ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕ–ಬಾಧಕ ಚರ್ಚಿಸಿ ಜನಸಂಖ್ಯೆ ನೀತಿ ಜಾರಿ: ಬೈರತಿ ಬಸವರಾಜ

ಗಾಜಿನ ಮನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
Last Updated 14 ಜುಲೈ 2021, 13:51 IST
ಅಕ್ಷರ ಗಾತ್ರ

ದಾವಣಗೆರೆ: ‘ಉತ್ತರ ಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಮಾಡುವ ಸಂಬಂಧ ಅದರ ಸಾಧಕ–ಬಾಧಕಗಳನ್ನು ಚರ್ಚಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಸ್ಮಾರ್ಟ್‌ಸಿಟಿಯಿಂದ ₹ 8.5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಇಲ್ಲಿನ ಗಾಜಿನ ಮನೆಯಲ್ಲಿ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದ ಎಲ್ಲಾ ಜನರಿಗೆ ಮೂಲ ಸೌಕರ್ಯ ಸಿಗಬೇಕು ಎಂದರೆ ಜನಸಂಖ್ಯೆ ನಿಯಂತ್ರಣವಾಗಬೇಕು. ಅಮೇರಿಕಾದಲ್ಲಿ 38 ಕೋಟಿ ಜನಸಂಖ್ಯೆ ಇರುವುದರಿಂದ ಅಲ್ಲಿ ಎಲ್ಲರಿಗೂ ಸೌಲಭ್ಯ ಸಿಗುತ್ತದೆ. ಆದರೆ ಭಾರತದಲ್ಲಿ ಜನಸಂಖ್ಯೆ 150 ಕೋಟಿ ದಾಟುತ್ತಿದೆ. ಮುಂದಿನ ಪೀಳಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನು ಬಿಡುಗಡೆ ಮಾಡಿದ್ದಾರೆ.ರಾಜ್ಯದಲ್ಲಿಯೂ ಯಡಿಯೂರಪ್ಪ ಅವರು ರಾಜ್ಯ ನಾಯಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

‘ಗಾಜಿನ ಮನೆ ಆವರಣದಲ್ಲಿ ನಿರ್ಮಿಸಿರುವ ಲೇಸರ್ ಶೋ ಪ್ರವಾಸಿಗರಿಗೆ ಮುದ ನೀಡಲಿದ್ದು, ಗಾಜಿನ ಮನೆ ನೋಡಲು ಬರುವ ಪ್ರವಾಸಿಗರಿಗೆ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮನವಿ ನೀಡಿದ್ದು, ಅಗತ್ಯ ಅನುದಾನ ನೀಡಲು ಪರಿಶೀಲಿಸಲಾಗುವುದು. ಇದೊಂದು ಉತ್ತಮ ಪ್ರವಾಸಿ ತಾಣವಾಗಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಮಳೆಯಾಗಿ ಬೆಳೆ ಕೈಗೆ ಬರುವ ಮೂಲಕ ಎಲ್ಲರಲ್ಲೂ ಸಂತಸ ಮೂಡಲಿ’ ಎಂದು ಹಾರೈಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ.ರವೀಂದ್ರನಾಥ್, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮೇಯರ್ ಎಸ್.ಟಿ.ವೀರೇಶ್, ಉಪಮೇಯರ್ ಉಮಾ ಪ್ರಕಾಶ್, ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಜಿ‌ಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ವಿಜಯಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಧೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನರ್, ಯುವಜನ ಇಲಾಖೆ ಹಾಗೂ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಡಿಡಿಪಿಐ ಆರ್.ಪರಮೇಶ್ವರಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT