ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗದ ಓಡಾಟ; ಪೊಲೀಸರಿಗೆ ಪೀಕಲಾಟ

Last Updated 3 ಏಪ್ರಿಲ್ 2020, 14:50 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ನಗರದಲ್ಲಿ ಜನ ವಾಹನಗಳಲ್ಲಿ ಸುತ್ತಾಡುವ ಮೂಲಕ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಇದು ಪೊಲೀಸರಿಗೆ ಪೀಕಲಾಟವನ್ನು ತಂದಿದ್ದು, ಸಕಾರಣವಿಲ್ಲದೇ ಓಡಾಡುವವರ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ದಿನನಿತ್ಯ ಬಳಸುವ ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಬೆಳಗಿನ ವೇಳೆಯಲ್ಲಿ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಿದ್ದರೂ ಉಳಿದ ಸಮಯದಲ್ಲೂ ತರಕಾರಿ, ಹಣ್ಣು, ಔಷಧಿ ಖರೀದಿ ಹೆಸರಿನಲ್ಲಿ ಜನ ಸುತ್ತಾಡುತ್ತಿರುವುದು ಕಂಡುಬಂತು. ವಿಶೇಷವಾಗಿ ಯುವಕರು ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸರು ನಿಂತಿರುವುದು ಕಾಣುತ್ತಿದ್ದಂತೆ ಪರ್ಯಾಯ ಮಾರ್ಗದ ಮೂಲಕ ಸಾಗುತ್ತಿದ್ದರು.

‘ವಾಹನ ಜಪ್ತಿ ಮಾಡುತ್ತಿರುವುದರಿಂದ ಜನರು ಸುತ್ತಾಡುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ನಾವು ರಸ್ತೆಯ ನಡುವೆ ನಿಂತುಕೊಂಡರೆ ವಾಹನ ಸಂಚಾರ ಕಡಿಮೆಯಾಗಿರುತ್ತದೆ. ರಸ್ತೆಯ ಪಕ್ಕದ ನೆರಳಿನಲ್ಲಿ ನಿಂತುಕೊಂಡರೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ. ವಾಹನ ತಡೆದು ನಿಲ್ಲಿಸಿದರೆ ಹಣ್ಣು, ತರಕಾರಿ ಖರೀದಿಸಲು ಬಂದಿದ್ದೇವೆ ಎನ್ನುತ್ತಾರೆ. ಕಾಲು ಕೆ.ಜಿ. ತರಕಾರಿ ಖರೀದಿಸುವ ನೆಪದಲ್ಲಿ ಮಧ್ಯಾಹ್ನವೂ ಬೈಕ್‌ನಲ್ಲಿ ಸುತ್ತಾಡುತ್ತಿದ್ದಾರೆ. ಎಷ್ಟು ಹೇಳಿದರೂ ಇವರಿಗೆ ಬುದ್ಧಿ ಬರುತ್ತಿಲ್ಲ. ಜನ ಸಂಚಾರ ತಡೆಯಲು ನಾವು ಬಿಸಿಲಿನಲ್ಲಿ ನಿಂತುಕೊಳ್ಳಬೇಕಾಗಿದೆ’ ಎಂದು ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಅಳಲು ತೋಡಿಕೊಂಡರು.

ನಗರದ ಕೆಲವು ಬಡಾವಣೆಗಳಲ್ಲಿ ಸಣ್ಣಪುಟ್ಟ ಹೋಟೆಲ್‌ಗಳು ಬಾಗಿಲು ತೆರೆದು ಪಾರ್ಸ್‌ ಸೇವೆಯನ್ನು ಆರಂಭಿಸಿರುವುದು ಕಂಡುಬಂತು.

ಸಾಮೂಹಿಕ ಪ್ರಾರ್ಥನೆಗೆ ಕಡಿವಾಣ: ಶುಕ್ರವಾರ ಸಾಮೂಹಿಕ ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಸೀದಿಗೆ ಬರುವುದನ್ನು ತಡೆಗಟ್ಟಲು ಮಸೀದಿ ಎದುರು ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಎಪಿಎಂಸಿಯಲ್ಲಿ ಅಲ್ಪ ವಹಿವಾಟು

ದಾವಣಗೆರೆಯ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಕೊರೊನಾ ಭೀತಿಯಿಂದಾಗಿ ಹೆಚ್ಚಿನ ರೈತರು ಮಾರುಕಟ್ಟೆಗೆ ಬಂದಿರಲಿಲ್ಲ.

2,118 ಕ್ವಿಂಟಲ್‌ ಭತ್ತ, 5,580 ಕ್ವಿಂಟಲ್‌ ಮೆಕ್ಕೆಜೋಳ, 27 ಕ್ವಿಂಟಲ್‌ ಶೇಂಗಾ ಹಾಗೂ 20 ಕ್ವಿಂಟಲ್‌ ಅಲಸಂದಿ ವಹಿವಾಟು ನಡೆಯಿತು.

ಈರುಳ್ಳಿ ಮಾರುಕಟ್ಟೆಯಲ್ಲೂ ವಹಿವಾಟು ನಡೆಯಿತು. 1,200 ಕ್ವಿಂಟಲ್‌ ಈರುಳ್ಳಿ, ಮಾರುಕಟ್ಟೆಗೆ ಬಂದಿತ್ತು. ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಹಲವು ತರಕಾರಿಗಳ ವಹಿವಾಟು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT