ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಹಕಾರ ಬ್ಯಾಂಕ್‌ಗಳು ಬಿಒಎಂ ರಚಿಸದಿದ್ದರೆ ದಂಡ

ಕರ್ನಾಟಕ ರಾಜ್ಯ ಕೊ–ಅಪೆಕ್ಸ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಸ್.ಜಿ. ಕುಲಕರ್ಣಿ ಎಚ್ಚರ
Last Updated 12 ಫೆಬ್ರುವರಿ 2023, 4:46 IST
ಅಕ್ಷರ ಗಾತ್ರ

ದಾವಣಗೆರೆ: ‘ಭಾರತೀಯ ರಿಸರ್ವ್ ಬ್ಯಾಂಕ್‌ ಆದೇಶದನ್ವಯ ₹100 ಕೋಟಿಗೂ ಮಿಕ್ಕಿ ಠೇವಣಿ ಹೊಂದಿರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ (ಬಿಒಎಂ) ಹೊಂದಿರಬೇಕಾಗಿದ್ದು ಕಡ್ಡಾಯ. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಕೊ–ಅಪೆಕ್ಸ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ (ಐಟಿ) ಎಸ್.ಜಿ. ಕುಲಕರ್ಣಿ ಎಚ್ಚರಿಸಿದರು.

ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಹೈಟೆಕ್ ರಾಜ್ಯಮಟ್ಟದ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಪಟ್ಟಣ ಸಹಕಾರ ಬ್ಯಾಂಕ್‌ಗಳು ತಮ್ಮ ಕಾರ್ಯಾಚರಣೆಯ ಪ್ರದೇಶವನ್ನು ವಿಸ್ತರಿಸಲು ಮತ್ತು ಹೊಸ ಶಾಖೆಗಳನ್ನು ತೆರೆಯಲು ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ಹೊಂದಿರಬೇಕಾಗಿದ್ದು ಕಡ್ಡಾಯ. ಇಲ್ಲದಿದ್ದರೆ ಸಮಸ್ಯೆ ಎದುರಿಸ ಬೇಕಾಗುತ್ತದೆ’ ಎಂದು ಹೇಳಿದರು.

‘ವೃತ್ತಿಪರ ಕೊರತೆ, ಪಟ್ಟಭದ್ರ ಹಿತಾಸಕ್ತಿ ಹಾಗೂ ಮೇಲ್ವಿಚಾರಣೆ ನಿಯಂತ್ರಣ ಕೊರತೆಯಿಂದಾಗಿ ಪಟ್ಟಣ ಸಹಕಾರ ಬ್ಯಾಂಕ್‌ಗಳ ಪ್ರಭಾವ ಕಡಿಮೆಯಾಗುತ್ತಿವೆ. ವಾಣಿಜ್ಯ ಬ್ಯಾಂಕುಗಳಿಗಿಂತ ನಮ್ಮ ಬ್ಯಾಂಕ್‌ಗಳಲ್ಲಿ ಉತ್ತಮ ಸೇವೆ ದೊರೆಯುತ್ತಿದ್ದರೂ ಗುರು ರಾಘವೇಂದ್ರ ಬ್ಯಾಂಕ್‌ನಿಂದಾಗಿ ಕೆಟ್ಟ ಹೆಸರು ಬರುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿಹೋಗುವ ಇಲ್ಲವೇ ವಿಲೀನವಾಗುವ ಸಂಭವ ಉಂಟು. ಆದ್ದರಿಂದ ಎಚ್ಚೆತ್ತುಕೊಳ್ಳುವುದು ಒಳಿತು’ ಎಂದರು.

‘ಸಹಕಾರ ರಂಗ ಸ್ವಾತಂತ್ರ್ಯಪೂರ್ವದಿಂದಲೂ ತನ್ನ ಕೆಲಸ ಮಾಡಿದೆ. ಆಗಿನ ಕಾಲದಲ್ಲೇ ಸಂವಿಧಾನ ತಿದ್ದುಪಡಿ ಮಾಡಿದ ನಂತರ ಸಹಕಾರ ಕ್ಷೇತ್ರದಲ್ಲೂ ಹಲವಾರು ತಿದ್ದುಪಡಿ ಮಾಡಲಾಗಿದೆ. ಆಡಳಿತ ಯಂತ್ರಕ್ಕೆ ಸರಿಯಾದ ಮಾಹಿತಿ, ತಂತ್ರಜ್ಞಾನ ಕೊರತೆ ಇರುವ ಕಾರಣ ಇಂತಹ ತರಬೇತಿ ನೀಡಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕೆ ಮಹಾಮಂಡಳದ ಅಧ್ಯಕ್ಷ ಡಾ.ಬಿ.ಡಿ. ಭೂಕಾಂತ್ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ‘ಸಹಕಾರ ಮಹಾಮಂಡಲ ಬಲಿಷ್ಠಗೊಳ್ಳಲು ಪಟ್ಟಣ ಸಹಕಾರ ಬ್ಯಾಂಕುಗಳ ಕೊಡುಗೆ ಮಹತ್ತರ. ಯಾವುದೋ ಒಂದು ಸಹಕಾರ ಸಂಘ ನಷ್ಟ ಹೊಂದಿದರೆ ಎಲ್ಲಾ ಬ್ಯಾಂಕುಗಳು ಅದೇ ರೀತಿ ಎನ್ನುವ ಮನೋಭಾವ ಸಹಕಾರ ಇಲಾಖೆಯ ಅಧಿಕಾರಿಗಳಲ್ಲಿ ಇದೆ. ಆದಕಾರಣ ಅಲ್ಲಿ ಕೆಲಸ ಮಾಡುವವರು ಉತ್ತಮ ರೀತಿಯಲ್ಲಿ ಸೇವ ಸಲ್ಲಿಸುವ ಮೂಲಕ ಬದಲಾದ ಕಾನೂನು, ನಿಯಮಗಳ ಆಧಾರದಲ್ಲಿ ಸಹಕಾರ ಸಂಘಗಳನ್ನು ನಡೆಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ‘ಕಾನೂನು ಮತ್ತು ಸಹಕಾರ ಕ್ಷೇತ್ರದ ತಿದ್ದುಪಡಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಕೆ. ಮಹೇಶ್ವರಪ್ಪ, ‘ಸಹಕಾರ ಕಾನೂನು, ದಾವಣಗೆರೆ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ರಾಮರೆಡ್ಡಿ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಉಪಾಧ್ಯಕ್ಷ ಬೇತೂರು ಟಿ.ರಾಜಣ್ಣ, ನಿರ್ದೇಶಕರಾದ ಎಚ್.ಬಸವರಾಜಪ್ಪ, ಡಿ.ಎಂ. ಮುರಿಗೇಂದ್ರಯ್ಯ, ಬಿ.ಶೇಖರಪ್ಪ, ಕೆ.ಜಿ.ಸುರೇಶ್, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಚ್. ಸಂತೋಷ್‌ಕುಮಾರ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT