ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಇಚ್ಛಾಶಕ್ತಿ ಬೇಕು: ಎಂ.ಪಿ. ರೇಣುಕಾಚಾರ್ಯ

ಸರ್ಕಾರಿ ನೌಕರರ ಸಂಘದ ವಾಣಿಜ್ಯ ಮಳಿಗೆಗಳ ಉದ್ಘಾಟನೆ
Last Updated 22 ಆಗಸ್ಟ್ 2021, 3:54 IST
ಅಕ್ಷರ ಗಾತ್ರ

ಹೊನ್ನಾಳಿ: ಯಾವುದೇ ಸಂಘ–ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ರಾಜ್ಯ ಸರ್ಕಾರಿ ನೌಕರರ ಸಂಘದ ಇಲ್ಲಿನ ಪದಾಧಿಕಾರಿಗಳು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಕನಕದಾಸ ವೃತ್ತದಲ್ಲಿ ಸರ್ಕಾರಿ ನೌಕರರ ಸಂಘದ ಅಡಿ ನಿರ್ಮಾಣಗೊಂಡಿರುವ ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ‘ಕೋವಿಡ್‌ ಕರ್ತವ್ಯದ ವೇಳೆ ಸರ್ಕಾರಿ ನೌಕರ ಮೃತಪಟ್ಟರೆ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ಕೊಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಒಂದೇ ಒಂದು ಕುಟುಂಬಕ್ಕೆ ಪರಿಹಾರವನ್ನು ನೀಡಿದೆಯಾ’ ಎಂದು ಪ್ರಶ್ನಿಸಿದರು.

ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೋವಿಡ್‌ ಸಂದರ್ಭ ಬಳಸಿಕೊಂಡು ಸಾಕಷ್ಟು ಹಣ ದೋಚಿದ ನರ್ಸಿಂಗ್ ಹೋಂಗಳ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಸಭಾ ಭವನ ನಿರ್ಮಾಣಕ್ಕೆ ₹ 2 ಲಕ್ಷ ಅನುದಾನದ ಭರವಸೆ ನೀಡಿದರು.

‘ನಾನು ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ₹ 3 ಕೋಟಿ ಅನುದಾನ ಒದಗಿಸುತ್ತೇವೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಸ್. ಷಡಾಕ್ಷರಿ ಹೇಳಿದರು.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಆದರೆ, ಬಿ.ಎಸ್. ಯಡಿಯೂರಪ್ಪ ಅವರ ಕೈಯಲ್ಲಿ ಪೇಪರ್ ಇದೆ. ನೌಕರರ ಸಂಘದ ಅಧ್ಯಕ್ಷ ಎಸ್. ಷಡಾಕ್ಷರಿ ಅವರ ಕೈಯಲ್ಲಿ ಪೆನ್ ಇದೆ. ಅವರನ್ನು ಬಳಸಿಕೊಂಡು ಅನುದಾನ ಬಿಡುಗಡೆ ಮಾಡಿಸಿಕೊಂಡು ಕೆಲಸ ಮಾಡಿಸಬೇಕು’ ಎಂದರು. ಕೇಂದ್ರ ಗೃಹ ಸಚಿವರ ಪದಕ ಪಡೆದ ಸಿಪಿಐ ಟಿ.ವಿ. ದೇವರಾಜ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಚಂದ್ರಶೇಖರ್ ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಶಾಸಕ ಡಿ.ಬಿ. ಗಂಗಪ್ಪ, ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾಧ್ಯಕ್ಷ ಬಿ. ಫಾಲಾಕ್ಷಿ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ನಾಗರಾಜ್, ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT