ಶನಿವಾರ, ಅಕ್ಟೋಬರ್ 19, 2019
28 °C
3,701 ಶೌಚಾಲಯ ನಿರ್ಮಾಣ ಬಾಕಿ ಇದ್ದರೂ ‘ಬಯಲು ಶೌಚಮುಕ್ತ ಜಿಲ್ಲೆ’ ಘೋಷಣೆ

ದಾವಣಗೆರೆ ಜಿಲ್ಲೆಯ ಹಳ್ಳಿಗಳಲ್ಲಿ ನಿಲ್ಲದ ಚೊಂಬು ದರ್ಶನ!

Published:
Updated:
Prajavani

ದಾವಣಗೆರೆ: ಎರಡು ವರ್ಷಗಳ ಹಿಂದೆಯೇ ‘ಬಯಲು ಶೌಚಮುಕ್ತ ಜಿಲ್ಲೆ’ ಎಂದು ಘೋಷಿಸಿಕೊಂಡ ದಾವಣಗೆರೆಯ ಹಲವು ಹಳ್ಳಿಗಳು ಹಾಗೂ ನಗರಗಳಲ್ಲಿ ಇಂದಿಗೂ ನಿತ್ಯ ಮುಂಜಾನೆ ಹಾಗೂ ಸಂಜೆ ಚೊಂಬು ಹಿಡಿದು ಜನ ಪೊದೆಯ ಮರೆಯತ್ತ ಸಾಗುವ ದೃಶ್ಯ ಸಾಮಾನ್ಯವಾಗಿದೆ. ‘ಬಯಲು ಶೌಚಮುಕ್ತ’ ಎಂಬುದು ಕಡತಗಳಿಗಷ್ಟೇ ಸೀಮಿತವಾಗಿದೆ. ವಾಸ್ತವದಲ್ಲಿ ಶೌಚಕ್ಕಾಗಿ ಬಯಲಿಗೆ ಹೋಗುವ ಅನಿಷ್ಟ ಪದ್ಧತಿಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ.

ಮಹಾತ್ಮ ಗಾಂಧಿ ಅವರ 150ನೇ ಜಯಂತಿ ದಿನವಾದ ಅಕ್ಟೋಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಈಗ ‘ಬಯಲು ಶೌಚಮುಕ್ತ ದೇಶ’ ಎಂದು ಘೋಷಿಸಿದ್ದರೆ, ದಾವಣಗೆರೆಯಲ್ಲಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆಯೇ ‘ಶೌಚಮುಕ್ತ ಜಿಲ್ಲೆ’ ಎಂದು ಘೋಷಿಸಿಕೊಂಡು ಬೀಗಿದ್ದರು. ಆದರೆ, ಹಳ್ಳಿಗಳಲ್ಲಿನ ಹಾಗೂ ನಗರದ ಕೊಳೆಗೇರಿಗಳ ಚಿತ್ರಣಗಳೇ ಬೇರೆಯಾಗಿವೆ.

ಜಿಲ್ಲಾ ಪಂಚಾಯಿತಿಯು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರವೇ ಜಿಲ್ಲೆಯಲ್ಲಿ ‘ಸ್ವಚ್ಛ ಭಾರತ ಮಿಷನ್‌’ ಅಡಿ ಇನ್ನೂ 3,701 ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು ಬಾಕಿ ಇದೆ. ಹೀಗಿರುವಾಗ ‘ಬಯಲು ಶೌಚಮುಕ್ತ ಜಿಲ್ಲೆ’ ಹೇಗೆ ಆದೀತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

2012ರ ಗುರಿ ಸಾಧನೆ: ಬಯಲು ಶೌಚದಿಂದ ಉಂಟಾಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಪ್ರತಿ ಮನೆಯೂ ಶೌಚಾಲಯ ಹೊಂದಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ನಿರ್ದೇಶನದಂತೆ 2012ರಲ್ಲಿ ಜಿಲ್ಲೆಯಲ್ಲಿ ಶೌಚಾಲಯ ಇಲ್ಲದ ಮನೆಗಳ ಸಮೀಕ್ಷೆ ನಡೆಸಲಾಗಿತ್ತು. ಆ ವೇಳೆ ಜಿಲ್ಲೆಯಲ್ಲಿ 2,82,278 ಕುಟುಂಬಗಳಿದ್ದವು. ಇವುಗಳ ಪೈಕಿ 1,08,106 ಮನೆಗಳಲ್ಲಿ ಮಾತ್ರ ಶೌಚಾಲಯಗಳಿದ್ದವು. ಹೀಗಾಗಿ ‘ಬಯಲು ಶೌಚಮುಕ್ತ ಜಿಲ್ಲೆ’ಯನ್ನಾಗಿಸಲು 1,74,172 ಶೌಚಾಲಯಗಳನ್ನು ನಿರ್ಮಿಸುವ ಗುರಿ ನಿಗದಿಪಡಿಸಲಾಯಿತು. ಶೌಚಾಲಯದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಿ, ಆರು ವರ್ಷಗಳ ಅವಧಿಯಲ್ಲಿ ನಿಗದಿತ ಪ್ರಮಾಣದಲ್ಲಿ ಶೌಚಾಲಯ ನಿರ್ಮಿಸುವ ಗುರಿ ತಲುಪಿದ್ದರಿಂದ 2017ರ ಸೆಪ್ಟೆಂಬರ್‌ 14ರಂದು ದಾವಣಗೆರೆಯನ್ನು ‘ಬಯಲು ಶೌಚಮಕ್ತ ಜಿಲ್ಲೆ’ ಎಂದು ಘೋಷಿಸಲಾಯಿತು ಎಂಬುದು ಅಧಿಕಾರಿಗಳ ವಾದ.

ಇನ್ನೂ ಹಲವು ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ಕೂಗು ಕೇಳಿಬಂತು. ಹೀಗಾಗಿ 2018ರ ಅಕ್ಟೋಬರ್‌ನಿಂದ ಎರಡು ತಿಂಗಳ ಕಾಲ ಶೌಚಾಲಯ ಅಗತ್ಯವಿರುವ ಮಾಹಿತಿ ಕಲೆ ಹಾಕಲು ಸಮೀಕ್ಷೆ ನಡೆಸಲಾಯಿತು. 2018ರ ಡಿಸೆಂಬರ್‌ಗೆ ಜಿಲ್ಲೆಯಲ್ಲಿ 8,634 ಶೌಚಾಲಯಗಳನ್ನು ನಿರ್ಮಿಸಬೇಕಾಗಿತ್ತು. ಸೆಪ್ಟೆಂಬರ್‌ ಅಂತ್ಯಕ್ಕೆ 4,933 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬಾಕಿ ಇರುವುದನ್ನೂ ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಬಳಕೆಯಾಗದ ಶೌಚಾಲಯ: ನಿರ್ಮಾಣಗೊಂಡ ಶೌಚಾಲಯಗಳ ಪೈಕಿ ಶೇ 70ರಷ್ಟು ಸರಿಯಾಗಿ ಬಳಕೆಯಾಗುತ್ತಿರಬಹುದು. ನೀರಿನ ಸಮಸ್ಯೆ, ಗೋಡೆಯ ನಡುವೆ ಕುಳಿತು ಬೀಡಿ ಸೇದಲು, ಎಲೆ–ಅಡಿಕೆ ಹಾಕಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ಎಷ್ಟೋ ಗಂಡಸರು ಶೌಚಕ್ಕೆ ಬಯಲಿಗೇ ತೆರಳುತ್ತಿದ್ದಾರೆ. ಶೌಚಾಲಯದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

‘ಸಮುದಾಯ ಶೌಚಾಲಯಗಳ ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತಿಗಳಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೃಹ ಶೌಚಾಲಯಗಳ ನಿರ್ಮಾಣಕ್ಕೇ ಹೆಚ್ಚು ಒತ್ತು ನೀಡಲಾಗುತ್ತಿದೆ. ನಾಲ್ಕೈದು ಕುಟುಂಬಗಳಿಗಾಗಿ ಸಮುದಾಯ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಕೆಲವೆಡೆ ಶೌಚಾಲಯ ಇಲ್ಲದ ಮನೆಗಳಿರಬಹುದು’ ಎಂಬುದು ಅಧಿಕಾರಿಗಳ ವಾದ.

ನೀರಿನ ಸಮಸ್ಯೆ: ‘ಕೊಳವೆಬಾವಿಗಳು ಬತ್ತಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಕೂಲಿ ಕೆಲಸ ಮಾಡುವವರಿಗೆ ಯಾವುದೋ ಸಮಯದಲ್ಲಿ ಬರುವ ಟ್ಯಾಂಕರ್‌ ನೀರನ್ನು ಹಿಡಿದುಕೊಳ್ಳಲು ಆಗುತ್ತಿಲ್ಲ. ಮನೆಯಲ್ಲಿ ಸಾಕಷ್ಟು ನೀರು ಇಲ್ಲದಿರುವುದರಿಂದ ಶೌಚಾಲಯ ಇದ್ದರೂ ಶೌಚಕ್ಕೆ ಬಯಲಿಗೆ ಹೋಗುತ್ತಿದ್ದಾರೆ. ಊರಿನಲ್ಲಿ ಇನ್ನೂ ಸುಮಾರು 30 ಮನೆಗಳಲ್ಲಿ ಶೌಚಾಲಯ ನಿರ್ಮಿಸಬೇಕಾಗಿದೆ’ ಎಂದು ಜಗಳೂರು ತಾಲ್ಲೂಕಿನ ಹನುಮಂತಾಪುರ ಗ್ರಾಮ ಪಂಚಾಯಿತಿಯ ಭರಮಸಮುದ್ರ ಗ್ರಾಮದ ಸದಸ್ಯ ಈರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೋಭಾವ ಬದಲಾಗಲಿ’
‘ಮೂರ್ನಾಲ್ಕು ತಿಂಗಳಲ್ಲಿ ಶೇ 100ರಷ್ಟು ಶೌಚಾಲಯ ನಿರ್ಮಿಸಲಾಗುವುದು. ಶೌಚಾಲಯ ನಿರ್ಮಿಸಿಕೊಳ್ಳಲು ಹಾಗೂ ಅದನ್ನು ಬಳಸುವಂತಾಗಲು ಮೊದಲು ಜನರ ಮನೋಭಾವ ಬದಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ಮಿಷನ್‌ ಅಡಿ ಜನಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನೀರಿನ ಲಭ್ಯತೆ ಇರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ ಬಳಕೆಯಾಗುತ್ತಿದೆ. ಶೌಚಾಲಯಗಳಿಗೆ ಅಗತ್ಯವಿರುವ ನೀರು ಪೂರೈಸಲು ಹಾಗೂ ಜನರ ಮನೋಭಾವ ಬದಲಾಯಿಸುವ ಒತ್ತು ನೀಡಲಾಗುವುದು’ ಎಂದರು.

‘ಗುಡಿಸಲು ಪರಿಗಣನೆಗಿಲ್ಲ’
‘ಆವರಗೆರೆ, ಮಟ್ಟಿಕಲ್‌ ಕೊಳೆಗೇರಿಗಳಲ್ಲಿ ಶೌಚಾಲಯ ನಿರ್ಮಿಸಿಕೊಡುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಗುಡಿಸಲು ಹಾಕಿಕೊಂಡಿರುವುದರಿಂದ ಶೌಚಾಲಯ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ನಿವೇಶನದ ಹಕ್ಕುಪತ್ರ ಅವರ ಹೆಸರಿನಲ್ಲಿ ಇಲ್ಲದೇ ಇರುವುದರಿಂದಲೂ ಶೌಚಾಲಯ ಕಟ್ಟಿಕೊಳ್ಳಲು ಆಗುತ್ತಿಲ್ಲ. ಸಮುದಾಯ ಶೌಚಾಲಯ ನಿರ್ಮಿಸಲು ಸ್ಥಳೀಯ ಆಡಳಿತ ಮುಂದೆ ಬರುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಯಲಿಗೆ ಶೌಚಕ್ಕೆ ಹೋಗುವಂತಾಗಿದೆ’ ಎಂದು ಜಿಲ್ಲಾ ಕೊಳೆಗೇರಿ ನಿವಾಸಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು ಅಸಮಾಧಾನ ವ್ಯಕ್ತಪಡಿಸಿದರು.

‘ಮೂರು ತಿಂಗಳ ಹಿಂದೆ ಶೌಚಾಲಯ ನಿರ್ಮಿಸಿಕೊಂಡಿದ್ದೆವು. ಆದರೆ, ನೀರಿನ ಸಮಸ್ಯೆ ಉಂಟಾಗಿದ್ದರಿಂದ ಗಂಡಸರು ಮತ್ತೆ ಬಯಲಿಗೇ ಶೌಚಕ್ಕೆ ತೆರಳುತ್ತಿದ್ದೇವೆ. ಈ ಭಾಗದಲ್ಲಿ ಇನ್ನೂ ಯುಜಿಸಿ ಸಂಪರ್ಕ ಜೋಡಿಸಿಲ್ಲ. ಹೀಗಾಗಿ ಇನ್ನೂ ಕೆಲವು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡಿಲ್ಲ’ ಎನ್ನುತ್ತಾರೆ ಕಬ್ಬೂರು ಬಸಪ್ಪ ನಗರದ ಅಜಯ್‌.

ಗೃಹ ಶೌಚಾಲಯ ನಿರ್ಮಾಣ ಪ್ರಗತಿ ವಿವರ
ತಾಲ್ಲೂಕು–ಗುರಿ–ಸಾಧನೆ–ಬಾಕಿ
ಚನ್ನಗಿರಿ–1,589–1,302–287
ದಾವಣಗೆರೆ–1,322–947–375
ಹರಿಹರ–657–531–126
ಹೊನ್ನಾಳಿ–1,965–1,265–700
ಜಗಳೂರು–3,101–888–2,213
ಒಟ್ಟು–8,634–4,933–3,701

* ಮಾಹಿತಿ: ಜಿಲ್ಲಾ ಪಂಚಾಯಿತಿ

Post Comments (+)