ್ಲಿ ತೆರಳಿರುವ ದೃಶ್ಯ ಕಂಡು ಬಂದಿದೆ. ಆಗ ಪೊಲೀಸರು ಶುಕ್ರವಾರ ಸಂಜೆ ಹೇಮಂತನ್ನು ಕರೆಯಿಸಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ರಾತ್ರಿಯೇ ಪೊಲೀಸರು ಹಳ್ಳದ ಸ್ಥಳಕ್ಕೆ ಹೋದಾಗ ಇವರ ಬೈಕ್ ಹಾಗೂ ಚಪ್ಪಲಿ ಅಲ್ಲಿ ಕಂಡು ಬಂದಿದೆ.

ಶನಿವಾರ ಹಳ್ಳ ಸೇರುವ ತುಂಗಭದ್ರಾ ನದಿಯಲ್ಲಿ ಪರಿಶೀಲನೆ ಮಾಡುತ್ತಾ ಬಂದಾಗ ಮಧ್ಯಾಹ್ನ 1ಕ್ಕೆ ಹರ್ಲಾಪುರ ಬಳಿ ಪ್ರಕಾಶ್ ಹಾಗೂ ಸಂಜೆ 4ಕ್ಕೆ ಹರಿಹರೇಶ್ವರ ದೇವಸ್ಥಾನ ಹಿಂಭಾಗ ಪವನ್ ಮೃತದೇಹ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT