ಬುಧವಾರ, ಆಗಸ್ಟ್ 10, 2022
21 °C
ಕುರುಬರನ್ನು ಎಸ್‌ಟಿಗೆ ಸೇರಿಸುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಕಾಗಿನೆಲೆಶ್ರೀ

ಕುರುಬರ ಹೋರಾಟ ಯಾರ ಪರ, ವಿರೋಧದ ಹೋರಾಟವಲ್ಲ: ಕಾಗಿನೆಲೆಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇದು ಯಾರ ವಿರುದ್ಧ ಅಥವಾ ಪರವಾಗಿ ಇರುವ ಹೋರಾಟವಲ್ಲ. ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಪಕ್ಷಾತೀತವಾಗಿ ನಡೆಸುವ ಹೋರಾಟ ಎಂದು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟದ ಪ್ರಯಕ್ತ ನಡೆಸುವ ಸಮಾವೇಶ, ಪಾದಯಾತ್ರೆ, ದಾವಣಗೆರೆ, ಹಾವೇರಿ ಚಿತ್ರದುರ್ಗ ವಿಭಾಗ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶನಿವಾರ ಬೀರಲಿಂಗೇಶ್ವರ ಸಭಾಭವನದಲ್ಲಿ ಅವರು ಮಾತನಾಡಿದರು.

ತಾಯಿ, ತಂದೆ ಮತ್ತು ಸಮಾಜದ ಋಣಗಳನ್ನು ಎಲ್ಲರೂ ತೀರಿಸಬೇಕು. ಎಸ್‌ಟಿ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸಮಾಜದ ಋಣ ತೀರಿಸುವ ಅವಕಾಶ ಬಂದಿದೆ. ಪಕ್ಷಾತೀತವಾಗಿ ನಡೆಯುವ ಈ ಹೋರಾಟದಲ್ಲಿ ಯಾರೂ ಭಾಗವಹಿಸುವುದಿದ್ದರೂ ಅವರನ್ನು ಹೃದಯ ತುಂಬಿ ಸ್ವಾಗತಿಸಲಾಗುವುದು ಎಂದು ತಿಳಿಸಿದರು.

ಮನುಷ್ಯ ಹುಟ್ಟುವಾಗಿ ಸಮುದಾಯದ ನಡುವೆ ಹುಟ್ಟುತ್ತಾನೆ. ಬಳಿಕ ಆ ಪಕ್ಷ ಈ ಪಕ್ಷ ಎಂದು ಹೋಗುತ್ತಾನೆ. ಪಕ್ಷಗಳಲ್ಲಿ ಯಾರೂ ಹುಟ್ಟುವುದಿಲ್ಲ. ಹಾಗಾಗಿ ಮೊದಲು ಸಮುದಾಯ ಬಳಿಕ ಪಕ್ಷ ಎಂಬುದನ್ನು ಮರೆಯಬಾರದು ಎಂದರು.

ಇಂಥ ಹೋರಾಟಗಳಿಗೆ, ಜಾಗೃತಿಗಳಿಗೆ ಶಕ್ತಿ ತುಂಬಲು ಅಧಿಕಾರ ಮುಖ್ಯ. ರಾಜ್ಯದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲು, ಕೇಂದ್ರದಲ್ಲಿ ಮೋದಿ, ಅಮಿತ್‌ ಷಾ ಅವರಲ್ಲಿ ಮಾತನಾಡಿ ಎಸ್‌ಟಿ ಮೀಸಲಾತಿ ಕೊಡಿಸಲು ಅಧಿಕಾರ ಇದ್ದರೆ ಮಾತ್ರ ಸಾಧ್ಯ. ಆ ಜವಾಬ್ದಾರಿಯನ್ನು ಈಶ್ವರಪ್ಪ ತೆಗೆದುಕೊಂಡಿದ್ದಾರೆ. ಆ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಹೊಸದುರ್ಗ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಧ್ವನಿ ಇಲ್ಲದವರನ್ನು, ಹಿಂದುಳಿದವರನ್ನು ಮೇಲಕ್ಕೆತ್ತಲು ಸಂವಿಧಾನದ ಮೂಲಕ ಅಂಬೇಡ್ಕರ್‌ ನೀಡಿದ ಅವಕಾಶ ಇದು. ಅಂಬೇಡ್ಕರ್‌ ನಮ್ಮೆಲ್ಲರ ತಂದೆ, ಆರಾಧ್ಯರು. ನಾವು ಈ ಅವಕಾಶವನ್ನು ಉಪಯೋಗಿಸಿಕೊಂಡು ಎಸ್‌ಟಿಗೆ ಸೇರಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಬಾರದು’ ಎಂದು ತಿಳಿಸಿದರು.

ಬ್ರಿಟಿಷರ ಆಡಳಿತ ಇರುವಾಗಲೇ ಕುರುಬರು ಎಸ್‌ಟಿಯಲ್ಲಿದ್ದರು. ಸ್ವಾತಂತ್ರ್ಯ ಬಂದ ಬಳಿಕ 1950ರಲ್ಲಿಯೂ ಎಸ್‌ಟಿಯಲ್ಲಿದ್ದರು. ಬಳಿಕ ಈ ಎಸ್‌ಟಿಯಿಂದ ತೆಗೆದು ಹಾಕಲಾಗಿದೆ. ಶಿಕ್ಷಣ, ವಸತಿ, ಉದ್ಯೋಗ ಸಹಿತ ಯಾವುದೇ ಸವಲತ್ತು ಇಲ್ಲದ ಈ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು 1986ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ ಯಾಕೆ ನೀಡಬೇಕು ಎಂದು ಸಮರ್ಥಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದರಿಂದ ಈ ಸ್ಥಾನಮಾನ ಸಿಗಲಿಲ್ಲ. 1991ರಲ್ಲಿ ವಾಲ್ಮೀಕಿ ಸಮುದಾಯದವರು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಅವರು ಮೀಸಲಾತಿ ಪಡೆದುಕೊಂಡರು. ಅವರಂತೆಯೇ ನಾವು ಕೂಡ ಪಡೆಯಬೇಕು ಎಂದರು.

ಕುರುಬ ಸಮುದಾಯದವರು ಒಬ್ಬರು ಮುಖ್ಯಮಂತ್ರಿ ಆಗಬೇಕು ಎಂದು 2012ರಲ್ಲಿ ಹೋರಾಟ ಸಂಘಟಿಸಿ ಯಶಸ್ವಿಯಾಗಿದ್ದೆವು. ಈಗಲೂ ಎಸ್‌ಟಿ ಪಡೆದೇ ಪಡೆಯುತ್ತೇವೆ ಎಂದು ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಇಳಿದಿದ್ದೇವೆ. ಅಲ್ಲೊಂದು ಇಲ್ಲೊಂದು ಅಪಸ್ವರಗಳು ಎದ್ದಿವೆ. ಅವೆಲ್ಲವನ್ನು ಮೀರಿ ನಾವು ಎಸ್‌ಟಿ ಸ್ಥಾನಮಾನ ಪಡೆದೇ ಪಡೆಯುತ್ತೇವೆ ಎಂದರು.

ಕುರುಬ ಸಮಾಜದ ಮುಖಂಡರಾದ ಮುಕುಡಪ್ಪ, ಜಿ.ಸಿ. ನಿಂಗಪ್ಪ, ರಾಜನಹಳ್ಳಿ ಶಿವಕುಮಾರ್‌, ಗಾಜಿಗೌಡ, ಎಸ್‌.ಎಫ್‌.ಎನ್‌. ರಾಜುಗೌಡ, ಪ್ರಭಾವತಿ, ಶಶಿಕಲಾ, ಜಿಹ್ವೇಶ್ವರಿ, ಬಿ.ಎಂ. ಸತೀಶ್‌, ಜಯಮ್ಮ, ಪ್ರಸನ್ನಕುಮಾರ್‌, ಜಯಶೀಲ, ಶಂಕರಪ್ಪ, ನಾಗೇಂದ್ರಪ್ಪ, ಕಿರಣ್‌, ವಿರೂಪಾಕ್ಷಪ್ಪ, ರಾಜೇಂದ್ರ ಇನ್ನು ಹಲವರು ಉಪಸ್ಥಿತರಿದ್ದರು.

ರಾಜಕೀಯ ಮಾಡಲ್ಲ: ಈಶ್ವರಪ್ಪ

ನಾನು, ಸಿದ್ದರಾಮಯ್ಯ ರಾಜಕೀಯ ಮಾಡಬಹುದು. ಆದರೆ ನಮ್ಮ ಸ್ವಾಮೀಜಿಗಳು ರಾಜಕೀಯ ಮಾಡುತ್ತಾರೆಯೇ? ಅವರ ನೇತೃತ್ವದಲ್ಲಿ ನಡೆಯುವ ಹೋರಾಟದಲ್ಲಿ ನಾನು ರಾಜಕೀಯ ಮಾಡಲು ಸಾಧ್ಯವೇ? ಅದಕ್ಕಾಗಿ ಈ ಹೋರಾಟದಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

‘ಈ ಹೋರಾಟವನ್ನು ಒಪ್ಪುವವರು ಮತ್ತು ಒಪ್ಪದೇ ಇರುವವರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹೀಗೆ ಎಲ್ಲ ಪಕ್ಷಗಳಲ್ಲಿ ಇರಬಹುದು. ನಾನೊಬ್ಬ ಮನೆ ಮಗನಾಗಿ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕೊಡಿಸಲು ಪ್ರಯತ್ನಿಸದೇ ಇದ್ದರೆ ನನ್ನ ರಾಜಕೀಯಕ್ಕೇ ಧಿಕ್ಕಾರ ಹೇಳುವೆ. ಅಂಥ ರಾಜಕೀಯಕ್ಕೆ ಬೆಂಕಿ ಬೀಳಲಿ’ ಎಂದು ಭಾವನಾತ್ಮಕವಾಗಿ ಮಾತನಾಡಿದರು.

‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿಯಲಿ ಎಂದು ಕೆಲವರು ಸಲಹೆಗಳನ್ನು ಮಾಧ್ಯಮದ ಮೂಲಕ ನೀಡುತ್ತಿದ್ದಾರೆ. ನನ್ನ ರಾಜೀನಾಮೆಯಿಂದ ಎಸ್‌ಟಿ ಸ್ಥಾನಮಾನ ಸಿಗುವುದೇ ಆದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಈ ಸಮುದಾಯದ ಜನರಿಗೆ ಎಸ್‌ಟಿ ಮೀಸಲಾತಿ ಮೂಲಕ ಸಿಗುವ ಸೌಲಭ್ಯಗಳಿಗಿಂತ ನನ್ನ ಸಚಿವ ಸ್ಥಾನ ದೊಡ್ಡದೇ’ ಎಂದು ಪ್ರಶ್ನಿಸಿದರು.

‘ಎಂಟಿಬಿ, ವಿಶ್ವನಾಥ್‌, ಶಂಕರ್‌ ಮುಂತಾದವರೆಲ್ಲ ರಾಜೀನಾಮೆ ನೀಡದೇ ಇರುತ್ತಿದ್ದರೆ ನಾನು ಸಚಿವನಾಗುತ್ತಿರಲಿಲ್ಲ. ಅವರಿಗೆ ಸಚಿವ ಸ್ಥಾನ ನೀಡಲು ಓಡಾಡುತ್ತಿದ್ದೇವೆ. ರಾಜೀನಾಮೆ ನಾನು ನೀಡುವ ಬದಲು ಸಮುದಾಯದ ಇನ್ನಷ್ಟು ಮಂದಿಗೆ ಸಚಿವ ಸ್ಥಾನ ಸಿಗುವಂತೆ ಮಾಡಬೇಕು’ ಎಂದರು.

‘ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಅದಾದ ಮೇಲೆ ರಾಜ್ಯ ಸರ್ಕಾರದ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಕಳುಹಿಸಿ ಕೇಂದ್ರದಿಂದ ಅನುಮೋದನೆ ಪಡೆಯುವ ಕೆಲಸವನ್ನು ಮಾಡಿಯೇ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಈಗ ಕೇಂದ್ರ ಸರ್ಕಾರ ಕೂಡ ಚುರುಕಾಗಿದೆ. 30 ವರ್ಷಗಳಲ್ಲಿ ಕುರುಬರ ಕಡೆಗೆ ನೋಡದ ಕೇಂದ್ರ ಕೂಡ ಈಗ ತಿರುಗಿ ನೋಡುತ್ತಿದೆ. ದಾಖಲಾತಿಗಳನ್ನು ಕೊಡಿ ಎಂದು ಇಲಾಖೆಗಳು ಕೇಳ ತೊಡಗಿವೆ. ಈಗಾಲೇ ಪ್ರಹ್ಲಾದ ಜೋಷಿ, ಸಂತೋಷ್‌ ಮತ್ತಿತರರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜ.6ಕ್ಕೆ ದಾವಣಗೆರೆಯಲ್ಲಿ ಸಮಾವೇಶ

ಎಸ್‌ಟಿ ಮೀಸಲಾತಿ ಹೋರಾಟದ ಭಾಗವಾಗಿ ವಿಭಾಗ ಮಟ್ಟದ ಸಮಾವೇಶಗಳು ನಡೆಯಲಿವೆ. ಜ.5ಕ್ಕೆ ಬೀದರ್‌, ಯಾದಗಿರಿ, ಕಲಬುರ್ಗಿ ವಿಭಾಗದ ಸಮಾವೇಶ ನಡೆಯಲಿದೆ. ಜ. 6ರಂದು ದಾವಣಗೆರೆಯಲ್ಲಿ ದಾವಣಗೆರೆ ಹಾವೇರಿ, ಚಿತ್ರದುರ್ಗ ಜಿಲ್ಲೆಗಳ ಸಮಾವೇಶ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜ.7ರಂದು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಸಮಾವೇಶ ಶಿಕಾರಿಪುರದಲ್ಲಿ ನಡೆಯಲಿದೆ. ಜ.15ಕ್ಕೆ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಗೊಳ್ಳಲಿದೆ. ಫೆ. 7ಕ್ಕೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು