ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯ ಸೆರೆ

Last Updated 29 ಸೆಪ್ಟೆಂಬರ್ 2022, 2:36 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಗ್ರಾಮದ ಹೊರ ಹೊಲಯದ ಡಬಲ್ ಗೇಟ್ ಸುತ್ತಲಿನ ಪ್ರದೇಶದಲ್ಲಿ ಒಂಟಿಯಾಗಿ ಹೊಲ, ಗದ್ದೆಗಳಿಗೆ ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯ ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ.

ಮುಷ್ಯದ ಹಾವಳಿಯ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ತಿಂಗಳು ಗಟ್ಟಲೆ ಕಾರ್ಯಚರಣೆ ಮಾಡಿದರೂ ಇದು ಸೆರೆ ಸಿಕ್ಕಿರಲಿಲ್ಲ. ಊರಿಂದ ಊರಿಗೇ ಪ್ರಯಾಣ ಬೆಳೆಸಿದ್ದ ಈ ಮುಷ್ಯ ಅಕ್ಕ ಪಕ್ಕದ ಗ್ರಾಮಗಳಾದ ಸದಾಶಿವಪುರ, ಬೀರಗೊಂಡನಹಳ್ಳಿ, ಉಜ್ಜನೀಪುರ, ಹಿರೇಬಾಸೂರು, ಐನೂರು, ಮಲ್ಲಿಕಟ್ಟೆ ಗ್ರಾಮದ ಜನಗಳಿಗೂ ತೊಂದರೆ ಉಂಟು ಮಾಡಿತ್ತು.

ಇದರ ಉಪಟಳ ಹೆಚ್ಚಾದಾಗ ಜನ ಸ್ಥಳಿಯ ಗ್ರಾಮ ಪಂಚಾಯಿತಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿ ಅರಣ್ಯ ಇಲಾಖೆ ಮತ್ತು ಸ್ಥಳಿಯ ರೈತರೊಂದಿಗೆ ಕೈ ಜೋಡಿಸಿ ಕಾರ್ಯಾಚರಣೆ ಮುಂದುವರಿಸಿತ್ತು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜೊಳಚಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಚಾರಿ ತಂಡವನ್ನು ಕರೆಸಲಾಗಿತ್ತು. ಅವರು  ಮಂಗಳವಾರ ರಾತ್ರಿ ಗ್ರಾಮದ ಹೊರ ಹೊಲಯದ
ರೈತ ಹಿದಾಯಿತುಲ್ಲಾ ಅವರ ಜಮೀನಿನಲ್ಲಿ ಬೋನ್‌ ಇರಿಸಿದ್ದರು.

‘ಮೆಕ್ಕೆಜೋಳವು ಮುಷ್ಯಗಳಿಗೆ ಒಳ್ಳೆಯ ಆಹಾರವಾಗಿರುವುದರಿಂದ ಈ ಭಾಗದಲ್ಲಿ ಸುಮಾರು 15 ಮುಷ್ಯಗಳಿರಬಹುದು. ಇವುಗಳು ಒಂದಡೆಯಿಂದ ಇನ್ನೊಂದೆಡೆ
ಆಹಾರ ಹುಡುಕಿಕೊಂಡು ಬರುತ್ತವೆ. ಅವು ಸಾಮಾನ್ಯವಾಗಿ ಯಾರಿಗೂ ತೊಂದರೆ ಮಾಡುವುದಿಲ್ಲ. ಮನುಷ್ಯರಿಗೆ ಹೆದರಿ ದಾಳಿ ಮಾಡಿರುವ ಸಾಧ್ಯತೆ ಇದೆ. ಈ ಹಿಂದೆ ಭೈರನಹಳ್ಳಿಯಲ್ಲಿ, ದಾಗಿನಕಟ್ಟೆ, ಬನ್ನಿಕೋಡ್‌ ಅಲ್ಲಿರು ಮುಷ್ಯಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಅರಣ್ಯಾಧಿಕಾರಿ ಜಿತೇಂದ್ರ ತಿಳಿಸಿದರು.

ಮುಷ್ಯದ ಎರಡು ಗುಂಪು ಈ ಭಾಗದಲ್ಲಿವೆ. ಇದರಲ್ಲಿ ಮಾವಿನಕೋಟೆಯಲ್ಲಿ ವಾಸವಾಗಿರುವ ಐದು ಮುಷ್ಯಗಳ ಗುಂಪಿನಲ್ಲಿದ್ದ ಈ ಮುಷ್ಯವು ಮನುಷ್ಯರ ಮೇಲೆ ದಾಳಿ ಮಾಡುತ್ತಿತ್ತು. ಸೆರೆಸಿಕ್ಕಿರುವುದು ದಾಳಿ ಮಾಡುತ್ತಿದ್ದ ಮುಷ್ಯವೇ ಹೌದು ಎಂದು ಕಚ್ಚಿಸಿಕೊಂಡ ಸ್ಥಳೀಯರು ಗುರುತು ಹಿಡಿದರು. ಇದನ್ನು ವನ್ಯ ಜೀವಿ ವಲಯಕ್ಕೆ ಬಿಡಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಮೈಲಾರಸ್ವಾಮಿ
ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ್‍ನಾಡಿಗ್, ಸದಸ್ಯರಾದ ರೇಣುಕ ಕುಂಬಾರ್, ಶುಂಠಿ ಕರಿಬಸಪ್ಪ, ಪಿಡಿಒ ರಮೇಶ್ ಕೊಳ್ಳೂರ್, ಕಾರ್ಯದರ್ಶಿ ಫಾಲಾಕ್ಷಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾಗರಾಜ್, ಬೀಮಪ್ಪ, ಮಿರ್ಜಾ, ರೈತರಾದ ಹಿದಾಯಿತುಲ್ಲಾ, ಪಕಾಲಿ ಮಲ್ಲಿಕಾರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT