ಶುಕ್ರವಾರ, ನವೆಂಬರ್ 22, 2019
23 °C
ಜನರಿಂದ ಅಹವಾಲುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಸಮಸ್ಯೆ ಸ್ಥಳದಲ್ಲೇ ಇತ್ಯರ್ಥಕ್ಕೆ ಜನಸ್ಪಂದನ ಸಹಕಾರಿ

Published:
Updated:
Prajavani

ದಾವಣಗೆರೆ: ಜನಸ್ಪಂದನ ಕಾರ್ಯಕ್ರಮದಿಂದಾಗಿ ಹಲವು ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗುತ್ತಿದೆ. ಜಿಲ್ಲಾಧಿಕಾರಿವರೆಗೆ ಸಮಸ್ಯೆಗಳನ್ನು ತರುತ್ತಿದ್ದಾರೆ ಎಂದರೆ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದೂ ಗೊತ್ತಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನದಲ್ಲಿ ಜನರ ಅವಹಾಲುಗಳನ್ನು ಸ್ವೀಕರಿಸಿ ಮಾತನಾಡಿದರು.

ಜನಸಾಮಾನ್ಯರ ಕೆಲಸಗಳನ್ನು ಅಧಿಕಾರಿಗಳು ಕಾಳಜಿಯಿಂದ ಮಾಡಬೇಕು. ಆಗ ಅಧಿಕಾರಿಗಳಿಗೂ ಜಿಲ್ಲೆಗೂ ಉತ್ತಮ ಹೆಸರು ಬರುತ್ತದೆ ಎಂದು ಸೂಚಿಸಿದರು.

ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿಯ ಮೀಯಾಪುರದಿಂದ ನಲ್ಕುದುರೆ, ನವೀಲೆಹಾಳ್ ಹಾಗೂ ಸೋಮ್ಲಾಪುರ ಗ್ರಾಮದವರೆಗಿನ ರಸ್ತೆ ಕೆಟ್ಟು ಹೋಗಿದೆ. ಸರಿ ಪಡಿಸುವಂತೆ ಟಿ.ಬಿ ಹರೀಶ್ ಮನವಿ ಮಾಡಿದರು.

ಚನ್ನಗಿರಿ ಪಟ್ಟಣದಲ್ಲಿ ಕೆಎಸ್ಆರ್‌ಟಿಸಿ ಬಸ್ ಡಿಪೊ ಸ್ಥಾಪಿಸುವಂತೆ ದೊಡ್ಡಘಟ್ಟ ಗ್ರಾಮದ ಮರಿಸ್ವಾಮಿ ಮನವಿ ಮಾಡಿದಾಗ, ‘ಚಿಕ್ಕೋಲಿ ಕೆರೆ ಗ್ರಾಮದಲ್ಲಿ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ದಾವಣಗೆರೆಯಿಂದ ದೊಡ್ಡಘಟ್ಟ ಗ್ರಾಮಕ್ಕೆ ಸಂಜೆ ಸರ್ಕಾರಿ ಬಸ್ ಕಲ್ಪಿಸಬೇಕು ಎಂದು ಚನ್ನಗಿರಿ ತಾಲ್ಲೂಕು ಹೊಸೂರು ಗ್ರಾಮದ ಹೈದರಾಲಿ ಒತ್ತಾಯಿಸಿದರು.

99 ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಮಾಹಿತಿ ನೀಡಿದರು. ಸರ್ಕಾರದಿಂದ ಅನುಮೋದನೆಗೊಂಡ ಕೂಡಲೇ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದಲ್ಲಿ ನಗರ ಸಾರಿಗೆ ಪ್ರಯಾಣಿಕರ ತಂಗುದಾಣಗಳನ್ನು ಹೊಸದಾಗಿ ನಿರ್ಮಿಸುತ್ತಿದ್ದು, ಸುಸ್ಥಿತಿಯಲ್ಲಿರುವ ಬಸ್ ಶೆಲ್ಟರ್‌ಗಳನ್ನು ಕೆಡವುತ್ತಿದ್ದಾರೆ ಎಂದು ವಕೀಲ ಪಿ. ನಿರಂಜನ ಮೂರ್ತಿ ತಿಳಿಸಿದಾಗ, ಚೆನ್ನಾಗಿರುವುದನ್ನು ಕೆಡವದಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗೆ ಸೂಚಿಸಿದರು.

ಆಲೂರು ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಲು 2 ಎಕರೆ ಜಮೀನು ದಾನ ಮಾಡಿದ್ದ ವ್ಯಕ್ತಿಯ ಹೆಸರನ್ನು ಆಸ್ಪತ್ರೆಗೆ ಇಡದಿರುವ ಬಗ್ಗೆ ದೂರು ಬಂದಾಗ ದಾನಿಗಳ ಹೆಸರಿಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ನಗರದಲ್ಲಿ ರಸ್ತೆ ಹಾಗೂ ಫುಟ್‌ಪಾತ್‌ ನಿರ್ಮಿಸುವಾಗ ಗಿಡಗಳನ್ನು ಹಾಕಲು ಯಾವುದೇ ಸ್ಥಳವಕಾಶ ಕಲ್ಪಿಸಿಲ್ಲ ಎಂದು ಪರಿಸರ ಸಂರಕ್ಷಣಾ ವೇದಿಕೆಯ ಗಿರಿಶ್ ದೇವರಮನೆ ದೂರಿದರು.

ಶಂಕರ್ ವಿಹಾರ ನಗರದಲ್ಲಿ ಪಾಲಿಕೆಯಿಂದ ಕಲುಷಿತ ನೀರನ್ನು ಪೂರೈಸುತ್ತಿರುವುದನ್ನು ಸರಿಪಡಿಸುವಂತೆ ಸ್ಥಳೀಯರು ಮನವಿ ಮಾಡಿಕೊಂಡರು.

ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ಕಲ್ಲುಗಳು ನಾಪತ್ತೆಯಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್ ಇಂಗಳೇಶ್ವರ ದೂರಿದರು. ಈ ಬಗ್ಗೆ ಟೆಂಡರ್‌ದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ಗುರುಪಾದಯ್ಯ ತಿಳಿಸಿದರು. ಇಂತಹ ಘಟನೆ ಪುನರಾವರ್ತನೆಯಾಗಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಸಂಧ್ಯಾ ಸುರಕ್ಷಾ ಅರ್ಜಿಗಳು, ಖಾತೆ ವರ್ಗಾವಣೆ, ಬಸ್ ವ್ಯವಸ್ಥೆ, ಬೀದಿ ದೀಪ, ರಸ್ತೆ ದುರಸ್ತಿ, ಸಾಲ ಸೌಲಭ್ಯ, ಅಂಗವಿಕಲರ ಯುನಿಕ್ ಡಿಸಿಬಲಿಟಿ ಕಾರ್ಡ್ ಸೆಂಟರ್‌ ಪ್ರಾರಂಭಿಸುವುದೂ ಸೇರಿ ಅನೇಕ ಅಹವಾಲುಗಳನ್ನು ಜನರು ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಪದ್ಮ ಬಸವಂತಪ್ಪ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್ ವಿಜಯ್‌ಕುಮಾರ್ ಅವರೂ ಇದ್ದರು.

ಕೃತಜ್ಞತೆ ಸಲ್ಲಿಸಿದ ಅಜ್ಜಿ

ಹಿಂದಿನ ಜನಸ್ಪಂದನ ಸಭೆಯಲ್ಲಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ್ದು, ಮಂಜೂರಾಗಿದೆ ಎಂದು ಹಿರಿಯ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)