ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು | ಬರಗಾಲದಿಂದಾಗಿ ಕುಂಠಿತಗೊಂಡ ಭತ್ತದ ಇಳುವರಿ

Published 28 ಮೇ 2024, 7:02 IST
Last Updated 28 ಮೇ 2024, 7:02 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಬೇಸಿಗೆ ಭತ್ತದ ಬೆಳೆಗೆ ಭದ್ರಾ ನಾಲೆ ನೀರು ಸಿಗದ ಕಾರಣ ನೀರಾವರಿ ಪ್ರದೇಶದ ಅನೇಕ ರೈತರು ಭತ್ತ ಬೆಳೆಯಲಿಲ್ಲ. ಕೊಳವೆಬಾವಿ ಸೌಲಭ್ಯ ಇರುವ ಕೆಲವೇ ರೈತರು ಈ ಬಾರಿ ಭತ್ತ ಬೆಳೆದಿದ್ದು, ಭತ್ತದ ಒಕ್ಕಲು ನಡೆದಿದೆ.

ಮುಂಗಾರು ಪೂರ್ವ ಹಂತದಲ್ಲಿ ಪ್ರತಿ ಬಾರಿ ಭತ್ತದ ಒಕ್ಕಣೆ ಭರದಿಂದ ನಡೆಯುತ್ತಿತ್ತು. ಬರಗಾಲದ ಹಿನ್ನೆಲೆಯಲ್ಲಿ ಕ್ಷೇತ್ರ ಕಡಿಮೆಯಾಗಿದ್ದು, ಅಲ್ಲಲ್ಲಿ ಕೆಲವು ರೈತರು ಮಳೆಯ ಆತಂಕದ ನಡುವೆಯೇ ಭತ್ತದ ಒಕ್ಕಣೆಯಲ್ಲಿ ತೊಡಗಿದ್ದಾರೆ.

ಮಳೆಯ ಕೊರತೆ ಹಾಗೂ ಭದ್ರಾ ನೀರು ದೊರೆಯದ್ದರಿಂದ ಭತ್ತದ ಇಳುವರಿಯೂ ಕುಸಿದಿದೆ. ಎಕರೆಗೆ 20ರಿಂದ 30 ಕ್ವಿಂಟಲ್ ಭತ್ತದ ಇಳುವರಿ ಬರುತ್ತಿದೆ. ಬೆಲೆಯೂ ಈ ಬಾರಿ ಇಳಿದಿರುವ ಕಾರಣ ರೈತರು ನಿರಾಶೆಗೊಂಡಿದ್ದಾರೆ.

ಪ್ರತಿ ಕ್ವಿಂಟಲ್‌ಗೆ ಭತ್ತದ ದರ ₹ 2,500ರಿಂದ ₹ 2,700ರ ಆಸುಪಾಸಿನಲ್ಲಿದೆ. ಕಳೆದ ಬಾರಿ ₹ 3,600ರವರೆಗೆ ಬೆಲೆ ಸಿಕ್ಕಿತ್ತು. ಹೋಬಳಿಯಲ್ಲಿ 2,400 ಹೆಕ್ಟೇರ್ ನೀರಾವರಿ ಪ್ರದೇಶ ಇದೆ. ಈ ಬಾರಿ 300ರಿಂದ 400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ. ಭತ್ತದ ಇಳುವರಿ ಕುಸಿದಿದ್ದರೂ ಬೆಲೆ ಕಡಿಮೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಣಿಗೆರೆಯ ರೈತ ಜಗದೀಶ್‌ ಬೇಸರಿಸಿದರು.

ಭತ್ತದ ತೆನೆಯ ತುದಿಯಲ್ಲಿ ಕಾಳು ಕಟ್ಟಿಲ್ಲ. ಜೊಳ್ಳಾಗಿವೆ. ಹಾಗಾಗಿ ನಿರೀಕ್ಷಿತ ಇಳುವರಿ ಬರಲಿಲ್ಲ. ಖರ್ಚು ಮತ್ತು ಈಗ ದೊರೆಯುತ್ತಿರುವ ದರದ ತುಲನೆ ಮಾಡಿದರೆ ತೀವ್ರ ನಷ್ಟ ಎದುರಾಗುತ್ತಿದೆ ಎಂಬುದು ರೈತರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT