ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದಲ್ಲಿ ನಿರ್ಲಕ್ಷ್ಯ: ಹಕ್ಕುಗಳ ಉಲ್ಲಂಘನೆ

ವೈದ್ಯರು, ಅಧಿಕಾರಿಗಳ ಕಾರ್ಯವೈಖರಿಗೆ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ಅಸಮಾಧಾನ
Last Updated 14 ಜೂನ್ 2019, 16:02 IST
ಅಕ್ಷರ ಗಾತ್ರ

ದಾವಣಗೆರೆ: ‘ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ನಿಮ್ಮ ಈ ರೀತಿಯ ವರ್ತನೆ ಅಂಗವೈಕಲ್ಯ ಎದುರಿಸುತ್ತಿರುವ ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ. ಸಂಪನ್ಮೂಲ ಹಾಗೂ ಸಿಬ್ಬಂದಿಯನ್ನು ಕೊಟ್ಟರೂ ಕೆಲಸ ಮಾಡದಿದ್ದರೆ ಹೇಗೆ, ನಿಮ್ಮ ಮಕ್ಕಳಿಗೆ ಹೀಗೇ ಆದರೆ ಸುಮ್ಮನಿರುತ್ತಿದ್ದಿರಾ..?’

ಇಲ್ಲಿನ ಚಿಗಟೇರಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದು ಹೀಗೆ.

ಕನಿಷ್ಠ ಶೇ 50ರಷ್ಟಾದರೂ ಕೆಲಸ ಆಗದಿದ್ದರೆ ಹೇಗೆ, ಮಕ್ಕಳ ಬಗ್ಗೆ ಮಾನವೀಯತೆ ಇರಬೇಕು. ಕೆಲಸದಲ್ಲಿ ಮಾಡದೇ ಇರುವ ನಿಮ್ಮ ವರ್ತನೆ ಇದೇ ರೀತಿ ವೈಫಲ್ಯ ಮುಂದುವರೆದರೆ ಕೋರ್ಟ್‌ಗೆ ಕೇಸ್‌ ಹಾಕಿ ಸಮನ್ಸ್‌ ಕಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಂಗವಿಕರನ್ನು ಗುರುತಿಸಲು ಸರ್ಕಾರ ಹಲವು ಸಂಸ್ಥೆಗಳನ್ನು ರೂಪಿಸಿದ್ದರೂ ಸಮನ್ವಯ ಹಾಗೂ ಸಹಕಾರದ ಕೊರತೆಯಿಂದಾಗಿ ಅವರಿಗೆ ನೆರವು ತಲುಪುತ್ತಿಲ್ಲ ಎಂದು ಅಧಿಕಾರಿಗಳು ಹಾಗೂ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆರು ವರ್ಷದೊಳಗಿನ ಮಕ್ಕಳು ಅಂಗವೈಕಲ್ಯಕ್ಕೆ ಸಿಲುಕಿದ ಬಗ್ಗೆ ಇಲ್ಲವೇ ಅವರಿಗೆ ನೆರವು ನೀಡಿದ ಬಗ್ಗೆ ಶೇ 10ರಷ್ಟು ಅಂಕಿ ಅಂಶವೂ ಅಧಿಕಾರಿಗಳ ಬಳಿ ಇಲ್ಲ ಎಂದು ಆಕ್ಷೇಪಿಸಿದರು.

ಆರು ವರ್ಷದೊಳಗಿನ ಎಷ್ಟು ಮಕ್ಕಳಲ್ಲಿ ಅಂಗವೈಕಲ್ಯ ಗುರುತಿಸಲಾಗಿದೆ, ಎಷ್ಟು ಪೋಷಕರಿಗೆ ಅಂಗವೈಕಲ್ಯ ಎದುರಿಸುವ ಬಗ್ಗೆ ತರಬೇತಿ ನೀಡಲಾಗಿದೆ, ಶಸ್ತ್ರಚಿಕಿತ್ಸೆಯ ನಂತರ ಮರು ಪರಿಶೀಲನೆ ನಡೆಸಲಾಗಿದೆ, ಎಂಬ ಪ್ರಶ್ನೆಗೆ ವೈದ್ಯರು, ಅಧಿಕಾರಿಗಳಿಂದ ಯಾವುದೇ ಉತ್ತರ ದೊರೆಯದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.

ಅಂಗವಿಕಲರಿಗೆ ನೆರವಾಗಲು ಕೇಂದ್ರ ಸರ್ಕಾರದಿಂದ 7 ಯೋಜನೆ ಇವೆ. ಅಂಗವೈಕಲ್ಯ ಗುರುತಿಸಲು 50 ವೈದ್ಯಕೀಯ ಅಧಿಕಾರಿಗಳಿದ್ದಾರೆ. ಶಿಕ್ಷಣ ಇಲಾಖೆ ಬಿಐಆರ್‌ಟಿಗಳನ್ನು ಹೊಂದಿದೆ. ನಗರದಲ್ಲೇ ಸಿಆರ್‌ಸಿ ಕೇಂದ್ರವಿದ್ದು, ಅಲ್ಲಿ 19 ಸಿಬ್ಬಂದಿ ಇದ್ದಾರೆ. ದಾವಣಗೆರೆ ನಗರ ಒಂದರಲ್ಲೇ ಕನಿಷ್ಠ ₹2 ಕೋಟಿ ಅಂಗವಿಕಲರ ನೆರವಿಗೆ ಲಭ್ಯವಿದೆ. ಈ ಸೌಲಭ್ಯಗಳನ್ನೆಲ್ಲ ಬಳಸಿಕೊಂಡರೆ ಅಂಗವಿಕಲರು ಸ್ವತಂತ್ರವಾಗಿ ಬದುಕುವಂತೆ ಮಾಡಬಹುದು. ಆದರೆ, ಈ ಬಗ್ಗೆ ಶೇ 50ರಷ್ಟು ಸಹ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಕ್ಕಳಲ್ಲಿ ಅಂಗವೈಕಲ್ಯ ಕಂಡು ಬಂದಾಗ ಅದನ್ನು ನಿಭಾಯಿಸುವುದು ಬಡ ತಂದೆ - ತಾಯಿಗಳಿಗೆ ಗೊತ್ತಿರುವುದಿಲ್ಲ. ವೈದ್ಯರು ಕನಿಷ್ಠ ಹತ್ತು ನಿಮಿಷ ಆಪ್ತ ಸಮಾಲೋಚನೆ ನಡೆಸಿದರೆ ಅವರಿಗೆ ಸಹಾಯವಾಗುತ್ತದೆ. ಶ್ರವಣದೋಷವುಳ್ಳ ಮಕ್ಕಳ ಜೊತೆ ಸಂವಾದ ನಡೆಸುವ ಬಗ್ಗೆ ಅಮ್ಮನಿಗೆ ಕಲಿಸಿಕೊಟ್ಟರೆ ಮಗುವಿನ ಜೀವನವೇ ಬದಲಾಗುತ್ತದೆ. ಪೋಷಕರು ಇಲ್ಲಿಗೆ ಬರದಿದ್ದರೆ ಅವರ ಬಳಿಗೆ ನೀವೆ ಹೋಗಿ’ ಎಂದು ಸಲಹೆ ನೀಡಿದರು.

‘ಕಿವುಡ ಮಕ್ಕಳನ್ನು ಆರಂಭದಲ್ಲೇ ಗುರುತಿಸಿದರೆ ಶಿಕ್ಷಣಕ್ಕೆ ನೆರವಾಗುತ್ತದೆ. ವರ್ಷಕ್ಕೆ ಸುಮಾರು 12ಸಾವಿರ ಶಿಶುಗಳು ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸುತ್ತಿದ್ದಾರೆ. ಇವರಲ್ಲಿ ಕನಿಷ್ಠ 120 ಮಕ್ಕಳಿಗಾದರೂ ಶ್ರವಣ ದೋಷ ಸಮಸ್ಯೆ ಇರುತ್ತದೆ. ಇವರನ್ನು ಆರು ವರ್ಷದವರೆಗೆ ಗುರುತಿಸಿ ನೆರವಾಗುವುದು ಕಷ್ಟದ ಕೆಲಸವೇನೂ ಅಲ್ಲ. ಮೂರು ವರ್ಷ ನಿರಂತರವಾಗಿ ಈ ಬಗ್ಗೆ ಕೆಲಸ ಮಾಡಿದರೆ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ’ ಎಂದು ಹೇಳಿದರು.

ಹುಟ್ಟುವಾಗ ದೃಷ್ಟಿಹೀನತೆ ಕಾಣಿಸಿಕೊಳ್ಳುವುದು ಈಗ ಕಡಿಮೆಯಾಗಿದೆ. ಮಂದ ದೃಷ್ಟಿಯ ಸಮಸ್ಯೆ ಮಾತ್ರ ಉಳಿದುಕೊಂಡಿದೆ. ಇಂತಹ ಮಕ್ಕಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣಿನ ನಾಲ್ಕು ವೈದ್ಯರಿದ್ದರೂ ಬಡವರಿಗೆ ನೆರವಾಗುತ್ತಿಲ್ಲ.

ಜಿಲ್ಲಾ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ಕೇಂದ್ರದ ವೈದ್ಯ ಡಾ. ಎಚ್. ನಾಗರಾಜ್, ‘ತಿಂಗಳಿಗೆ 25-30 ಮಕ್ಕಳಿಗೆ ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರ ನೀಡಲಾಗುತ್ತಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜು ‘ಕೇವಲ ಪ್ರಮಾಣ ಪತ್ರ ನೀಡುವುದಷ್ಟೇ ಅಲ್ಲ, ಪೋಷಕರಿಗೆ ಇಂತಹ ಮಕ್ಕಳನ್ನು ನಿರ್ವಹಿಸುವ ಬಗ್ಗೆ ತರಬೇತಿ ಕೊಡಿ. ಕಾರ್ಯಗಾರಗಳನ್ನು ಮಾಡಿ. ಆಗ ಮಾನಸಿಕ ಸಮಸ್ಯೆಯಿಂದ ಹೊರ ಬಂದು ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಚಿಗಟೇರಿ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ವಿಜಯ್ ಕುಮಾರ್, ‘1,658 ಜನರಿಗೆ ಜೀವನ ಕೌಶಲ ಶಿಕ್ಷಣ ಕೊಡಿಸಲಾಗಿದೆ’ ಎಂದು ತಿಳಿಸಿದರು.

ಚಿಕಿತ್ಸೆ ಪಡೆದ ನಂತರ ಇವರಲ್ಲಿ ಎಷ್ಟು ಜನ ಸ್ವತಂತ್ರವಾಗಿ ಬದುಕುತ್ತಿದ್ದಾರೆ? ಇವರಲ್ಲಿ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ ಎಂಬ ಬಸವರಾಜ್ ಪ್ರಶ್ನೆಗೆ ವಿಜಯ್ ಕುಮಾರ್ ಬಳಿ ಉತ್ತರ ಇರಲಿಲ್ಲ.

‘ಆರ್‌ಬಿಎಸ್‌ಕೆ (ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ)ದಡಿ ಜಿಲ್ಲೆಯಲ್ಲಿ 50 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅಂಕಿ ಅಂಶಗಳ ಕೊರತೆ ಇದೆ. 47 ಸಾವಿರ ಮಕ್ಕಳ ತಪಾಸಣೆ ಮಾಡಿದರೂ ಕೇವಲ 4-5 ಅಂಗವೈಕಲ್ಯ ಇರುವವರು ದೊರೆತಿದ್ದಾರೆ ಎಂಬ ವರದಿ ನೀಡಲಾಗಿದೆ’ ಎಂದು ಬಸವ
ರಾಜ್ ತರಾಟೆಗೆ ತೆಗೆದುಕೊಂಡರು.

ವಾರದಲ್ಲಿ ಕ್ರಿಯಾ ಯೋಜನೆ: ಸಭೆ ಮುಗಿದ ಬಳಿಕ ಮಾತನಾಡಿದ ಡಿ.ಎಚ್.ಒ. ತ್ರಿಪುಲಾಂಬ, ‘ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಅಧಿಕಾರಿಗಳ ಜೊತೆಗೂಡಿ ನಾಳೆಯೇ ಸಭೆ ನಡೆಸುತ್ತೇವೆ. ವಾರದಲ್ಲಿ ಕ್ರಿಯಾ ಯೋಜನೆ ರೂಪಿಸಿ ಕಳಿಸುತ್ತೇವೆ’ ಎಂದರು.

ಕ್ರಿಯಾಯೋಜನೆಯನ್ನು ರೂಪಿಸಿ ಕಳಿಸಿ. ಅದರಲ್ಲಿ ಆಗಿರುವ ಪ್ರಗತಿಯ ಬಗ್ಗೆ 6 ತಿಂಗಳ ನಂತರ ಪರಿಶೀಲನೆ ನಡೆಸುತ್ತೇನೆ ಎಂದು ಬಸವರಾಜ್‌ ತಿಳಿಸಿದರು.

ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಸಹಾಯಕ ಆಯುಕ್ತ ಪದ್ಮನಾಭ, ಸಲಹೆಗಾರ ಸುರೇಶ್ ಹನಗವಾಡಿ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್ ಹಾಜರಿದ್ದರು. ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶಶಿಧರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT