ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಪಕ್ಷ ನಾಯಕರ ಸಹಕಾರದಿಂದ 57 ಕೆರೆ ಯೋಜನೆ ಯಶಸ್ವಿ

ಯೋಜನೆಯ ಪೈಪ್‌ಲೈನ್ ಕಾಮಗಾರಿ ವೀಕ್ಷಿಸಿದ ನಂತರ ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಸಿರಿಗೆರೆ ಶ್ರೀ
Last Updated 26 ಅಕ್ಟೋಬರ್ 2021, 4:41 IST
ಅಕ್ಷರ ಗಾತ್ರ

ಜಗಳೂರು: ತುಂಗಭದ್ರಾ ನದಿಯಿಂದ ಬರಪೀಡಿತ ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಂತಿಮ ಸ್ವರೂಪ ಪಡೆಯಲು ಸರ್ವಪಕ್ಷಗಳ ನಾಯಕರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿಧಾನಸಭಾ ಕ್ಷೇತ್ರದ ಚಟ್ನಹಳ್ಳಿ ಗುಡ್ಡದ ಮೇಲಿನ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ವೀಕ್ಷಿಸಿ ನಂತರ ತುಪ್ಪದಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿನ ಬೇಡಿಕೆಯಂತೆ ಜಗಳೂರಿನ 57 ಕೆರೆಗಳ ತುಂಬಿಸುವ ಮತ್ತು ಭರಮಸಾಗರ 45 ಕೆರೆ ತುಂಬಿಸುವ ಯೋಜನೆ ಜಾರಿಗೆ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಎಚ್. ಆಂಜನೇಯ, ಎಂ. ಚಂದ್ರಪ್ಪ ಹಾಗೂ ಎಚ್.ಪಿ. ರಾಜೇಶ್ ಅವರ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಉಬ್ರಾಣಿ ನೀರಾವರಿ ಯೋಜನೆ 10 ವರ್ಷ ಕುಂಟುತ್ತಾ ಸಾಗಿತು. 22 ಕೆರೆಗಳ ಯೋಜನೆ ಕಳಪೆ ಕಾಮಗಾರಿಯಿಂದ ಕೆರೆಗಳಿಗೆ ನೀರು ಬರದಂತಾಯಿತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅತ್ಯಂತ ಎಚ್ಚರಿಕೆಯಿಂದ ಈ ಯೋಜನೆ ಜಾರಿಯಾಗುತ್ತಿದೆ. ಮಹತ್ವದ ಯೋಜನೆಗೆ ಕಡಿಮೆ ಪ್ರಮಾಣದ ಹಣವನ್ನು ಮೀಸಲಿಟ್ಟಾಗ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಹಾಗೂ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿತ್ತು. ಅಷ್ಟರಲ್ಲಿ ಅನುದಾನ ಮಂಜೂರಾಯಿತು ಎಂದು ಹೇಳಿದರು.

ಜೀವಜಲಕ್ಕೆ ಯಾವುದೇ ಜಾತಿಯಿಲ್ಲ. ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಜೀವಸೆಲೆಯಾಗಿದೆ. ತುಪ್ಪದಹಳ್ಳಿ ಕೆರೆಯನ್ನು 22 ಕೆರೆ ತುಂಬಿಸುವ ಯೋಜನೆಯಿಂದ 57 ಕೆರೆಗೆ ತಾಂತ್ರಿಕವಾಗಿ ಸೇರ್ಪಡೆಗೊಳಿಸಲಾಯಿತು. ಭರಮ
ಸಾಗರ ಕೆರೆ ಕೋಡಿ ಬಿದ್ದರೆ ತುಪ್ಪದಹಳ್ಳಿಗೆ ಕೆರೆಗೆ ನೀರು ಹರಿಯುತ್ತದೆ. ರೈತರ ಸಂಕಷ್ಟಗಳು ದೂರಾಗಿ ಎಲ್ಲರ ಬದುಕು ಹಸನಾಗಲಿ ಎಂದು ಹೇಳಿದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ. ಗುರುಗಳ ಕಾಳಜಿಯಿಂದ ವಿವಿಧ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿ ಯೋಜನೆಗೆ ಅನುದಾನ ಸರಾಗವಾಗಿ ಬಂದಿದೆ. ಕೆರೆಗಳಿಗೆ ನೀರು ಬಂದಲ್ಲಿ ಬರದ ನಾಡು ಬಂಗಾರವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಚ್.ಪಿ. ರಾಜೇಶ್, ‘ಜಗಳೂರು ಹಾಗೂ ಭರಮಸಾಗರ ಕೆರೆ ಯೋಜನೆಗಳು ತರಳಬಾಳು ಹುಣ್ಣಿಮೆ ಅವಳಿ ಕೂಸುಗಳು. ಪೈಪ್‌ಲೈನ್ ಕಾಮಗಾರಿ ವಿಳಂಬವಾಗದಂತೆ ಶ್ರೀಗಳು ರೈತರ ಮನವೊಲಿಸಿದಲ್ಲಿ ಕೆರೆಗಳು ಮೈದುಂಬುವುದು ನಿಶ್ಚಿತ’ ಎಂದರು.

ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಮಲ್ಲಪ್ಪ, ಮುಖಂಡರಾದ ಬಸವಂತಪ್ಪ, ಸೊಕ್ಕೆ ನಾಗರಾಜ್,
ಶಶಿಧರ್ ಪಟೇಲ್, ಎಚ್.ಸಿ. ಮಹೇಶ್, ವಕೀಲ ಕೆ.ಎಂ. ಬಸವರಾಜಪ್ಪ, ಕಮ್ಮತ್ತಹಳ್ಳಿ ಮಂಜಪ್ಪ, ರಾಜಪ್ಪ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT