ಹಿಂದೆ ಕಾಯಕವೇ ಪೂಜೆ, ಈಗ ಪೂಜೆಯೇ ಕಾಯಕ: ಡಾ.ಬಿ.ಟಿ. ಲಲಿತಾ ನಾಯ್ಕ್‌

7
ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಹಿಂದೆ ಕಾಯಕವೇ ಪೂಜೆ, ಈಗ ಪೂಜೆಯೇ ಕಾಯಕ: ಡಾ.ಬಿ.ಟಿ. ಲಲಿತಾ ನಾಯ್ಕ್‌

Published:
Updated:
Deccan Herald

ದಾವಣಗೆರೆ: ಹನ್ನೆರಡನೇ ಶತಮಾನದಲ್ಲಿ ಕಾಯಕವೇ ಪೂಜೆ ಎಂದು ಶರಣರು ಹೇಳಿದರು. ಈಗ ಪೂಜೆಯೆ ಕಾಯಕವಾಗಿದೆ. ಪೂಜೆ ಹೆಸರಿನಲ್ಲಿ ವಂಚನೆಯಾಗುತ್ತಿದೆ ಎಂದು ಸಾಹಿತಿ ಡಾ.ಬಿ.ಟಿ. ಲಲಿತಾ ನಾಯ್ಕ್‌ ವಿಷಾದಿಸಿದರು.

ಕಲಾಕುಂಚ ಸಂಸ್ಥೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ, ೨೦೧೭-೧೮ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ಮಕ್ಕಳಿಗೆ ಕನ್ನಡ ಕೌಸ್ತುಭ, ಒಟ್ಟು ಅಂಕ ೬೨೫ಕ್ಕೆ ೬೦೦ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸರಸ್ವತಿ ಪುರಸ್ಕಾರ, ಜಿಲ್ಲಾ ಮಟ್ಟದಲ್ಲಿ ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಕ್ತ ಚೆಲ್ಲುವುದು ಬೇಡ, ದೇಹದಲ್ಲಿ ರಕ್ತ ಹರಿದಾಡಲಿ. ಸಾಯುವ ಭಾರತ ನಮಗೆ ಬೇಡ, ಚೈತನ್ಯದ ದೇಶ ನಮ್ಮದಾಗಬೇಕು. ಯುದ್ಧ, ಬಂದೂಕುಗಳ ಗೊಡವೆಯೆ ಬೇಡ ಎಂದು ಹೇಳಿದರು.

ರಾಜಕಾರಣದಲ್ಲಿ ಪ್ರಾಮಾಣಿಕ ಬದುಕು ಸಾಗಿಸುವುದು ಕಷ್ಟ. ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿಯೆ ಅದು ತಮಗೆ ಅಲರ್ಜಿ ಎನಿಸುತ್ತಿದೆ. ಚುನಾವಣೆ ರಣರಂಗವಾಗಬಾರದು, ಪ್ರೀತಿಯಿಂದ ಆ ಪ್ರಕ್ರಿಯೆ ನಡೆಯಬೇಕು. ಪ್ರತಿಭಾವಂತರನ್ನು ಆಯ್ಕೆ ಮಾಡಿ ಕಳಿಸಬೇಕು. ಆಗ ಒಳ್ಳೆಯ ಸಮಾಜವನ್ನು ನಿರೀಕ್ಷಿಸಲು ಸಾಧ್ಯ ಎಂದರು.

ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕೆಲಸದಲ್ಲಿ ಪ್ರೀತಿ, ನಿಷ್ಠೆ, ಪ್ರಾಮಾಣಿಕತೆ ಇರಬೇಕು. ನಮ್ಮ ಇತಿಮಿತಿಯಲ್ಲೇ ಖುಷಿಯಿಂದ ಕೆಲಸ ಮಾಡಬೇಕು. ಪಾಲಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು, ಪ್ರೀತಿ ತೋರಿಸಬೇಕು. ಮಕ್ಕಳು ದೊಡ್ಡವರಾದ ಮೇಲೆ ಅಂತರ್ಜಾತಿ ವಿವಾಹ ಆದರೆ ಅಪರಾಧವಲ್ಲ. ಅವರನ್ನೂ ಬದುಕಲು ಬಿಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿದರು. ಕಲಾಕುಂಚ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಅಧ್ಯಕ್ಷ ಕೆ.ಎಚ್. ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಉದ್ಯಮಿ ಮಲ್ಯಾಡಿ ಪ್ರಭಾಕರ ಶೆಟ್ಟಿ, ಹೇಮಾ ಶಾಂತಪ್ಪ ಪೂಜಾರಿ, ರೇಖಾ ಪುರಾಣಿಕ್ ಹಾಜರಿದ್ದರು.

ದೇವಸ್ಥಾನಕ್ಕೆ ಮಹಿಳೆ ಪ್ರವೇಶಕ್ಕೂ ಪ್ರವಾಹಕ್ಕೂ ಸಂಬಂಧವಿಲ್ಲ

ಅಯ್ಯಪ್ಪನ ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಹೋಗುವುದಕ್ಕೂ, ಪ್ರಕೃತಿ ವಿಕೋಪ ಉಂಟಾಗಿದ್ದಕ್ಕೂ ಸಂಬಂಧವಿಲ್ಲ. ಕೊಡಗು ಮತ್ತು ಕೇರಳದಲ್ಲಿ ಪ್ರವಾಹ ಬಂದಿದ್ದಕ್ಕೆ ಪರಿಸರ ನಾಶವೇ ಕಾರಣ ಎಂದು ಬಿ.ಟಿ. ಲಲಿತಾ ನಾಯ್ಕ್‌ ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !