ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಮಾಜ ಕಲ್ಯಾಣ ರಾಜ್ಯ ಸಚಿವ ನಾರಾಯಣ ಸ್ವಾಮಿ ಆರೋಪ

ಸಚಿವರ ಪರಿಚಯಕ್ಕೂ ಅವಕಾಶ ನೀಡದ ವಿರೋಧ ಪಕ್ಷ; ನಾರಾಯಣ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘62 ವರ್ಷ ದೇಶವನ್ನು ಆಳಿದ ಕಾಂಗ್ರೆಸ್‌ ಪಕ್ಷಕ್ಕೆ ಸಂಸತ್ತಿನಲ್ಲಿ ಹೇಗೆ ನಡವಳಿಕೆ ಇರಬೇಕು ಎಂಬುದೇ ಗೊತ್ತಿಲ್ಲ. ನೂತನವಾಗಿ ಸಚಿವ ಸಂಪುಟಕ್ಕೆ ಸೇರಿಕೊಂಡವರನ್ನು ಪರಿಚಯ ಮಾಡಲೂ ಅವಕಾಶ ನೀಡದೇ ಗದ್ದಲ ಮಾಡಿದರು. ಅಧಿವೇಶನದಲ್ಲಿ ಪರಿಚಯ ಆಗದಿದ್ದರೆ ಏನಂತೆ, ಮತ ನೀಡಿದ ಜನರಿಗೆ ಪರಿಚಯ ಮಾಡಿಕೊಂಡು ಆಶೀರ್ವಾದ ಪಡೆಯಲು ಹೊರಟಿದ್ದೇವೆ’ ಎಂದು ಕೇಂದ್ರ ಸಮಾಜ ಕಲ್ಯಾಣ ರಾಜ್ಯ ಸಚಿವ ನಾರಾಯಣ ಸ್ವಾಮಿ ಹೇಳಿದರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊರೊನಾ ಇದೆ. ನಿಯಮ ಪಾಲನೆ ಮಾಡಬೇಕು. ಎಲ್ಲವೂ ಹೌದು. ಅದರ ಜತೆಗೆ ಮತದಾರರನ್ನು ನಾವು ತಲುಪಬೇಕು. ವಿಶ್ವಕ್ಕೆ ಕೊರೊನಾ ಅಪ್ಪಳಿಸಿದಾಗ ಸಾವು ನೋವು ಉಂಟಾಯಿತು. ಹಾಗಾಗಿ ಲಸಿಕೆಗಾಗಿ ವಿಜ್ಞಾನಿಗಳನ್ನು ಅವಲಂಬಿಸಬೇಕಾಯಿತು. ಲಸಿಕೆ ಬರುವ ಮೊದಲೇ ಲಸಿಕೆ ಬಗ್ಗೆ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಅಪ ನಂಬಿಕೆ ಹುಟ್ಟಿಸಿದವು. ಈ ಎಲ್ಲವನ್ನು ಮೀರಿ ಇಂದು ದೇಶದಲ್ಲಿ 57 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಈ ಮಾಹಿತಿಯನ್ನು ಜನರಿಗೆ ತಿಳಿಸುವುದು ಬೇಡ್ವ’ ಎಂದು ಪ್ರಶ್ನಿಸಿದರು.

ಕೊರೊನಾ ಬಂದಾಗ ಬಹಳ ಆಸ್ಪತ್ರೆಗಳಲ್ಲಿ ಆಮ್ಲಜನಕ ಇರಲಿಲ್ಲ. ಬೇಕಾದಷ್ಟು ಬೆಡ್‌ಗಳಿರಲಿಲ್ಲ. ಎಲ್ಲ ಆಸ್ಪತ್ರೆಗಳಿಗೆ ಮೂಲ ಸೌಕರ್ಯಗಳನ್ನು, ಸಲಕರಣೆಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಜನರ ಆರೋಗ್ಯಕ್ಕಾಗಿ ಸರ್ಕಾರ ದುಡಿಯುತ್ತಿದೆ ಎಂದು ಹೇಳಿದರು.

ಬಜೆಟ್‌ನ ಶೇ 25ರಷ್ಟು ಹಣ ಸರ್ಕಾರೇತರ ಸಂಸ್ಥೆಗಳಿಗೆ ಹೋಗುತ್ತಿದೆ. ಅದೇನಾಯಿತು ಎಂಬ ಲೆಕ್ಕ ಬೇಕಲ್ಲ. ಕೌಶಲಾಭಿವೃದ್ಧಿಗಾಗಿ ಹೋಗುವ ಅನುದಾನದಲ್ಲಿ ಎಷ್ಟು ಮಂದಿ ಉದ್ಯೋಗ ಪಡೆದುಕೊಂಡರು ಎಂಬುದು ಲೆಕ್ಕವಿಲ್ಲ. ಸ್ವಯಂ ಉದ್ಯೋಗ ಪಡೆದವರು ಸರ್ಕಾರದ ಒಂದು ಬೋರ್ಡ್‌ ಹಾಕಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಐಎಎಸ್‌, ಐಪಿಎಸ್‌ ಅಧಿಕಾರಿಗಳಲ್ಲಿ ದಲಿತರು ಎಷ್ಟಿದ್ದಾರೆ ಎಂದು ಹುಡುಕಿದರೆ ನಾಲ್ಕು ಜನ ಸಿಗಲ್ಲ. ಅದಕ್ಕಾಗಿ ಪ್ರತಿ ರಾಜ್ಯದಲ್ಲಿ 100 ಮಂದಿಗೆ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. 84 ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ನವೋದಯ ವಸತಿ ಶಾಲೆ ತೆರೆಯಲು ತೀರ್ಮಾನಿಸಲಾಗಿದೆ. ಅಂಬೇಡ್ಕರ್‌ ಫೌಂಡೇಶನ್‌ ಮೂಲಕ ಅಗತ್ಯ ಇರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು ಎಂದರು.

ತುಮಕೂರು–ದಾವಣಗೆರೆ ನೇರ ರೈಲು ಮಾರ್ಗಕ್ಕಾಗಿ ಕೇಂದ್ರ ಸರ್ಕಾರ ₹ 1901 ಕೋಟಿ ಅನುದಾನ ನೀಡಲು ಒಪ್ಪಿದೆ. ಶೇ 50 ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರದ ಜತೆಗೆ ಮಾತನಾಡಲಾಗಿದೆ. ಭೂಸ್ವಾಧೀನದ ಪರಿಹಾರ ಧನವನ್ನಾದರೂ ಅವರು ಭರಿಸಿದರೆ ಕೆಲಸ ಶುರುವಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್, ಮಾಡಾಳ್‌ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ಪ್ರೊ. ಲಿಂಗಣ್ಣ, ಮೇಯರ್‌ ಎಸ್.ಟಿ. ವೀರೇಶ್‌, ಮುಖಂಡರಾದ ನಂದೀಶ್‌, ವೈ.ಎ. ನಾರಾಯಣ ಸ್ವಾಮಿ, ಕೆ.ಎಸ್‌. ನವೀನ್‌, ಬಸವರಾಜ ನಾಯ್ಕ, ಶಂಕರಪ್ಪ, ಸುಧಾ ಜಯರುದ್ರೇಶ್‌, ಡಾ. ಎ.ಎಚ್‌. ಶಿವಯೋಗಿಸ್ವಾಮಿ, ಯಶವಂತರಾವ್‌ ಜಾಧವ್‌, ಅಣಬೇರು ಜೀವನಮೂರ್ತಿ ಅವರೂ ಇದ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಸ್ವಾಗತಿಸಿದರು. ಎಚ್‌. ನಾಗರಾಜ್‌ ವಂದಿಸಿದರು. ಬಿ.ಎಸ್‌. ಜಗದೀಶ್‌ ನಿರೂಪಿಸಿದರು.

‘ಬಿಜೆಪಿ ಬ್ರಾಹ್ಮಣರ ಪಕ್ಷವಲ್ಲ’

‘ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ. ಗರ್ಭಗುಡಿ ಸಂಸ್ಕೃತಿ. ದಲಿತರು ಬಾವುಟ ಕಟ್ಟಲು ಹೋಗಬಾರದು ಎಂದೆಲ್ಲ ಹೇಳುತ್ತಿದ್ದರು. 2014ರ ಚುನಾವಣೆಯ ಪೂರ್ವದಲ್ಲಿ ಪ್ರಧಾನಿಯಾಗಿ ಯಾವ ಬ್ರಾಹ್ಮಣನ್ನು ಕೂರಿಸುತ್ತಾರೆ ಎಂದು ವಿರೋಧಿಗಳು ಲೆಕ್ಕ ಹಾಕುತ್ತಿದ್ದರು. ಹಿಂದುಳಿದ ಸಮುದಾಯದಿಂದ ಬಂದ ನರೇಂದ್ರ ಮೋದಿಯನ್ನು ಪ್ರಧಾನಿ ಎಂದು ಘೋಷಿಸಿದ ಗಟ್ಟಿತನ ಆರ್‌ಎಸ್‌ಎಸ್‌ಗೆ ಮಾತ್ರ ಇರಲು ಸಾಧ್ಯ. ಇಂದು ಕೇಂದ್ರ ಸಚಿವ ಸಂಪುಟದಲ್ಲಿ 20 ಮಂದಿ ಎಸ್‌ಸಿ, ಎಸ್‌ಟಿಗಳಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಹಿಂದುಳಿದ ವರ್ಗದವರಿದ್ದಾರೆ’ ಎಂದು ಸಚಿವ ಎ. ನಾರಾಯಣ ಸ್ವಾಮಿ ತಿಳಿಸಿದರು.

‘ನಾನು ಕೇಂದ್ರ ಸಚಿವ ಆಗುತ್ತೇನೆ ಎಂಬ ಕನಸು ಕಂಡಿರಲಿಲ್ಲ. ಮೊದಲ ಬಾರಿ ಸಂಸದರಾದವರು ಎಲ್ಲಾದರೂ ಸಚಿವರಾಗುತ್ತಾರಾ? ಪ್ರಾಮಾಣಿಕತೆ, ದಕ್ಷತೆ, ಬದ್ಧತೆ, ದೇಶಪ್ರೇಮ ಇರುವ ಯಾವುದೇ ಕಾರ್ಯಕರ್ತನನ್ನು ದೇಶಕಟ್ಟುವ ಕೆಲಸದಲ್ಲಿ ಯಾವ ಹುದ್ದೆಯನ್ನೂ ಬಿಜೆಪಿ ನೀಡಬಲ್ಲದು ಎಂಬುದಕ್ಕೆ ನಾನೇ ಸಾಕ್ಷಿ’ ಎಂದು ಹೇಳಿದರು.

‘ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಲು ಎರಡು ಮೆಟ್ಟುಲು ಬಾಕಿ’

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ತೀರ್ಮಾನ ಮಾಡಲು ಇನ್ನು ಎರಡು ಮೆಟ್ಟಿಲು ಬಾಕಿ ಇದೆ ಎಂದು ಕೇಂದ್ರ ಸಮಾಜ ಕಲ್ಯಾಣ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಾಷ್ಟ್ರೀಯ ಯೋಜನೆ ಎಂದು ಶೀಘ್ರ ಘೊಷಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಯಾವ ಭಯಕ್ಕೆ, ಯಾರ ಒತ್ತಡಕ್ಕೆ ಒಳಗಾಗಿ ಜಾತಿ ಗಣತಿಗೆ ₹ 160 ಕೋಟಿ ಅನುದಾನ ಒದಗಿಸಿ ಸಮೀಕ್ಷೆ ನಡೆಸಿದರು ಎಂಬುದು ಗೊತ್ತಿಲ್ಲ. ಯಾರು ಸಮೀಕ್ಷೆ ಮಾಡಿಸಿದ್ರೋ ಅವರೇ ಮುಖ್ಯಮಂತ್ರಿ ಆಗಿದ್ದಾಗಲೇ ವರದಿ ಬಂದಿತ್ತು. ಅದರ ಬಗ್ಗೆ ಸದನದಲ್ಲಿ ಪ್ರಸ್ತಾಪವಾದರೂ ಮಾತನಾಡಲಿಲ್ಲ. ಈಗ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಬಂದಾಗ ಅವರಿಗೆ ವರದಿಯ ನೆನಪಾಗಿದೆ’ ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೇ ಟೀಕಿಸಿದರು.

‘ಸದಾಶಿವ ಆಯೋಗದ ಜಾರಿ ಪರ ಗಟ್ಟಿಯಾಗಿ ನಿಂತಿದ್ದರಿಂದ ನಾನು ಆನೆಕಲ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿರಬಹುದು. ಆದರೆ ನನ್ನ ನಿಲುವುಗಳು ಬದಲಾಗಲ್ಲ. ಈಗ ಕೇಂದ್ರ ಸಚಿವಾಗಿದ್ದೇನೆ. ಸದಾಶಿವ ಆಯೋಗದ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಮತ್ತೆ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು