ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಗೆ ಮೊದಲೇ ಪೌರಕಾರ್ಮಿಕರ ಅಕಾಲಿಕ ಸಾವು

ಅನುಕಂಪದ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶೇ 60 ಮಂದಿ
Last Updated 16 ಜನವರಿ 2019, 12:05 IST
ಅಕ್ಷರ ಗಾತ್ರ

ದಾವಣಗೆರೆ: ಪೌರಕಾರ್ಮಿಕರಲ್ಲಿ ಶೇ 90ರಷ್ಟು ಮಂದಿ 50 ವರ್ಷ ಆಗುವ ಮೊದಲೇ ಮರಣವನ್ನಪ್ಪುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ಮಂದಿ 45 ವರ್ಷವೂ ದಾಟುತ್ತಿಲ್ಲ. ಪರಿಣಾಮ ಅನುಕಂಪದ ಆಧಾರದಲ್ಲಿ ಕೆಲಸ ಪಡೆದವರಲ್ಲಿ ಶೇ 60ರಷ್ಟು ಮಂದಿ ಪೌರಕಾರ್ಮಿಕರ ಮಕ್ಕಳೇ ಆಗಿದ್ದಾರೆ.

ಪಾಲಿಕೆಯಲ್ಲಿ 1,150 ಮಂದಿ ಕಾಯಂ ನೌಕರರು, ಅಧಿಕಾರಿಗಳು ಇದ್ದಾರೆ. ಅದರಲ್ಲಿ 254 ಮಂದಿ ಕಾಯಂ ಪೌರಕಾರ್ಮಿಕರು ಆಗಿದ್ದಾರೆ. ಇವರಲ್ಲದೆ 270 ಮಂದಿ ಪೌರಕಾರ್ಮಿಕರೂ ಒಳಗೊಂಡಂತೆ 500 ಮಂದಿ ಕಾರ್ಮಿಕರು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರು ಅಕಾಲಿಕವಾಗಿ ಮೃತಪಟ್ಟರೆ ಅವರ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಕೆಲಸ ಸಿಗುವುದಿಲ್ಲ.

ಒಟ್ಟು ನೌಕರರಲ್ಲಿ 200 ಮಂದಿ ಅನುಕಂಪದ ಆಧಾರದಲ್ಲಿ ಕೆಲಸ ಪಡೆದವರಾಗಿದ್ದು, ಅವರಲ್ಲಿ 120 ಮಂದಿ ಅಂದರೆ ಶೇ 60ರಷ್ಟು ಮಂದಿ ಪೌರಕಾರ್ಮಿಕರ ಮಕ್ಕಳಾಗಿದ್ದಾರೆ ಎಂದು ಪಾಲಿಕೆ ಮ್ಯಾನೇಜರ್‌ ರಮೇಶ್‌ ತಿಳಿಸಿದ್ದಾರೆ.

ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿದ್ದರೆ ಅವರಿಗೆ ಇತರ ಉದ್ಯೋಗಗಳನ್ನು ನೀಡಲಾಗುತ್ತದೆ. ವಿದ್ಯೆ ಇಲ್ಲದೇ ಇದ್ದರೆ ಮತ್ತೆ ಪೌರಕಾರ್ಮಿಕರೇ ಆಗುತ್ತಿದ್ದಾರೆ. ಇಂಥವರು ಲೆಕ್ಕಕ್ಕೆ ಸಿಗುತ್ತಿಲ್ಲ. ದಾವಣಗೆರೆ ಪಾಲಿಕೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಲ್ಲಿ ಶೇ 95ರಷ್ಟು ಮಂದಿ ಗಾಂಧಿನಗರದವರೇ ಆಗಿದ್ದಾರೆ ಎನ್ನುತ್ತಾರೆ ಪಾಲಿಕೆ ಸದಸ್ಯ ಎಂ. ಹಾಲೇಶ್‌.

ಕಂದಾಯ ವಿಭಾಗದ ವ್ಯವಸ್ಥಾಪಕಿ ನಾಗರತ್ನಮ್ಮ, ಬಿಲ್‌ ಕಲೆಕ್ಟರ್‌ ಅಂಜಿನಮ್ಮ, ಅಟೆಂಡರ್‌ ಪರಶುರಾಮ ಶಿವಳ್ಳಿ, ಶ್ರೀನಿವಾಸ, ಪ್ರಥಮ ದರ್ಜೆ ಸಹಾಯಕ ಕರ್ಣ, ದ್ವಿತೀಯ ದರ್ಜೆ ಸಹಾಯಕರಾದ ಗುರುಮೂರ್ತಿ, ಲಕ್ಷ್ಮಣ, ಆರೋಗ್ಯ ನಿರೀಕ್ಷಕ ಪ್ರಕಾಶ್‌ ಎಲ್ಲರೂ ಪೌರಕಾರ್ಮಿಕರಾಗಿದ್ದ ಹೆತ್ತವರನ್ನು ನಿವೃತ್ತರಾಗುವ ಮೊದಲೇ ಕಳೆದುಕೊಂಡವರು. ಎಲ್ಲರೂ ಗಾಂಧಿನಗರದ ನಿವಾಸಿಗಳಾಗಿದ್ದಾರೆ.

ಕೆಲಸ ಮತ್ತು ಕುಡಿತ ಕಾರಣ

‘ಬಹುತೇಕ ಪೌರಕಾರ್ಮಿಕರು ನಿವೃತ್ತರಾಗುವ ಮೊದಲೇ ಮರಣ ಹೊಂದಲು ಅವರು ಮಾಡುತ್ತಿರುವ ಕೆಲಸ ಮತ್ತು ಆ ಕೆಲಸದಿಂದಾಗಿ ಅಭ್ಯಾಸವಾಗುವ ಕುಡಿತ ಕಾರಣ. ಮಲ, ಮೂತ್ರ, ಸತ್ತ ಪ್ರಾಣಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕಿದ್ದರೆ ಅಸಾಧ್ಯ ದುರ್ವಾಸನೆಯನ್ನು ಸಹಿಸಿಕೊಳ್ಳಬೇಕಿದ್ದರೆ ಕುಡಿಯುವುದು ಅನಿವಾರ್ಯ. ಆಧುನಿಕ ಸಂಶೋಧನೆಗಳು ಎಷ್ಟೇ ಬಂದರೂ ಸ್ವಚ್ಛತಾ ಕಾರ್ಯದಲ್ಲಿ ಮನುಷ್ಯರ ಭಾಗವಹಿಸುವಿಕೆ ಕಡಿಮೆ ಮಾಡುವ ಸಂಶೋಧನೆಗಳಾಗುತ್ತಿಲ್ಲ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಚಿದಾನಂದ.

ಸುರಕ್ಷತಾ ಕ್ರಮ: ಈಗ ಎಲ್ಲ ಸುರಕ್ಷಾ ದಿರಿಸು, ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ. ಅವರ ಆರೋಗ್ಯ ಕಾಪಾಡಲು ಹೆಚ್ಚು ಒತ್ತು ನೀಡಲಾಗಿದೆ. ಸ್ವಚ್ಛ ಸರ್ವೇಕ್ಷಣದಲ್ಲಿ ಆರೋಗ್ಯ ನಿರೀಕ್ಷಕರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಕುಡಿತದಿಂದ ದೂರ ಇರಿಸಲು ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತ್ಯೇಕ ವಿಧಾನ ಪರಿಷತ್‌ ಕ್ಷೇತ್ರ ನೀಡಿ

ಪೌರಕಾರ್ಮಿರಕನ್ನು ನಿಕೃಷ್ಟವಾಗಿ ಕಾಣಲಾಗುತ್ತದೆ. ಅವರ ಸಮಸ್ಯೆಗಳೇನು ಎಂದು ಅಧಿಕಾರಿಗಳಾಗಲೀ, ಸರ್ಕಾರವಾಗಲೀ ಕೇಳುತ್ತಿಲ್ಲ. ಶಿಕ್ಷಕರ, ಪದವೀಧರರ ಸಮಸ್ಯೆ ಕೇಳಲು ವಿಧಾನ ಪರಿಷತ್‌ ಕ್ಷೇತ್ರಗಳನ್ನು ಮಾಡಲಾಗಿದೆ. ಅದೇ ರೀತಿ ಪೌರಕಾರ್ಮಿಕರ ಸಮಸ್ಯೆ ಸರ್ಕಾರಕ್ಕೆ ತಲುಪಬೇಕಿದ್ದರೆ ಪೌರಕಾರ್ಮಿಕರ ಕ್ಷೇತ್ರ ಮಾಡಬೇಕು. ಅದಕ್ಕೆ ಸ್ಪರ್ಧಿಸುವವರು, ಮತ ಹಾಕುವವರು ಪೌರಕಾರ್ಮಿಕರೇ ಆಗಿರಬೇಕು ಎಂಬುದು ಚಿದಾನಂದ ಅವರ ವಾದವಾಗಿದೆ.

ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ರೋಬೋ

ಸಕ್ಕಿಂಗ್‌ ಮಷಿನ್‌ ಗಟ್ಟಿಯಾದುದನ್ನು ಎಳೆದುಕೊಳ್ಳುವುದಿಲ್ಲ. ಹಸಿಹಸಿಯಾಗಿರುವುದನ್ನು ಮಾತ್ರ ಎಳೆಯುತ್ತದೆ. ಹಾಗಾಗಿ ಮ್ಯಾನ್‌ಹೋಲ್‌ಗೆ ಕಲ್ಲು ಮಣ್ಣು, ಇತರ ಗಟ್ಟಿ ವಸ್ತುಗಳು ಬಿದ್ದರೆ ಇಳಿದೇ ಕೆಲಸ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ರೋಬೋ (ಬಂಡೀಕೂಟ್‌ ರೋಬೋ) ಬಂದಿದೆ. ಕೇರಳದಲ್ಲಿ ಅದನ್ನು ತಯಾರಿಸುತ್ತಾರೆ. ಅದರ ಬೆಲೆ ₹ 32 ಲಕ್ಷ. ಆದರೆ ಅವರು ಜೆಮ್‌ನಲ್ಲಿ (ಜಿಇಎಂ) ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಖರೀದಿಸಲು ಸಾಧ್ಯವಾಗುತ್ತಿಲ್ಲ. ಜೆಮ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದ್ದೇವೆ. ಅವರು ನೋಂದಣಿ ಮಾಡಿಕೊಂಡರೆ ಖರೀದಿಸಲು ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಉ‍ಪಮೇಯರ್‌ ಕೆ. ಚಮನ್‌ಸಾಬ್‌ ತಿಳಿಸಿದ್ದಾರೆ.

ಮಾದರಹಟ್ಟಿಯೇ ಗಾಂಧಿನಗರ

‘ಗಾಂಧಿನಗರಕ್ಕೆ ಮಾದರಹಟ್ಟಿ ಎಂಬ ಹೆಸರು ಇತ್ತು. ಅಲ್ಲಿ 40 ವರ್ಷದ ಹಿಂದೆ 3 ಸಾವಿರ ಜನಸಂಖ್ಯೆ ಇದ್ದರೂ ಏಳೆಂಟು ಮಂದಿ ಮಾತ್ರ ವಿದ್ಯೆ ಕಲಿತವರಾಗಿದ್ದೆವು. ಎಚ್‌. ಆಂಜನೇಯ ಮತ್ತು ನಾವು ಸೇರಿಕೊಂಡು ಬಾಪೂಜಿ ಯುವಕ ಸಂಘ ಕಟ್ಟಿ, ಮಾದರಹಟ್ಟಿಗೆ ಗಾಂಧಿನಗರ ಎಂದು ಹೆಸರಿಟ್ಟೆವು. ಸ್ವಚ್ಛತಾ ಕೆಲಸಕ್ಕೆ ಹೋಗಿ ರೋಗ–ರುಜಿನಗಳಿಗೆ ತುತ್ತಾಗಿ, ಕುಡಿತಕ್ಕೆ ಒಳಗಾಗಿ ಪೌರಕಾರ್ಮಿಕರು ಸಾಯುತ್ತಿರುವುದು ಆಗ ಇನ್ನೂ ಹೆಚ್ಚಾಗಿತ್ತು. ಅದಕ್ಕೆ ನಿಮ್ಮ ಮಕ್ಕಳಿಗೆ ವಿದ್ಯೆ ನೀಡಿ ಎಂದು ಮನವೊಲಿಸಿದ್ದರಿಂದ ಇಂದು ಪೌರಕಾರ್ಮಿಕರ ಮಕ್ಕಳು ಹೆಚ್ಚಿನವರು ವಿದ್ಯಾವಂತರಾಗಿದ್ದಾರೆ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಚಿದಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT