ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಅಲ್ಪ ಸಂಖ್ಯಾತರು ಮತದಾನದಲ್ಲಿ ಪಾಲ್ಗೊಳ್ಳಿ: ಸಿ. ಸತ್ಯಭಾಮ

ಮತದಾನ ಜಾಗೃತಿ
Last Updated 28 ಮಾರ್ಚ್ 2019, 14:09 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಲೋಕಸಭಾ ಚುನಾವಣೆಗೆ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಲಿಂಗತ್ವ ಅಲ್ಪಸಂಖ್ಯಾತರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ. ಸತ್ಯಭಾಮ ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ, ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಬ್ಬವಿದ್ದಂತೆ. ಪುರುಷರು, ಮಹಿಳೆಯರಂತೆ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಾದ್ಯಂತ 700ಕ್ಕೂ ಅಧಿಕ ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ 68 ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ 89 ಮಂದಿಯ ಹೆಸರು ಸೇರ್ಪಡೆಯಾಗಿದೆ. ಇನ್ನುಳಿದವರು ಏಕೆ ನೋಂದಾಯಿಸಿಕೊಂಡಿಲ್ಲ’ ಎಂದು ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಚಂದ್ರಕಲಾ ಅವರನ್ನು ಪ್ರಶ್ನಿಸಿದರು.

‘ಕೆಲವರು ಕುಟುಂಬದ ಜೊತೆಗಿದ್ದು, ಅವರ ಹೆಸರುಗಳು ಗುರುತಿನ ಚೀಟಿಗಳಲ್ಲಿ ಪುರುಷ ಎಂಬುದಾಗಿ ದಾಖಲಾಗಿರುವವರೇ ಹೆಚ್ಚಿದ್ದಾರೆ. ಹೀಗಾಗಿ ಅವರು ಸೀರೆ ತೊಟ್ಟು ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾಗಿ ಗುರುತಿಸಿಕೊಳ್ಳಲು ಮುಜುಗರ ಪಡುತ್ತಿದ್ದಾರೆ’ ಎಂದು ಚಂದ್ರಕಲಾ ಪ್ರತಿಕ್ರಿಯಿಸಿದರು.

‘ಮತದಾನಕ್ಕೆ ಅರ್ಹರಾದ ಲಿಂಗತ್ವ ಅಲ್ಪಸಂಖ್ಯಾತರೆಲ್ಲರೂ ತಪ್ಪದೇ ಈ ಬಾರಿ ಮತದಾನ ಮಾಡುತ್ತಾರೆ. ಆದರೆ, ನಮಗೆ ವಾಸಿಸಲು ಮನೆಗಳಿಲ್ಲ. ವಸತಿ ಸೌಲಭ್ಯ ಇದ್ದವರಿಗೇ ಸೌಕರ್ಯ ನೀಡುತ್ತಿದ್ದಾರೆ. ನಮಗೂ ವಸತಿ ಸೌಲಭ್ಯ ನೀಡಬೇಕು’ ಎಂದು ಅನೇಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಸಿಇಒ, ‘ಸ್ವಂತ ನಿವೇಶನ ಇದ್ದವರಿಗೆ ಮನೆ ನಿರ್ಮಿಸಿಕೊಳ್ಳಲು ನೆರವು ನೀಡಲು ಸರ್ಕಾರದಿಂದ ಅನೇಕ ಯೋಜನೆಗಳಿವೆ. ಆದರೆ, ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ವಿಷಯ ಚರ್ಚಿಸುವುದರಿಂದ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಜಾನಾಯಕ್, ‘ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಚುನಾವಣಾ ಗುರುತಿನ ಚೀಟಿ ಪಡೆಯಲು ಎಲ್ಲ ಲಿಂಗತ್ವ ಅಲ್ಪಸಂಖ್ಯಾತರು ಮುಂದಾಗಬೇಕು’ ಎಂದು ತಿಳಿಸಿದರು.

ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಕೆ.ಕೆ. ಕಮಾನಿ, ‘ನೆರೆಹೊರೆಯ ಎಲ್ಲ ಸ್ನೇಹಿತರು, ಸಂಬಂಧಿಕರಿಗೂ ಮತದಾನದ ಮಹತ್ವ ತಿಳಿಸಬೇಕು. ಸ್ಪರ್ಧಿಸಿರುವ ಯಾವ ಅಭ್ಯರ್ಥಿಗೂ ಮತದಾನ ಮಾಡಲು ಇಷ್ಟವಿಲ್ಲ ಎಂದರೆ ನೋಟಾ ಚಲಾವಣೆಗೆ ಅವಕಾಶವಿದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT