ಸಂವಿಧಾನ ತತ್ವ, ವಚನ ಸಾಹಿತ್ಯದಿಂದ ದೇಶದ ಪ್ರಗತಿ

7
ಶರಣ ಸಂಗಮ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ

ಸಂವಿಧಾನ ತತ್ವ, ವಚನ ಸಾಹಿತ್ಯದಿಂದ ದೇಶದ ಪ್ರಗತಿ

Published:
Updated:
Prajavani

ದಾವಣಗೆರೆ: ವಚನಗಳಲ್ಲಿ ಇರುವ ಎಲ್ಲಾ ಅಂಶಗಳು ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನ ಬೇರೆ ಬೇರೆ ಅಲ್ಲ. ಸಂವಿಧಾನದ ತತ್ವಗಳು ಮತ್ತು ವಚನ ಸಾಹಿತ್ಯದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಮುರುಘರಾಜೇಂದ್ರ ವಿರಕ್ತಮಠ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ನಿಂದ ಗುರುವಾರ ಬಸವಕೇಂದ್ರದಲ್ಲಿ ನಡೆದ ‘ವಚನ ಸಾಹಿತ್ಯ ಮತ್ತು ಸಾಂವಿಧಾನಿಕ ಆಶಯಗಳು’ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ ಎಂಬುದನ್ನು ಮರೆತು ಕೆಲವು ಸಂಪ್ರದಾಯವಾದಿಗಳು ಸಂವಿಧಾನ ಗ್ರಂಥವನ್ನು ಸುಡುವ, ಅಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಅಜ್ಞಾನಿಗಳು ಎಂದು ಟೀಕಿಸಿದರು.

ವಚನಗಳು ಬದುಕಿನ ಸಾರ್ಥಕತೆಯ ದಾರಿದೀಪ. ಕಳಬೇಡ ಕೊಲಬೇಡ ಎಂಬ ಸಪ್ತ ಶೀಲದ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಪರಾಧಗಳು ನಡೆಯಲು ಸಾಧ್ಯವೇ ಇಲ್ಲ. ಈ ವಚನದ ಆಶಯವನ್ನೇ ನಮ್ಮ ಕಾನೂನು ಕೂಡ ಹೇಳುತ್ತದೆ. ವಚನ ಸಾಹಿತ್ಯ ವಿಶ್ವದ ಶ್ರೇಷ್ಠ ಸಂವಿಧಾನ. ಬಸವಣ್ಣ ಒಬ್ಬ ಒಳ್ಳೆಯ ಅರ್ಥಶಾಸ್ತ್ರಜ್ಞ. ಮಾನವ ಹಕ್ಕುಗಳ ಪ್ರತಿಪಾದಕ. ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ಪ್ರಜಾಪ್ರಭುತ್ವದ ಸಂಸತ್ತನ್ನು ನಿರ್ಮಿಸಿದವರು ಬಸವಣ್ಣ. ಅಲ್ಲಿ ಜಾತಿ, ವರ್ಗ, ಲಿಂಗ, ವರ್ಣ, ವಯೋಭೇದಗಳನ್ನು ಕಿತ್ತು ಹಾಕಿ ಸಮ ಸಮಾಜ ಕಟ್ಟಿದ ಆದರ್ಶ ಅದು ಎಂದು ಶ್ಲಾಘಿಸಿದರು.

ಆರ್‌.ಎಲ್‌. ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಉಪನ್ಯಾಸ ನೀಡಿ, ‘ಭಾರತದ ಸಂವಿಧಾನವನ್ನು ನಾವೆಲ್ಲರೂ ಒಪ್ಪಿದ್ದೇವೆ. ಎಲ್ಲರ ಬದುಕು, ಎಲ್ಲಾ ಕಾನೂನುಗಳು ಇದರ ಅಡಿಯಲ್ಲಿಯೇ ಬರುತ್ತವೆ. ಅದರಲ್ಲಿ ಇರುವ ನಿರ್ದೇಶಕ ತತ್ವಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಅಂತರರಾಜ್ಯ ಸಂಬಂಧಗಳು, ಆರ್ಥಿಕತೆ ಎಲ್ಲವನ್ನು ಸಂವಿಧಾನ ಒಳಗೊಂಡಿದೆ. ಇವೆಲ್ಲವೂ ವಚನಗಳಲ್ಲಿಯೂ ಇರುವುದನ್ನು ಕಾಣಬಹುದು’ ಎಂದು ಹೇಳಿದರು.

ಶಿವಲಿಂಗ ಹಿಡಿದು ಪೂಜಿಸುವ ಎಲ್ಲರೂ ಸಮಾನರು. ಅಲ್ಲಿ ವರ್ಗ, ಜಾತಿ, ಬಣ್ಣ, ಲಿಂಗ ತಾರತಮ್ಯಗಳಿರುವುದಿಲ್ಲ. ಹಾಗೇ ಲಾವಣ್ಯ ಮತ್ತು ಶೀಲವಂತ್‌ಗೆ ಅಂತರಜಾತಿ ಮದುವೆ ಮಾಡಿ ಮದುವೆಯ ಹಕ್ಕನ್ನು ಆಗಲೇ ಎತ್ತಿ ಹಿಡಿದಿದ್ದರು. ಕಾಶ್ಮೀರದಿಂದ ಬಂದ ಮೋಳಿಗೆ ಮಾರಯ್ಯ, ಅಪಘಾನಿಸ್ಥಾನದಿಂದ ಬಂದು ಇಲ್ಲಿ ಹೆಸರು ಬದಲಾಯಿಸಿಕೊಂಡ ಶಂಕರ, ಮಹಾರಾಷ್ಟ್ರದ ಡೋಹರ ಕಕ್ಕಯ್ಯ ಒಳಗೊಂಡಂತೆ ವಿವಿಧ ಪ್ರದೇಶಗಳಿಂದ ಬಂದವರು ಅನುಭವ ಮಂಟಪದಲ್ಲಿ ಇದ್ದರು. ಇದು ಪ್ರದೇಶದ ಭೇದವೂ ಇರಲಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.

ಎರಡು ಮಹಾಯುದ್ಧಗಳು ನಡೆದು ಅಪಾರ ಪ್ರಾಣಹಾನಿಯಾದ ಬಳಿಕ ಅಂತರರಾಷ್ಟ್ರೀಯ ಮಾನವ ಹಕ್ಕುಗಳು 1948ರಲ್ಲಿ ಜಾರಿಗೆ ಬಂತು. ಅದರಲ್ಲಿ ಇರುವ ಎಲ್ಲಾ ಅಂಶಗಳು ವಚನಗಳಲ್ಲಿ ಇವೆ. ಹಾಗಾಗಿ ವಚನ ತತ್ವ ಪಾಲಿಸಿದರೆ, ವಚನ ತತ್ವಕ್ಕೆ ಗೌರವಕೊಟ್ಟರೆ ಅದು ಸಂವಿಧಾನಕ್ಕೆ, ಅಂತರರಾಷ್ಟ್ರೀಯ ಮಾನವ ಹಕ್ಕುಗಳಿಗೆ ಗೌರವಕೊಟ್ಟಂತೆ ಎಂದು ಹಲವು ವಚನಗಳನ್ನು ಉದಾಹರಿಸಿದರು.

ಚಳ್ಳಕೆರೆ ಕೆ.ಆರ್‌. ಕೋಚಿಂಗ್‌ ಸೆಂಟರ್‌ನ ಕೆ. ರಾಮಕೃಷ್ಣ, ಜೆ.ಎಚ್‌. ಪಟೇಲ್‌ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿಗೌಡ್ರು ಪುಟ್ಟರಾಜು ಉಪಸ್ಥಿತರಿದ್ದರು. ಶಿವಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !