ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡ ನೀರುನಾಯಿ

ನದಿ ತುಂಬಿ ಹರಿಯುವಾಗ ಹೊರಬರುವ ಅಪರೂಪದ ವನ್ಯಜೀವಿ, ಪ್ರವಾಸಿಗರ ಪ್ರಮುಖ ಆಕರ್ಷಣೆ
Published 7 ಜುಲೈ 2024, 15:49 IST
Last Updated 7 ಜುಲೈ 2024, 15:49 IST
ಅಕ್ಷರ ಗಾತ್ರ

ದಾವಣಗೆರೆ/ಹರಿಹರ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ನೀರುನಾಯಿಗಳು (ಆಟರ್) ಹರಿಹರ ಸಮೀಪ ಕಾಣಿಸಿಕೊಂಡಿವೆ. ಅಪರೂಪದ ಈ ವನ್ಯಜೀವಿಯನ್ನು ಕಣ್ತುಂಬಿಕೊಳ್ಳಲು ಜನರು ನದಿಯತ್ತ ದೃಷ್ಟಿಹಾಯಿಸುತ್ತಿ್ದ್ದಾರೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಜಾಕ್‌ವೆಲ್‌ ಸಮೀಪದಲ್ಲಿ ನೀರುನಾಯಿ ಕುಟುಂಬವೊಂದು ಪ್ರತ್ಯಕ್ಷವಾಗಿದೆ. ನದಿಯಿಂದ ಹೊರಬಂದು ಆಗಾಗ ದರ್ಶನ ನೀಡುವ ಐದಾರು ನೀರುನಾಯಿಗಳ ಗುಂಪು ಜನರ ದೃಷ್ಟಿಗೆ ನಾಚಿ ಮತ್ತೆ ನೀರಿಗೆ ಇಳಿಯುತ್ತಿವೆ. ಈ ದೃಶ್ಯವನ್ನು ಕಂಡು ಜನರು ಪುಳಕಿತರಾಗಿದ್ದಾರೆ.

ತುಂಗಭದ್ರಾ ನದಿ ನೀರುನಾಯಿಗಳ ಆವಾಸ ಸ್ಥಾನ. ಶಿವಮೊಗ್ಗ ತಾಲ್ಲೂಕಿನ ಗಾಜನೂರು ಬಳಿ ತುಂಗಾ ನದಿಗೆ ನಿರ್ಮಿಸಿದ ಜಲಾಶಯದಿಂದ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ವರೆಗಿನ ನದಿಯಲ್ಲಿ ಇವು ವಾಸಿಸುತ್ತಿವೆ. ನದಿಯಲ್ಲಿ ನೀರು ಹೆಚ್ಚಾದಾಗ ಮಾತ್ರ ಹೊರಗೆ ಕಾಣಿಸಿಕೊಳ್ಳುತ್ತವೆ. ತೀರಾ ನಾಚಿಕೆ ಸ್ವಭಾವದ ನೀರುನಾಯಿಗಳು ಮೂರು ದಿನಗಳಿಂದ ಹರಿಹರ ಸಮೀಪ ಪ್ರತ್ಯಕ್ಷವಾಗಿವೆ.

‘ತುಂಗಭದ್ರಾ ನದಿಯಲ್ಲಿ ನೀರುನಾಯಿಗಳಿವೆ. ನದಿಯಲ್ಲಿಯೇ ವಾಸಿಸುವ ಈ ವನ್ಯಜೀವಿ ನೀರು ಹೆಚ್ಚಾದಾಗ ಹೊರಗೆ ಬರುತ್ತವೆ. ಈ ವೇಳೆ ಮನುಷ್ಯನ ಕಣ್ಣಿಗೆ ಬೀಳುತ್ತವೆ. ನದಿಯಲ್ಲಿ ನೀರು ಹೆಚ್ಚಾದಾಗ ಆಹಾರ ಸಿಗುವುದು ಅಪರೂಪವಾಗುತ್ತದೆ. ಮೀನುಗಳು ಕೈಗೆ ಸಿಗದಿದ್ದಾಗ ಆಹಾರ ಅರಸಿ ನಾಲೆ, ಹಳ್ಳ, ನದಿ ದಡಕ್ಕೆ ಬರುತ್ತವೆ. ಏಡಿ, ಕಪ್ಪೆ ಸೇರಿ ಇತರೆ ಪ್ರಾಣಿಗಳನ್ನು ತಿನ್ನುತ್ತವೆ. ನೀರುನಾಯಿಗಳು ನದಿಯಿಂದ ಹೊರಬರುವುದು ಸಾಮಾನ್ಯ ವಿದ್ಯಮಾನ’ ಎಂದು ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ ಸಮೀಪದ 34 ಕಿ.ಮೀ ವ್ಯಾಪ್ತಿಯ ತುಂಗಭದ್ರಾ ನದಿಯನ್ನು ‘ನೀರುನಾಯಿ ಸಂರಕ್ಷಿತ ಪ್ರದೇಶ’ ಎಂಬುದಾಗಿ ಘೋಷಣೆ ಮಾಡಲಾಗಿದೆ. ನದಿಯ ಉಳಿದ ಭಾಗದಲ್ಲಿಯೂ ನೀರುನಾಯಿ ಸಂಕುಲವಿದೆ. ಕುಟುಂಬವಾಗಿ ವಾಸಿಸುವ ಈ ಗುಂಪಿನಲ್ಲಿ ಹೆಣ್ಣು, ಗಂಡು ಹಾಗೂ ಮರಿಗಳಿರುತ್ತವೆ. ಇತರ ವನ್ಯಜೀವಿಗಳಂತೆ ಇವು ಕೂಡ ನದಿಯಲ್ಲಿ ಗಡಿಯನ್ನು ಗುರುತಿಸಿಕೊಂಡು ವಾಸಿಸುತ್ತವೆ. ಸಾಮಾನ್ಯವಾಗಿ 5ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ನೆಲೆಕಂಡುಕೊಳ್ಳುವ ಈ ನೀರುನಾಯಿ ಕುಟುಂಬ ತುಂಬಾ ನಾಚಿಕೆ ಸ್ವಭಾವದ ಪ್ರಾಣಿ.

‘ಇವು ನದಿ ದಡದ ಗಿಡ, ಮರಗಳ ಸಮೀಪದಲ್ಲಿ ಬಿಲಗಳನ್ನು ನಿರ್ಮಿಸಿಕೊಂಡು ಮರಿಗಳಿಗೆ ಜನ್ಮ ನೀಡುತ್ತವೆ. ನದಿಯಲ್ಲಿರುವ ಕಲ್ಲುಬಂಡೆಗಳ ಸಂದುಗಳನ್ನು ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿರುತ್ತವೆ. ನಡುಗಡ್ಡೆ, ಮರಳಿನ ದಿಬ್ಬಗಳಲ್ಲಿ ಬಿಸಿಲಿಗೆ ಮೈಯೊಡ್ಡಿ ವಿರಮಿಸುತ್ತವೆ. ನದಿಯಲ್ಲಿ ನೀರು ಹೆಚ್ಚಾದಾಗ ಮರಳು, ಮಣ್ಣಿನ ದಿಬ್ಬಗಳು ಕಣ್ಮರೆಯಾಗುತ್ತವೆ. ಈ ಸಮಯದಲ್ಲಿ ಮಾತ್ರ ನದಿಯ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಒಮ್ಮೆ ಕಾಣಿಸಿಕೊಂಡ ಸ್ಥಳದಲ್ಲಿ ಮತ್ತೊಮ್ಮೆ ಕಣ್ಣಿಗೆ ಬೀಳುವುದು ಅಪರೂಪ’ ಎನ್ನುತ್ತಾರೆ ಸಮದ್‌ ಕೊಟ್ಟೂರು.

ತುಂಗಭದ್ರಾ ನದಿಯಲ್ಲಿ ಈಜಾಡುತ್ತಿರುವ ನೀರುನಾಯಿಗಳು ಸಡಗರ, ಸಂಭ್ರಮದಿಂದ ಇರುವಂತೆ ಗೋಚರವಾಗುತ್ತಿವೆ. ಕೆಲ ಸಮಯದ ಬಳಿಕ ದಡವನ್ನೇರಿ ಕುಳಿತುಕೊಳ್ಳುತ್ತ, ಮುದ್ದಾಡುವ ದೃಶ್ಯ ಮನಮೋಹಕ. ನೀರಿನಲ್ಲಿ ಸಿಕ್ಕ ಮೀನುಗಳನ್ನು ದಡಕ್ಕೆ ತಂದು ಸೇವಿಸುತ್ತವೆ. ನದಿಯಿಂದ ಹೊರಬಂದು ಮಲ, ಮೂತ್ರ ವಿಸರ್ಜನೆ ಮಾಡುತ್ತವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದ ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡ ಅಪರೂಪದ ನೀರುನಾಯಿಗಳು ಮೀನು ಬೇಟೆಯಾಡಿ ಸವಿದವು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಹರಿಹರದ ತುಂಗಭದ್ರಾ ನದಿಯಲ್ಲಿ ಕಾಣಿಸಿಕೊಂಡ ಅಪರೂಪದ ನೀರುನಾಯಿಗಳು ಮೀನು ಬೇಟೆಯಾಡಿ ಸವಿದವು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ನದಿ ತುಂಬಿದಾಗ ಹೊರಬರುವ ಪ್ರಾಣಿ ಮೀನು ಸಿಗದಿದ್ದಾಗ ಏಡಿ, ಕಪ್ಪೆ ಆಹಾರ ನಾಚಿಕೆ ಸ್ವಭಾವದ ಪ್ರಾಣಿಗೆ ಮನಸೋತ ಜನ

ನೀರುನಾಯಿ ನದಿಯಿಂದ ಹೊರಬಂದಾಗ ಬೇಟೆಗೆ ಸಿಲುಕುವ ಅಪಾಯವಿದೆ. ನೀರುನಾಯಿ ಸಂರಕ್ಷಣೆಗೆ ಗಮನ ಹರಿಸುವ ಅಗತ್ಯವಿದೆ. ಬೇಟೆಗಾರರಿಂದ ಅಪರೂಪದ ವನ್ಯಜೀವಿ ರಕ್ಷಿಸಬೇಕಿದೆ.
ಸಮದ್‌ ಕೊಟ್ಟೂರು ವನ್ಯಜೀವಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT