ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ‘ವಾತ್ಸಲ್ಯ’: ನಿರ್ಗತಿಕರ ಪಾಲಿಗೆ ಆಶಾಕಿರಣ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಮನೆ ನಿರ್ಮಾಣ, ಮನೆ ದುರಸ್ತಿ, ಕಿಟ್‌ ವಿತರಣೆ
Last Updated 27 ಜನವರಿ 2023, 2:25 IST
ಅಕ್ಷರ ಗಾತ್ರ

ದಾವಣಗೆರೆ: ನಿತ್ಯವೂ ತುತ್ತು ಅನ್ನಕ್ಕಾಗಿ ಪರದಾಡುವ, ನೋವನ್ನೇ ಉಂಡು ಮಲಗುವ, ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಅದೆಷ್ಟೋ ಕುಟುಂಬಗಳ ವೃದ್ಧರು, ವಿಧವೆಯರು, ಅಂಗವಿಕಲರು, ರೋಗಿಗಳು, ಬಡವರ ಪಾಲಿಗೆ ಆಶಾಕಿರಣವಾಗಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ವಾತ್ಸಲ್ಯ’ ಕಾರ್ಯಕ್ರಮ.

ಕಾರ್ಯಕ್ರಮದ ಭಾಗವಾಗಿ ಸಂಘದ ಪ್ರತಿನಿಧಿಗಳು ಸಮೀಕ್ಷೆ ನಡೆಸಿ ಸಮಾಜದಲ್ಲಿನ ‘ಅಸಹಾಯಕ’ರನ್ನು ಗುರುತಿಸುತ್ತಾರೆ. ಅಂತಹವರಿಗೆ ಸಂಘದಿಂದ ಆಹಾರದ ಕಿಟ್‌, ಚಾಪೆ, ದಿಂಬು, ಬೆಡ್‌ ಶೀಟ್‌, ಪಾತ್ರೆ ಒಳಗೊಂಡ ‘ವಾತ್ಸಲ್ಯ ಕಿಟ್‌’ ಅನ್ನು ವರ್ಷದಲ್ಲಿ ಎರಡು ಸಲ ವಿತರಿಸಲಾಗುತ್ತಿದೆ. ಅವರ ಯೋಗಕ್ಷೇಮ ವಿಚಾರಿಸಲು ಪೋಷಕರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡುವ ಜತೆಗೆ, ಅಗತ್ಯವಿರುವವರಿಗೆ ಹೊಸದಾಗಿ ಮನೆ ನಿರ್ಮಾಣ, ಮನೆ ದುರಸ್ತಿ, ಶೌಚಾಲಯ, ಸ್ನಾನಗೃಹದ ವ್ಯವಸ್ಥೆ ಮಾಡಿ
ಕೊಡಲಾಗುತ್ತಿದೆ.

‘ದಾವಣಗೆರೆ ತಾಲ್ಲೂಕಿನ ಅಣಜಿ ಗ್ರಾಮದ ಮಂಜುಳಾ ಅವರು ಅಲ್ಪ ಪ್ರಮಾಣದ ಬುದ್ಧಿಮಾಂದ್ಯತೆ ಸಮಸ್ಯೆ ಎದುರಿಸುತ್ತಿದ್ದಾರೆ. ಚಿಕ್ಕಂದಿನಲ್ಲಿಯೇ ತಂದೆ ತೀರಿಕೊಂಡರು. ತಾಯಿ ಮತ್ತು ಅಜ್ಜಿ ಆಶ್ರಯದಲ್ಲಿ ಬೆಳೆದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನೂ ದೂರವಾದರು. ಮೊದಲಿಗೆ ಅಜ್ಜಿ, ನಂತರದಲ್ಲಿ ತಾಯಿ ತೀರಿಕೊಂಡ ನಂತರ ಅಕ್ಷರಶಃ ನಿರ್ಗತಿಕರಾಗಿದ್ದರು. ಕಸ–ಕಡ್ಡಿ ತುಂಬಿದ್ದ, ಗಿಡ–ಗಂಟಿ ಬೆಳೆದು ಪಾಳು ಬಿದ್ದಂತಿದ್ದ ಮನೆಯಲ್ಲಿಯೇ ವಾಸವಾಗಿದ್ದರು. ನೆರೆಹೊರೆಯವರು, ಗ್ರಾಮದ ಮುಖಂಡರ ನೆರವಿನಿಂದ ಹೇಗೋ ಜೀವನ ನಡೆಸುತ್ತಿದ್ದರು. ವಿಷಯ ತಿಳಿದ ಬಳಿಕ ಗ್ರಾಮದ ಮುಖಂಡರ ಒಪ್ಪಿಗೆ ಪಡೆದು ‘ವಾತ್ಸಲ್ಯ’ ಕಾರ್ಯಕ್ರಮದಡಿ 15X10 ಅಡಿ ಅಳತೆಯಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಮಂಜುಳಾ ಅವರು ಜ.27ರಿಂದ ನೂತನ ಮನೆಯಲ್ಲಿ ವಾಸ ಮಾಡಲಿದ್ದಾರೆ’ ಎಂದು ದಾವಣಗೆರೆ ಗ್ರಾಮಾಂತರ ಯೋಜನಾಧಿಕಾರಿ ಯಶೋದಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಎಲ್‌.ಎಚ್‌. ಮಂಜುನಾಥ್‌ ಅವರ ಮಾರ್ಗದರ್ಶನದಲ್ಲಿ 2020ರಲ್ಲಿ ರಾಜ್ಯದಾದ್ಯಂತ ವಾತ್ಸಲ್ಯ ಕಾರ್ಯಕ್ರಮ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 20 ವಾತ್ಸಲ್ಯ ಮನೆಗಳ ನಿರ್ಮಾಣ, 25 ಮನೆಗಳ ದುರಸ್ತಿ, 21 ಶೌಚಾಲಯ, ಸ್ನಾನಗೃಹಗಳ ನಿರ್ಮಾಣ ಮಾಡಲಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕ ಜಿ. ವಿಜಯಕುಮಾರ್‌ ನಾಗನಾಳ ವಿವರಿಸಿದರು.

‘ಕುಟುಂಬದಲ್ಲಿ ಒಬ್ಬರೇ ಇದ್ದವರಿಗೆ 15X10 ಅಡಿ, ಇಬ್ಬರು ಇದ್ದವರಿಗೆ 20X10 ಅಡಿಯ ಮನೆ ನಿರ್ಮಿಸಿ ಅದರಲ್ಲಿ 4X5 ಅಡಿಯ ಶೌಚಾಲಯ ಮತ್ತು 6X5 ಅಡಿಯ ಅಡುಗೆ ಮನೆಯನ್ನು ₹ 1 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಡಲಾಗುತ್ತಿದೆ. ಜತೆಗೆ ಜೀವನ ನಿರ್ವಹಣೆಗಾಗಿ ₹ 750ರಿಂದ ₹ 1,000ವರೆಗೂ ಮಾಸಾಶನ ನೀಡಲಾಗುತ್ತಿದೆ. ಇವರೂ ಸೇರಿ ಜಿಲ್ಲೆಯಲ್ಲಿ ಒಟ್ಟು 515 ಕುಟುಂಬಗಳಿಗೆ ಪ್ರತಿ ತಿಂಗಳು ಮಾಸಾಶನ ವಿತರಿಸಲಾಗುತ್ತಿದೆ. ಇಂತಹ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರೆ ಅಗತ್ಯ ನೆರವು ನೀಡಲಾಗುತ್ತಿದೆ. ವಿದ್ಯುತ್‌ ಇಲ್ಲದ ಮನೆಗಳಿಗೆ ಸೆಲ್ಕೊ ಸೋಲಾರ್‌ ವ್ಯವಸ್ಥೆ, ಸಂಘದ ಸಾಮಾನ್ಯ ಸೇವಾ ಕೇಂದ್ರದ ಮೂಲಕ ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಸೌಲಭ್ಯ, ಆಯುಷ್ಮಾನ್‌ ಕಾರ್ಡ್‌, ಆರೋಗ್ಯ ಕಾರ್ಡ್‌ ಸೇರಿ ಸರ್ಕಾರದ ಇತರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಅಣಜಿಯಲ್ಲಿ ಮನೆ ಉದ್ಘಾಟನೆ ಇಂದು

ಉದ್ಘಾಟಕರು: ಗೀತಾ, ಪ್ರಾದೇಶಿಕ ನಿರ್ದೇಶಕರು, ಚಿತ್ರದುರ್ಗ ವ್ಯಾಪ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಉಪಸ್ಥಿತಿ: ವಿ. ವಿಜಯಕುಮಾರ್‌ ನಾಗನಾಳ, ಜಿಲ್ಲಾ ಹಿರಿಯ ನಿರ್ದೇಶಕರು, ಯಶೋದಾ, ದಾವಣಗೆರೆ ಗ್ರಾಮಾಂತರ ಯೋಜನಾಧಿಕಾರಿ, ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್‌.ಕೆ. ಚಂದ್ರಶೇಖರ್‌, ಅಣಜಿ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾ ಮತ್ತು ಅಣಜಿ ಗ್ರಾಮಸ್ಥರು

ಸಮಯ: ಬೆಳಿಗ್ಗೆ 9:30, ಸ್ಥಳ: ಅಣಜಿ ಗ್ರಾಮ

ನೆಲೆ ಕಲ್ಪಿಸಿದ ಸಂಘ

ನನಗೆ ತಂದೆ–ತಾಯಿ, ಗಂಡ–ಮಕ್ಕಳು ಯಾರೂ ಇಲ್ಲ. ಅಣ್ಣನ ಕುಟುಂಬವಿದ್ದರೂ ಅವರು ಜೀವನ ನಡೆಸುವುದೇ ಕಷ್ಟವಾಗಿದೆ. ನಿರ್ಗತಿಕಳಾಗಿದ್ದ ನನಗೆ ಧರ್ಮಸ್ಥಳ ಸಂಘದವರು ಮನೆ ನಿರ್ಮಿಸಿಕೊಡುವ ಮೂಲಕ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.

- ಗಂಗಮ್ಮ, ಬಡವನ ಬಸವನಹಳ್ಳಿ, ನ್ಯಾಮತಿ ತಾಲ್ಲೂಕು

***

ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಸಂಘದವರು ಮಾಡುತ್ತಿರುವುದು ಶ್ಲಾಘನೀಯ. ಮಂಜುಳಾಗೆ ಹೊಸ ಬದುಕು ನೀಡಿದ ಸಂಘದ ಎಲ್ಲರಿಗೆ ಅಭಿನಂದನೆಗಳು.

– ಎಸ್‌.ಕೆ. ಚಂದ್ರಶೇಖರ್‌, ಮಾಜಿ ಅಧ್ಯಕ್ಷರು, ಎಪಿಎಂಸಿ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT