ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗೆ ವರ್ಷಪೂರ್ತಿ ಉತ್ತೇಜನ ಕಾರ್ಯಕ್ರಮ: ಕುಲಪತಿ ಪ್ರೊ.ಬಿ.ಡಿ. ಕುಂಬಾರ

Published 30 ಅಕ್ಟೋಬರ್ 2023, 16:06 IST
Last Updated 30 ಅಕ್ಟೋಬರ್ 2023, 16:06 IST
ಅಕ್ಷರ ಗಾತ್ರ

ದಾವಣಗೆರೆ: ‘ದೃಶ್ಯಕಲಾ ಮಹಾವಿದ್ಯಾಲಯ ಸ್ಥಾಪನೆಗೊಂಡು 2024ಕ್ಕೆ 60 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಿಂದ ಕಲೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ತಿಳಿಸಿದರು.

ವಿಜಯಪುರದ ಸೋಮಶೇಖರ ಸಾಲಿ ಪ್ರತಿಷ್ಠಾನದ ಸಹಯೋಗದಲ್ಲಿ ಜನ್ಮ ಶತಮಾನೋತ್ಸವದ ಅಂಗವಾಗಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಸೋಮಶೇಖರ ಸಾಲಿಯವರ ಚಿತ್ರಕಲಾ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಮುಂದಿನ ವರ್ಷದ ಜನವರಿಯಿಂದ ಡಿಸೆಂಬರ್ ತಿಂಗಳವರೆಗೆ ಅನೇಕ ವಿಶೇಷ ಕಾರ್ಯಕ್ರಮ ನಡೆಸಲು ಉತ್ಸುಕರಾಗಿದ್ದೇವೆ. ಎಲೆಮರೆ ಕಾಯಿಯಂತಿರುವ ಕಲಾ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಉದ್ದೇಶಿಸಲಾಗಿದೆ. ಅಂತಹ ಕಲಾವಿದರನ್ನು ಗುರುತಿಸಿ ವಿಶ್ವವಿದ್ಯಾಲಯದ ಗಮನಕ್ಕೆ ತರಬೇಕು’ ಎಂದು ಅವರು ಮನವಿ ಮಾಡಿದರು

‘ಸಾಲಿಯವರ ಕಲಾ ಕೃತಿಗಳು ಭಾರತೀಯ ಶೈಲಿಯವು ಎನ್ನುವುದುಂಟು. ಆದರೆ ಅದು ಸರಿಯಲ್ಲ. ಕಲಾಕೃತಿ ನೋಡಲು ಸೂಕ್ಷ್ಮದೃಷ್ಟಿ ಇರಬೇಕು. ತೊಡಗಿಸಿಕೊಳ್ಳುವಿಕೆ ಇದ್ದಾಗ ಕಲಾಕೃತಿಯಲ್ಲಿನ ಸೂಕ್ಷ್ಮ ಅಂಶಗಳು ಗಮನಕ್ಕೆ ಬರುತ್ತವೆ. ಎಚ್ಚರಿಕೆಯಿಂದ ಗಮನಿಸಿದಾಗ ಸಾಲಿಯವರ ಕಲಾಕೃತಿಗಳು ಬ್ರಿಟಿಷ್ ಅಕಾಡೆಮಿಕ್ ಶೈಲಿಯವು ಎಂಬುದು ಗೊತ್ತಾಗುತ್ತದೆ. ರವಿವರ್ಮ ಭಾರತಕ್ಕೆ ಇದನ್ನು ಪರಿಚಯಿಸಿದ ನಂತರ ಎಲ್ಲರೂ ಹಳೆಯದನ್ನು ಬಿಟ್ಟು ಹೊಸದಕ್ಕೆ ಒಗ್ಗಿಕೊಂಡರು. ಸಾಲಿಯವರು ಕೂಡ ಇದೇ ಶೈಲಿಯಲ್ಲಿ ಕಲಾಕೃತಿ ರಚಿಸಿರುವುದನ್ನು ಕಾಣಬಹುದು. ಅವರ ಕಲಾಕೃತಿಗಳಲ್ಲಿ 24 ರೀತಿಯ ರೇಖೆಗಳೂ ಅದ್ಭುತವಾಗಿ ಅಭಿವ್ಯಕ್ತಗೊಂಡಿವೆ’ ಎಂದು ಕಲಾವಿಮರ್ಶಕ ಅಬ್ಬಿಗೇರಿಯ ಡಾ.ಡಿ.ಎ. ಉಪಾಧ್ಯ ವಿಶ್ಲೇಷಿಸಿದರು.

‘ರಾಜ್ಯದ ವಿವಿಧಡೆ ಜನ್ಮ ಶತಮಾನೋತ್ಸವ ಏರ್ಪಡಿಸಿರುವ ಮೂಲಕ ನಮ್ಮ ತಂದೆಯವರ ಕಲಾಕೃತಿಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಪ್ರತಿಷ್ಠಾನದ ವಿದ್ಯಾಧರ ಸಾಲಿ ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಜಯಪುರದ ಪಿ.ಎಸ್. ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಂಜಿನಿಯರ್ ಶಿವಮೊಗ್ಗದ ಉಮಾಪತಿ ಶರ್ಮ, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ್ ಇದ್ದರು. ಇದೇ ವೇಳೆ ಜನ್ಮಶತಮಾನೋತ್ಸವದ ಬ್ರೋಚರ್ ಬಿಡುಗಡೆ ಮಾಡಲಾಯಿತು. ನಿತಿನ್ ಚನ್ನಬಸವ ಸಾಲಿ ಪ್ರಾರ್ಥಿಸಿದರು. ರಮೇಶ ಚವ್ಹಾಣ್ ವಂದಿಸಿದರು. ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು.

65 ಕಲಾಕೃತಿಗಳ ಪ್ರದರ್ಶನ

‘ಸೋಮಶೇಖರ್ ಸಾಲಿಯವರ 65 ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿದ್ದು ಎಲ್ಲವೂ ಅಚ್ಚುಕಟ್ಟಾಗಿ ಮೌಂಟ್ ಆ್ಯಂಡ್‌ ಪ್ರೇಂ ಮಾಡಿರುವ ಕಲಾಕೃತಿಗಳು. ಪೆನ್ಸಿಲ್ ಮಾಧ್ಯಮದಲ್ಲಿ ಮಾಡಿದ ಬ್ರಿಟಿಷ್ ನೈಜಶೈಲಿಯ ಭಾವಚಿತ್ರಗಳು ಅಕ್ಕಮಹಾದೇವಿ ಕುರಿತಾದ ಸ್ಕೆಚ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ’ ಎಂದು ದತ್ತಾತ್ರೇಯ ಭಟ್ ತಿಳಿಸಿದರು. ಪೆನ್ಸಿಲ್‌ನಲ್ಲಿ ಮೂಡಿದ ಭಾವಚಿತ್ರಗಳಲ್ಲಿ ಸವಿವರ ಛಾಯಾಕರಣ ಭಾವನಿರೂಪಣೆ ಮನೋಜ್ಞವಾಗಿದೆ. ಕೆಲವು ಶಿವಶರಣೆ ಅಕ್ಕಮಹಾದೇವಿಯವರ ಕುರಿತ ಸಂಯೋಜನಾ ಚಿತ್ರಗಳು ಸಮೂಹ ಸ್ಕೆಚ್‌ಗಳು ಮೊದಲಾದ ಕೃತಿಗಳು ಮನಮುಟ್ಟುವಂತಿದ್ದವು. ಅಬ್ರಹಾಂ ಲಿಂಕನ್ ವೀರಶೈವ ಶರಣರು ವಯೋವೃದ್ಧ ಮಹಿಳೆಯ ಭಾವಚಿತ್ರ ತೈಲವರ್ಣದಲ್ಲಿ ರಚಿಸಿದ ಮುಗ್ಧ ಬಾಲೆಯ ಚಿತ್ರಗಳು ಗಮನ ಸೆಳೆಯುತ್ತಿವೆ. ಚಿತ್ರಕಲಾ ಪ್ರದರ್ಶನವು ನವೆಂಬರ್ 1ರವರೆಗೆ ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT