ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಠಮಾರಿತನದಿಂದ ವಿದ್ಯಾವಂತರಲ್ಲಿ ವಿಚ್ಛೇದನ

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಬಸವಪ್ರಭು ಸ್ವಾಮೀಜಿ ಕಳವಳ
Last Updated 26 ಏಪ್ರಿಲ್ 2019, 9:40 IST
ಅಕ್ಷರ ಗಾತ್ರ

ದಾವಣಗೆರೆ: ‘ಅಹಂಕಾರ, ಸ್ವಪ್ರತಿಷ್ಠೆ ಹಾಗೂ ಹಠಮಾರಿತನಗಳಿಂದಾಗಿ ವಿದ್ಯಾವಂತ ದಂಪತಿಗಳ ಸಂಸಾರದಲ್ಲಿ ಮನಸ್ತಾಪ ಉಂಟಾಗಿ ವಿಚ್ಛೇದನವಾಗುತ್ತಿವೆ’ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ಬಹುಜನ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಗರದ ಶಿವಯೋಗಿ ಮಂದಿರದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ 128ನೇ ಹಾಗೂ ಡಾ. ಬಾಬೂ ಜಗಜೀವನರಾಂ 112ನೇ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ 25 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಂಸಾರ ಚಕ್ಕಡಿ ಬಂಡಿ ಇದ್ದಂತೆ. ಸತಿ–ಪತಿ ಬಂಡಿಯ ಗಾಲಿಗಳಾಗಿವೆ. ಹೊಂದಾಣಿಕೆ ಎಂಬ ಕೀಲು ಸರಿಯಾಗಿದ್ದರೆ ಮಾತ್ರ ಸಂಸಾರದ ಬಂಡಿ ಮುರಿದು ಬೀಳುವುದಿಲ್ಲ. ಆದರೆ, ಇಂದು ವಿದ್ಯಾವಂತ ದಂಪತಿಗಳ ನಡುವೆ ಪ್ರೀತಿ, ಹೊಂದಾಣಿಕೆ ಕಡಿಮೆಯಾಗುತ್ತಿದೆ. ದ್ವೇಷ ಕಾಣಿಸಿಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನದಿ ದಾಟಲು ತೆಪ್ಪ ಬೇಕಾಗುತ್ತದೆ. ಅದೇ ರೀತಿ ಸಂಸಾರ ಎಂಬ ನದಿಯನ್ನು ದಾಟಲು ‘ತೆಪ್ಪ’ಗೆ ಇರುವುದು ಅಗತ್ಯವಾಗಿದೆ. ಗಂಡ ಮುನಿಸಿಕೊಂಡಾಗ ಹೆಂಡತಿ ಹಾಗೂ ಹೆಂಡತಿ ಸಿಟ್ಟಾದಾಗ ಗಂಡ ತಪ್ಪಗೆ ಇರಬೇಕು’ ಎಂದು ಸ್ವಾಮೀಜಿ ನವ ದಂಪತಿಗಳಿಗೆ ಕಿವಿಮಾತು ಹೇಳಿದರು.

‘ದೇಶದಲ್ಲಿ ಉಳ್ಳವರು ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ಆದರೆ, ಅದ್ದೂರಿ ಮದೆವೆಯಲ್ಲಿ ದುಂದುವೆಚ್ಚ ಇರುತ್ತದೆ. ಸರಳ ವಿವಾಹದಲ್ಲಿ ಆದರ್ಶ ನೆಲೆಸಿರುತ್ತದೆ. ಸರಳತೆ, ಪ್ರೀತಿ, ತ್ಯಾಗ, ವಿಶ್ವ ಕುಟುಂಬ ಭಾವನೆ ಇರುವಲ್ಲಿ ಆದರ್ಶ ಇರುತ್ತದೆ. ಸರಳವಾಗಿ ಬದುಕಿದ್ದ ಗೌತಮ ಬುದ್ಧ, ಬಸವಣ್ಣ, ಡಾ. ಬಿ.ಆರ್‌. ಅಂಬೇಡ್ಕರ್‌ ಜೀವನದಲ್ಲಿ ಆದರ್ಶಗಳನ್ನು ಕಾಣಬಹುದು. ಇವರು ಭಾರತಕ್ಕೆ ಸೀಮಿತವಾಗಿಲ್ಲ. ವಿಶ್ವದ ದಾರ್ಶನಿಕರಾಗಿದ್ದಾರೆ’ ಎಂದು ಹೇಳಿದರು.

ಬುದ್ಧ ಎಲ್ಲರನ್ನೂ ಪ್ರೀತಿಯಿಂದ ಕಂಡರು. ಬಸವಣ್ಣ ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ನೀಡಿದರು. ಅಂಬೇಡ್ಕರ್‌ ಶೋಷಿತರ ಬಾಳಿಗೆ ಸೂರ್ಯನಾಗಿ ಸಾಮಾಜಿಕ ನ್ಯಾಯ ಕೊಟ್ಟರು. ಅವರು ನೀಡಿದ ಸಂವಿಧಾನ ಬಡವರ ಬದುಕನ್ನು ಉದ್ಧಾರ ಮಾಡಿತು. ಈ ಮೂವರ ಆದರ್ಶ– ತತ್ವಸಿದ್ಧಾಂತಗಳನ್ನು ಪಾಲಿಸಿದರೆ ಜೀವನ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಕೀಲ ಎ.ಬಿ. ಹನುಮಂತಪ್ಪ, ‘ಸರಳ ಸಾಮೂಹಿಕ ವಿವಾಹದಿಂದ ಬಡತನ ನಿರ್ಮೂಲನೆ ಆಗಲಿದೆ. ಶಿಕ್ಷಣದಿಂದ ಮಾತ್ರ ಶೋಷಣೆಯ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ. ಶಿಕ್ಷಣ ಇಲ್ಲದಿದ್ದರೆ ದಲಿತರ ಪಾಡು ನಾಯಿ–ನರಿಗಳಿತಿಂತಲೂ ಕಡೆಯಾಗುತ್ತದೆ. ಹೀಗಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ನಡೆ–ನುಡಿಗಳಲ್ಲಿ ಸರಳತೆ; ವಿಚಾರದಲ್ಲಿ ಪ್ರಬುದ್ಧತೆ ಇರಬೇಕು. ಅಂಬೇಡ್ಕರ್‌ ತತ್ವದಡಿ ಜೀವನ ನಡೆಸುವ ಮೂಲಕ ಬೇರೆಯವರಿಗೂ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.

ಉಪನ್ಯಾಸ ನೀಡಿದ ಕರ್ನಾಟಕ ಜನಪದ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್‌. ವಿಶ್ವನಾಥ್‌, ‘12ನೇ ಶತಮಾನದಲ್ಲಿ ಶೋಷಿತರಿಗೆ ಬಸವಣ್ಣ ಸಾಮಾಜಿಕ ನ್ಯಾಯ ಕೊಡಿಸಿದಂತೆ, ಅಂಬೇಡ್ಕರ್‌ ಸಹ ದಮನಿತರ ಧ್ವನಿಯಾದರು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಮಹಾ ಮಾನವತಾವಾದಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್‌.ವಿ. ಹಲಸೆ, ಮುರುಘರಾಜೇಂದ್ರ ಕ್ರೆಡಿಟ್‌ ಕೋಆಪರೇಟಿವ್‌ ಬ್ಯಾಂಕ್‌ ಉಪಾಧ್ಯಕ್ಷ ಎಸ್‌. ಓಂಕಾರಪ್ಪ, ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಗಣೇಶ ದಾಸಕರಿಯಪ್ಪ, ಉದ್ಯಮಿ ಎಂ. ಆನಂದ್‌, ಸಂಕನಗೌಡರ ಹಾಜರಿದ್ದರು.

ಸಾಹಿತಿ ಪ್ರೊ. ಎ.ಕೆ. ಹಂಪಣ್ಣ, ಪತ್ರಕರ್ತ ವರದರಾಜ್‌ ಅವರನ್ನು ಅಭಿನಂದಿಸಲಾಯಿತು. ಮಲ್ಯಾಡಿ ಪ್ರಭಾಕರ್‌ ಶೆಟ್ಟಿ, ಬಿ.ಎ. ಹನುಮಂತಪ್ಪ, ಎಸ್‌.ಟಿ. ಯೋಗೇಶ್ವರ ಅವರಿಗೆ ‘ಬಹುಜನ ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಹುಜನ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಆಂಜನೇಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಹೆಗ್ಗೆರೆ ರಂಗಪ್ಪ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಹಾಜರಿದ್ದರು.

‘ಸಂಸಾರದಲ್ಲಿ ಸಂಸ್ಕಾರ ಮುಖ್ಯ’

‘ಸಂಸಾರದಲ್ಲಿ ಸಂಸ್ಕಾರ ಬಹಳ ಮುಖ್ಯ. ಸತಿ–ಪತಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಬೇಕು. ಇಬ್ಬರು ಮನಸ್ಸು ಒಂದಾಗಿರಬೇಕು. ಪರಸ್ಪರ ಹೊಂದಾಣಿಕೆ ಮುಖ್ಯ’ ಎಂದು ಚಿತ್ರದುರ್ಗದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಹೇಳಿದರು.

ಮದುವೆಗೆ ಮಾಡಿದ ಸಾಲ ತೀರಿಸಲಾಗದೇ ಎಷ್ಟೋ ದಂಪತಿಗಳ ಸಂಸಾರದಲ್ಲಿ ಒಡಕು ಮೂಡಿರುವ ನಿದರ್ಶನಗಳಿವೆ. ಅಂಬೇಡ್ಕರ್‌ ಜಯಂತಿ ಅಂಗವಾಗಿ ಸರಳ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದರಿಂದ ಹಿಂದುಳಿದ, ದಲಿತರಿಗೆ ಆರ್ಥಿಕ ಹೊರೆ ತಗ್ಗಿದಂತಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT