ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಸದಾಶಿವ ಆಯೋಗದ ಶಿಫಾರಸು ಹಿಂಪಡೆಯಲಿ

ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯ
Published 11 ಫೆಬ್ರುವರಿ 2024, 7:30 IST
Last Updated 11 ಫೆಬ್ರುವರಿ 2024, 7:30 IST
ಅಕ್ಷರ ಗಾತ್ರ

ಜಗಳೂರು: ‘ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವ ಅವೈಜ್ಞಾನಿಕ ಮತ್ತು ತಾರತಮ್ಯದಿಂದ ಕೂಡಿದ ನ್ಯಾ.ಸದಾಶಿವ ಆಯೋಗದ ಶಿಫಾರಸ್ಸನ್ನು ಹಿಂಪಡೆಯಬೇಕು’ ಎಂದು ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ 285ನೇ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ಸೇವಾಲಾಲ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.

‘ಪರಿಶಿಷ್ಟ ಸಮುದಾಯಗಳಲ್ಲಿ 101 ಜಾತಿಗಳೂ ಸಂವಿಧಾನಬದ್ಧವಾಗಿ ಸಮಾನ ಮೀಸಲಾತಿಗೆ ಅರ್ಹವಾಗಿವೆ. ಆದರೆ, ರಾಜ್ಯ ಸರ್ಕಾರ ಕೆಲವೇ ಸಮುದಾಯಗಳ ಪರವಾಗಿ ಒಳಮೀಸಲಾತಿಗೆ ಶಿಫಾರಸು ಮಾಡಿರುವುದು ಸಲ್ಲದು. ಕೊರಚ, ಲಂಬಾಣಿ, ಬೋವಿ ಮುಂತಾದ 99 ಸಮುದಾಯಗಳು ಬೀದಿಗಿಳಿದು ಹೋರಾಟ ನಡೆಸಿ, ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ವರಿಸಿದರು.

‘ಸಂತ ಸೇವಲಾಲ್ ಅವರ 285ನೇ ಜಯಂತ್ಯುತ್ಸವ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಚಿನ್ನಿಕಟ್ಟೆಯಲ್ಲಿ ಫೆ.13 ರಿಂದ 15ರ ವರೆಗೆ ಅದ್ಧೂರಿಯಾಗಿ ಜರುಗಲಿದೆ. ರಾಜ್ಯದ ಮೂಲೆಮೂಲೆಗಳಿಂದ ಬಂಜಾರ ಸಮುದಾಯದವರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಜಗಳೂರು ತಾಲ್ಲೂಕಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಸ್ಥಳೀಯ ಶಾಸಕರಿಗೆ ಮನವಿ ಮಾಡಲಾಗುವುದು ಎಂದು  ಹೇಳಿದರು‌.

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆಯಲ್ಲಿ ಯುವಕ, ಯುವತಿಯರು ವಿವಿಧ ಪಕ್ಷಗಳ ಮುಖಂಡರು ಹೆಜ್ಜೆ ಹಾಕಿದರು. ತೀಜ್ ಹೊತ್ತ ಯುವತಿಯರ ನೃತ್ಯ ಗಮನ ಸೆಳೆಯಿತು.

ಮಾಜಿ ಶಾಸಕ ಎಚ್.ಪಿ.ರಾಜೇಶ್, ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರ ಅನಿತ್ ಕುಮಾರ್, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಬಂಜಾರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಜಿ.ಪುರುಷೋತ್ತಮನಾಯ್ಕ, ಕಾರ್ಯದರ್ಶಿ ಸುರೇಶ್ ನಾಯ್ಕ, ಮಹಾರಾಜನಹಟ್ಟಿ ವೆಂಕಟೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT