ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ‘ಪ್ರಜಾಧ್ವನಿ ಯಾತ್ರೆ’ ಮುಂದೂಡಿಕೆ

Last Updated 12 ಮಾರ್ಚ್ 2023, 6:07 IST
ಅಕ್ಷರ ಗಾತ್ರ

ದಾವಣಗೆರೆ: ಶನಿವಾರ ಹೊನ್ನಾಳಿ ಮತ್ತು ಹರಿಹರದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನರಾದ ಕಾರಣ ಮಾರ್ಚ್‌ 13ಕ್ಕೆ ಮುಂದೂಡಲಾಗಿದೆ.

ಶುಕ್ರವಾರ ನಡೆದಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಸಲೀಂ ಅಹಮದ್ ಸಹಿತ ರಾಜ್ಯದ ಅನೇಕ ನಾಯಕರು ಶನಿವಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾವಣಗೆರೆಯಲ್ಲಿಯೇ ಉಳಿದುಕೊಂಡಿದ್ದರು. ಧ್ರುವನಾರಾಯಣ ಅವರು ನಿಧನರಾದ ಸುದ್ದಿ ಕೇಳುತ್ತಿದ್ದಂತೆ ಕಾರ್ಯಕ್ರಮ ಮುಂದೂಡಿ ದಾವಣಗೆರೆಯಿಂದ ಮೈಸೂರಿಗೆ ತೆರಳಿದರು.

ಮೈಸೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಧ್ರುವನಾರಾಯಣ ಅವರ ಹಠಾತ್‌ ನಿಧನ ನಮಗೆಲ್ಲರಿಗೂ ದಿಗ್ಭ್ರಮೆಯನ್ನುಂಟು ಮಾಡಿದೆ. ಅವರ ಸಾವಿನಿಂದ ನನಗಷ್ಟೇ ಅಲ್ಲ. ಕಾಂಗ್ರೆಸ್‌ಗೆ ನೋವುಂಟು ಮಾಡಿದೆ. ಸಮಾಜಕ್ಕೆ ದೊಡ್ಡ ನಷ್ಟ’ ಎಂದು ತಿಳಿಸಿದರು.

‘ಧ್ರುವನಾರಾಯಣ ಬದ್ಧತೆ ಇದ್ದ ರಾಜಕಾರಣಿ. ಕಾಂಗ್ರೆಸ್‌ ನಿಷ್ಠರಾಗಿ, ಕಾಂಗ್ರೆಸ್‌ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದವರು. ಪಾದರಸದಂತೆ ಕೆಲಸ ಮಾಡುತ್ತಿದ್ದರು. ನಾವು ಊಹಿಸಲೂ ಅಸಾಧ್ಯವಾದ ದುರ್ಘಟನೆ ಇದು’ ಎಂದು ಹೇಳಿದರು.

‘ಸಭ್ಯ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. 40 ವರ್ಷಗಳ ಹಿಂದೆ ನಾನು ಎನ್‌ಎಸ್‌ಯುಐನಲ್ಲಿದ್ದಾಗ ಅವರು ಜಿಕೆವಿಕೆ ಅಧ್ಯಕ್ಷರಾಗಿದ್ದರು. ಎಲ್ಲ ಸಮಾಜದ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಉಡಾಫೆ ಮಾತನಾಡಿದವರಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್‌ ತಿಳಿಸಿದರು.

ಮಾರ್ಚ್‌ 13ರಂದು ಬೆಳಿಗ್ಗೆ 11ಕ್ಕೆ ಹೊನ್ನಾಳಿಯಲ್ಲಿ, ಮಧ್ಯಾಹ್ನ 3ಕ್ಕೆ ಹರಿಹರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾಣೆಬೆನ್ನೂರಿಗೆ ಸಿದ್ದರಾಮಯ್ಯ ತೆರಳಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಹರಿಹರ ಶಾಸಕ ಎಸ್‌. ರಾಮಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT