ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬರಗಾಲದ ನಡುವೆಯೂ ರೈತನ ಚಿಂತೆ ದೂರ ಮಾಡಿದ ನೈಸರ್ಗಿಕ ಕೃಷಿ ಪದ್ಧತಿ

Published 29 ಫೆಬ್ರುವರಿ 2024, 6:28 IST
Last Updated 29 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ದಾವಣಗೆರೆ: ಬರಗಾಲದಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಅಕ್ಕಪಕ್ಕದ ತೋಟಗಳು ನೀರು ಬೇಡುತ್ತ ಒಣಗಿದ್ದರೂ, ಇವರ ಅಡಿಕೆ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ಮಟಮಟ ಮಧ್ಯಾಹ್ನ ಸೂರ್ಯ ಪ್ರಖರವಾಗಿರುವ ಹೊತ್ತಲ್ಲೂ ಇವರ ತೋಟದೊಳಗೆ ಕಾಲಿಟ್ಟರೆ ತಂಪಾದ ವಾತಾವರಣ ಚಕಿತಗೊಳಿಸುತ್ತದೆ.

ಈ ತೋಟದ ಅಡಿಕೆ ಗಿಡಗಳಿಗೆ ತಿಂಗಳಿಗೊಮ್ಮೆ ನೀರು ಹರಿಸುವುದು ವಿಶೇಷ. ಅತಿ ಬಿಸಿಲಿದ್ದರೂ ನೀರು ಹರಿಸುವ ಅಗತ್ಯವೂ ಒದಗಿ ಬಂದಿಲ್ಲ.

ಇದಕ್ಕೆ ಕಾರಣ ತೋಟಗಾರಿಕೆಯಲ್ಲಿ ಇವರು ಅನುಸರಿಸಿದ ವಿಶಿಷ್ಟ ಮಾದರಿ. ತಮ್ಮ ಜಮೀನಿನಲ್ಲಿರುವ ಮಣ್ಣಿನ ಜೈವಿಕ  ಶಕ್ತಿ ಕಾಪಾಡಿಕೊಂಡಿದ್ದೇ ಈ ‘ಅಚ್ಚರಿ’ ಮತ್ತು ‘ಮೋಡಿ’ಗೆ ಕಾರಣ.

ಇದು ಬರಗಾಲಕ್ಕೆ ಹೆಸರಾಗಿರುವ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ತಾರೀಹಳ್ಳಿ ಗ್ರಾಮದ ರೈತ ಎಸ್‌.ಡಿ. ಮಹದೇವಪ್ಪ ಅವರ ತೋಟದ ದೃಶ್ಯ. ಇವರ ಊರು ಮಾತ್ರವಲ್ಲ ಸುತ್ತಮುತ್ತಲಿನ ಹತ್ತೂರಿನ ರೈತರು, ‘ಕೊಳವೆಬಾವಿ ಬತ್ತಿದೆ’ ಎಂಬ ಚಿಂತೆಯಲ್ಲಿ ಮುಳುಗಿದ್ದರೆ, ಇವರಿಗೆ ಮಾತ್ರ ನೀರಿನ ಕುರಿತು ಎಳ್ಳಷ್ಟೂ ಚಿಂತೆ ಇಲ್ಲ. ಭಾರಿ ಬಿಸಿಲು ಮತ್ತು ಬರಗಾಲದ ಕಾರಣಕ್ಕೆ ಒಂದೊಮ್ಮೆ ಅಂತರ್ಜಲ ಮಟ್ಟ ಕುಸಿದು, ಇವರ ತೋಟದಲ್ಲಿರುವ ಕೊಳವೆ ಬಾವಿಗಳಲ್ಲಿ ನೀರು ಬತ್ತಿದರೂ ಸಾವಿರಾರು ಅಡಿಕೆ ಗಿಡಗಳು ಒಣಗಿಬಿಡಬಹುದು ಎಂಬ ಆತಂಕ ಇವರಲ್ಲಿ ಇಲ್ಲವೇ ಇಲ್ಲ.

ಇವರ ಅಡಿಕೆ ತೋಟದಲ್ಲಿನ 15 ವರ್ಷದ ಗಿಡಗಳು ಫಸಲು ನೀಡಲಾರಂಭಿಸಿ ಏಳೆಂಟು ವರ್ಷಗಳೇ ಕಳೆದಿವೆ. ಆದರೆ, ಈ ವರ್ಷ ತೋಟದಲ್ಲಿನ ಇಳುವರಿ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಬಹುದು ಎಂಬ ನಿರೀಕ್ಷೆ ಇವರಲ್ಲಿದೆ.

‘ನಮ್ಮೂರ ಪಕ್ಕದಲ್ಲಿರುವ ದಿದ್ದಿಗೆ ಗ್ರಾಮ ಮೂಲದ, ಮೈಕ್ರೋಬಿ ಫೌಂಡೇಷನ್‌ನ ಮಹದೇವಪ್ಪ ಅವರು ನೀಡಿದ ಸಲಹೆಯನ್ನು ಅನುಸರಿಸಿದ್ದೇ ನನ್ನನ್ನು ಚಿಂತೆಯಿಂದ ಮುಕ್ತಗೊಳಿಸಿದೆ. ಅವರು ನೀಡಿದ ದ್ರಾವಣವನ್ನು ಜೀವಾಮೃತದೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಿದ್ದೇ ಇದಕ್ಕೆ ಕಾರಣ’ ಎಂದು ರೈತ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೋಟವನ್ನು ಸ್ವಚ್ಛಗೊಳಿಸಿ, ಅಡಿಕೆ ಗಿಡಗಳ ಅಕ್ಕಪಕ್ಕದಲ್ಲಿ ಹುಲ್ಲೂ, ಸೊಪ್ಪೂ–ಸೊದೆಯೂ, ಹುಳು– ಹುಪ್ಪಟೆಯೂ ಇರದಂತೆ ನೋಡಿಕೊಂಡು, ರಾಸಾಯನಿಕ ಗೊಬ್ಬರ, ಕೀಟನಾಶಕ ಸಿಂಪಡಿಸಿ ಫಳಫಳ ಹೊಳೆಯುವಂತೆ ಇಟ್ಟುಕೊಂಡಿದ್ದೆ. ಮೂರು ದಿನಕ್ಕೊಮ್ಮೆ ಹನಿ ನೀರಾವರಿ ಪದ್ಧತಿ ಅಡಿ ನೀರು ಹರಿಸುತ್ತಿದ್ದೆ. ತೋಟದಲ್ಲಿ ಒಂದು ಹುಳುವೂ ಇರಲಿಲ್ಲ. ಹಕ್ಕಿ–ಪಕ್ಷಿಗಳ ಕಲರವ ಕೇಳುತ್ತಿರಲಿಲ್ಲ. ಬೇಸಿಗೆಯಲ್ಲಿ ತೋಟದೊಳಗೆ ಕಾಲಿಡದಷ್ಟು ಶುಷ್ಕ ಹವೆ ಇರುತ್ತಿತ್ತು. ಈಗ ತಂಪು ವಾತಾವರಣವಿದೆ’ ಎಂದು ಅವರು ಹೇಳಿದರು.

‘ಗೋವಿನ ಸಗಣಿಯಿಂದ ಜೀವಾಮೃತ ತಯಾರಿಸಿ, ದಿದ್ದಿಗೆ ಮಹದೇವಪ್ಪ ಸಲಹೆ ಮೇರೆಗೆ ಡಾ.ಸಾಯಿಲ್‌ (ಮೌಲ್ಯವರ್ದಿತ ದ್ರಾವಣ) ಮಿಶ್ರಣ ಮಾಡಿ ಐದಾರು ದಿನ ಕಳಿತ ಮೇಲೆ ಪ್ರತಿ ಗಿಡಕ್ಕೆ 1 ಲೀಟರ್‌ನಷ್ಟು ಸಿಂಪಡಿಸಿದ್ದೇವೆ. ಅಲಸಂದೆ, ಸೆಣಬು, ಕಾಡು ಹೆಸರು ಬೀಜ ಬಿತ್ತಿದ್ದರಿಂದ ಹಸಿರೆಲೆ ಗೊಬ್ಬರ ದೊರೆಯುವಂತಾಗಿದೆ. ಇದರಿಂದ ಎರೆಹುಳುಗಳ ಸಂಖ್ಯೆಯೂ ಹೆಚ್ಚಿ, ಮಣ್ಣು ಸಡಿಲಗೊಂಡಿದೆ. ರಂದ್ರಗಳುಂಟಾಗಿ ನೀರು ಭೂಮಿಯಲ್ಲಿ ಸುಲಭಕ್ಕೆ ಇಂಗುತ್ತಿದೆ. ತೋಟದ ತ್ಯಾಜ್ಯವನ್ನೂ, ಕಳೆಯನ್ನೂ ತೆಗೆಯದೇ ಅಲ್ಲೇ ಕಳಿಯಲು ಬಿಟ್ಟು ಮಲ್ಚಿಂಗ್‌ ಪದ್ಧತಿ ಅನುಸರಿಸಿದ್ದರಿಂದ ಬಿಸಿಲು ನೇರವಾಗಿ ಭೂಮಿಗೆ ತಾಕದೇ ಸದಾ ತೇವಾಂಶ ಇರುತ್ತದೆ. ಈಗ 30 ದಿನಕ್ಕೊಮ್ಮೆ ಗಿಡಗಳಿಗೆ ನೀರು ಬಿಡುತ್ತಿದ್ದೇವೆ. ಇದು ರೈತರಿಗೆ ಅನುಕೂಲಕರ’ ಎಂದು ಅವರು ತಮ್ಮ ಅನುಭವ ಬಿಚ್ಚಿಟ್ಟರು.

ಅಧಿಕ ನೀರನ್ನು ಬಯಸುವ ಅಡಿಕೆ ತೋಟ ಹೊಂದಿದವರು, ಕೊಳವೆ ಬಾವಿ ಬತ್ತಿದ್ದರಿಂದ ಮತ್ತೆಮತ್ತೆ ಕೊಳವೆ ಬಾವಿ ಕೊರೆಸಿ ಹಣ ಕಳೆದುಕೊಳ್ಳದೇ, ಭೂಮಿಯ ಜೈವಿಕ ಶಕ್ತಿ ವರ್ಧನೆಗೆ ಒತ್ತು ನೀಡಬೇಕಿದೆ ಎಂದೂ ಅವರು ಸಲಹೆ ನೀಡಿದರು.

ಮಾಹಿತಿಗಾಗಿ ಎಸ್‌.ಡಿ. ಮಹದೇವಪ್ಪ ಅವರ ಸಂಪರ್ಕ ಸಂಖ್ಯೆ:98809–10492

ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸದೇ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ಭೂಮಿಯ ಜೈವಿಕ ಶಕ್ತಿ ಹೆಚ್ಚಿಸಿರುವ ಅನೇಕ ರೈತರು ತೀವ್ರ ಬರಗಾಲದಲ್ಲಿ ಅಡಿಕೆ ಸೇರಿದಂತೆ ತಮ್ಮ ವಿವಿಧ ರೀತಿಯ ತೋಟವನ್ನು ಕಳೆದುಕೊಳ್ಳುವ ಆತಂಕದಿಂದ ದೂರವಿದ್ದಾರೆ. ರೈತ ಸಮೂಹ ವಿಶಿಷ್ಟ. ಸಾಂಪ್ರದಾಯಿಕ ವಿಧಾನ ಅನುಸರಿಸಿದಲ್ಲಿ ವಿಷಮುಕ್ತ ಆಹಾರ ದೊರೆಯಲಿದ್ದು ಅಧಿಕ ನೀರನ್ನು ಅವಲಂಬಿಸುವ ಪ್ರಮೇಯವೂ ಇರುವುದಿಲ್ಲ.
–ಮಹದೇವಪ್ಪ ದಿದ್ದಿಗೆ ಜಿಲ್ಲಾ ಸಂಚಾಲಕ ಮೈಕ್ರೋಬಿ ಫೌಂಡೇಷನ್‌ ದಾವಣಗೆರೆ

Quote -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT