ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಿಸಿಲಿನ ತಾಪಕ್ಕೆ ಜನ ಹೈರಾಣು: ಮುಂದಿನ 5 ದಿನ ತಾಪಮಾನ ಹೀಗಿರಲಿದೆ...

ಮಾರ್ಚ್ ತಿಂಗಳಲ್ಲಿ 40 ಡಿಗ್ರಿ ಸೆಂಟಿಗ್ರೇಡ್ ತಲುಪುವ ಸಾಧ್ಯತೆ
Published 22 ಫೆಬ್ರುವರಿ 2024, 5:15 IST
Last Updated 22 ಫೆಬ್ರುವರಿ 2024, 5:15 IST
ಅಕ್ಷರ ಗಾತ್ರ

ದಾವಣಗೆರೆ: ಬೆಣ್ಣೆದೋಸೆ ನಗರಿಯಲ್ಲಿ ದಾವಣಗೆರೆಯಲ್ಲಿ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ.

ಜನರು ಬಿಸಿಲಿನ ತಾಪ ತಣಿಸಿಕೊಳ್ಳಲು ತಂಪು ಪಾನೀಯ, ಎಳನೀರು, ಕಬ್ಬಿನ ರಸ, ಹಣ್ಣುಗಳ ಮೊರೆ ಹೋಗಿದ್ದಾರೆ. ಜನರ ದಾಹ ತಣಿಸಲು ವಿವಿಧ ವೃತ್ತಗಳಲ್ಲಿ ಹಣ್ಣು, ಎಳನೀರು ಹಾಗೂ ಕಬ್ಬಿನ ಜ್ಯೂಸ್ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಒಂದಷ್ಟು ಕಾಸು ಕಂಡುಕೊಂಡಿದ್ದಾರೆ.

ಅಕ್ಯು ವೆದರ್ ಮಾಹಿತಿಯ ಪ್ರಕಾರ ಫೆ.20ರ ಉಷ್ಣಾಂಶ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇದೆ. ಕಳೆದ ವರ್ಷ ಇದೇ ದಿನ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, 17 ಡಿಗ್ರಿ ಕನಿಷ್ಠ ಇತ್ತು.

ಸಾಮಾನ್ಯವಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ವೆಸ್ಟರ್ನ್ ಡಿಸ್ಟರ್ಬನ್ಸ್ ಚಟುವಟಿಕೆ ಜಾಸ್ತಿಯಾದಾದಾಗ  ಉತ್ತರ ಕರ್ನಾಟಕದಲ್ಲಿ ಚಳಿಯಾಗುತ್ತಿತ್ತು. ಈಗ ಅದು ಭಾರತಕ್ಕೆ ಬಂದಿಲ್ಲ. ಅದಕ್ಕಾಗಿಯೇ ಬಿಸಿಲು ಹೆಚ್ಚಾಗುತ್ತಿದೆ ಎಂದು ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಹವಾಮಾನ ಘಟಕದ ನೋಡೆಲ್ ಅಧಿಕಾರಿ ಡಾ. ಎ.ಎಚ್.ಕುಮಾರ ನಾಯ್ಕ್ ಹಾಗೂ ತಾಂತ್ರಿಕ ಅಧಿಕಾರಿ ಡಾ.ಅಮಿತ್ ಮಾಹಿತಿ ನೀಡಿದರು.

ಚಿತ್ರದುರ್ಗ ಹಾಗೂ ದಾವಣಗೆರೆ ಭಾಗದಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಂಟಿಗ್ರೇಡ್‌ನಿಂದ 38 ತನಕ ಹೋಗುತ್ತದೆ. ಮಾರ್ಚ್ ತಿಂಗಳಲ್ಲಿ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಭಾಗಗಳಲ್ಲಿ ಈ ಪ್ರಮಾಣ 39ರಿಂದ 40 ಡಿಗ್ರಿ ಸೆಂಟಿಗ್ರೇಡ್‌ಗಳಷ್ಟು ಹೆಚ್ಚಾಗುವ ಸಂಭವವಿದೆ’ ಎಂದು ಅವರು ತಿಳಿಸಿದರು.

ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಅಂತರ್ಜಲ ಕುಸಿದಿದ್ದು, ಸೂರ್ಯನ ಕಿರಣ ನೇರವಾಗಿ ಭೂಮಿಯ ಮೇಲೆ ಬೀಳುತ್ತದೆ. ಇದರಿಂದ ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಅಡಿಕೆ ಸಿಪ್ಪೆ ಹಾಗೂ ಮೆಕ್ಕೆಜೋಳದ ದಂಟು ಸೇರಿದಂತೆ ಕೃಷಿ ತ್ಯಾಜ್ಯದಿಂದ ಮಲ್ಚಿಂಗ್ ಮಾಡಿಕೊಳ್ಳುವುದು ಅಗತ್ಯ. ಬೆಳಿಗ್ಗೆ ಕೃಷಿ ಚಟುವಟಿಕೆ ಕೈಗೊಳ್ಳುವ ಬದಲು ಸಂಜೆ ವೇಳೆ ಕೃಷಿ ಮಾಡಿದರೆ ತೇವಾಂಶ ಉಳಿಯುತ್ತದೆ.

‘ಈ ಬಾರಿ ಚಿತ್ರದುರ್ಗ ಹಾಗೂ ದಾವಣಗೆರೆ ಭಾಗದಲ್ಲಿ ಸಾಮಾನ್ಯವಾಗಿ 500 ಮಿ.ಮೀ.ಯಿಂದ 600 ಮಿ.ಲಿ.ಮೀಟರ್ ಮಳೆಯಾಗುವ ಅಂದಾಜು ಇದೆ ಎಂದು ಮಾಹಿತಿ ನೀಡಿದರು.

ಬಿಸಿಲಿನ ತಾಪ‍ ಹೆಚ್ಚಾಗಿದೆ. ಎಷ್ಟು ನೀರು ಕುಡಿದರೂ ದಾಹ ಇಂಗುತ್ತಿಲ್ಲ. ಹಾಗಾಗಿ ಜ್ಯೂಸ್ ಮೊರೆ ಹೋಗಿದ್ದೇವೆ’ ಎಂದು ಕೆ.ಬಿ.ಬಡಾವಣೆಯ ಕುಮಾರ್ ತಿಳಿಸಿದರು.

ಬೇಸಿಗೆಯಲ್ಲಿ ಇರಲಿ ಆರೋಗ್ಯದ ಕಾಳಜಿ

‘ಸಾಮಾನ್ಯವಾಗಿ ಬಿಸಿಲಿನಲ್ಲಿ ವಾಂತಿ ಹಾಗೂ ಬೇಧಿ ಹಾಗೂ ನಿರ್ಜಲೀಕರಣ ಸನ್‌ಸ್ಟ್ರೋಕ್ ಆಗುವ ಸಂಭವವಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು’ ಸೂಕ್ತ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಸಲಹೆ ನೀಡಿದರು. ತುಂಬಾ ಸೆಖೆ ಇರುವುದರಿಂದ ಐಸ್‌ಕ್ರೀಂ ತಂಪು ಪಾನೀಯಗಳಿಗೆ ಹೆಚ್ಚು ಮೊರೆ ಹೋಗುತ್ತಾರೆ. ಇದು ಒಳ್ಳೆಯದಲ್ಲ. ಶುದ್ಧೀಕರಿಸಿದ ನೀರನ್ನು ಹೆಚ್ಚು ಕುಡಿಯಬೇಕು. ಜಾತ್ರೆ ಮದುವೆ ಅನೇಕ ಸಮಾರಂಭಗಳು ಈ ಸಮಯದಲ್ಲಿ ಹೆಚ್ಚು ನಡೆಯಲಿದ್ದು ಅಲ್ಲಿ ಉಳಿದ ಆಹಾರವನ್ನು ಬಳಸಿದರೆ ಫುಡ್ ಪಾಯ್ಸನಿಂಗ್ ಆಗುವ ಸಂಭವ ಹೆಚ್ಚು. ಜಾತ್ರೆ ಮದುವೆ ಸಮಾರಂಭದಲ್ಲಿ ಊಟ ತಯಾರಿಸುವ ಮೊದಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಸ್ಥಳೀಯ ಆರೋಗ್ಯ ಕಾರ್ಯಕರ್ತರ ಗಮನಕ್ಕೆ ಊಟ ತಯಾರಿಸಬೇಕು’ ಎಂದು ಹೇಳಿದರು. ‘ನಿರ್ಜಲೀಕರಣವನ್ನು ತಡೆಗಟ್ಟಲು ಹೆಚ್ಚು ನೀರನ್ನು ಕುಡಿಯಬೇಕು. ಉಪವಾಸ ಇರಬಾರದು. ಕಲ್ಲಂಗಡಿ ಹಾಗೂ ಖರಬೂಜ ಹಣ್ಣುಗಳನ್ನು ಬಳಸಬೇಕು’ ಎಂದು ತಿಳಿಸಿದರು.

ರೈತರಿಗೆ ಸಲಹೆಗಳು

* ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ

* ಬಿತ್ತನೆಗೂ ಮುನ್ನ ಬೆಳೆಗಳಿಗೆ ಬೀಜೋಪಚಾರ ಕೈಗೊಳ್ಳುವುದರಿಂದ ಅನೇಕ ಕೀಟ ಹಾಗೂ ರೋಗಗಳನ್ನು ತಡೆಯಬಹುದು.

* ಮುಂಜಾನೆಯ ಸಮಯದಲ್ಲಿ ಇಬ್ಬನಿಯಿಂದ ಆವೃತವಾದ ಹುಲ್ಲಿನ ಮೇಲೆ ಕುರಿ ಮತ್ತು ಮೇಕೆಗಳು ಮೇಯುವುದನ್ನು ತಡೆಯಿರಿ ಏಕೆಂದರೆ ಇದು ಜಾನುವಾರುಗಳಲ್ಲಿ ಎಂಟರೊಟಾಕ್ಸಿಮಿಯಾ (ಇಟಿ) ರೋಗದ ಬೆಳವಣಿಗೆಗೆ ಕಾರಣವಾಗಬಹುದು.

*ರೈತರು ಸಾಧ್ಯವಾದಷ್ಟು ಕಳೆನಾಶಕ ಸಿಂಪರಣೆಯನ್ನು ಕೈಗೊಳ್ಳುವ ಪೂರ್ವ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿನ ಕೃಷಿ ಪರಿಣಿತರ ಸಲಹೆ ಪಡೆದು ಸಕಾಲದಲ್ಲಿ ಕಳೆನಾಶಕವನ್ನು ಉಪಯೋಗಿಸಬೇಕು.

*ರೈತರು ಹವಾಮಾನ ಪರಿಸ್ಥಿತಿಗಳಿಗನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು.

*ನೀರಾವರಿ ಮೂಲಗಳ ಸಂದರ್ಭ ಕಡಲೆ ಅಥವಾ ತೊಗರಿಯನ್ನು ಕೊಯ್ಲು ಮಾಡಿದ ನಂತರ ಕಲ್ಲಂಗಡಿ ಸೀತಾಫಲ ಅಥವಾ ಸೌತೆಕಾಯಿಯನ್ನು ಬೆಳೆಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT