ಗುರುವಾರ , ಜುಲೈ 29, 2021
21 °C
765 ವಿದ್ಯಾರ್ಥಿಗಳು ಗೈರು * ಪರೀಕ್ಷೆಗೆ ಹಾಜರಾದ 15,662 ಮಂದಿ

ಗೊಂದಲವಿಲ್ಲದೇ ನಡೆದ ಪಿಯು ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಬಳಸಿ, ಅಂತರ ಕಾಪಾಡಿಕೊಂಡು ಗುರುವಾರ ದ್ವಿತೀಯ ಪಿಯು ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದರು.

ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳಿಂದ ಪರೀಕ್ಷೆಗೆ 16,427 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 765 ಮಂದಿ ಗೈರುಹಾಜರಾಗಿದ್ದಾರೆ. 15,662 ಮಂದಿ ಪರೀಕ್ಷೆ ಬರೆದಿದ್ದಾರೆ.

ಬೆಳಿಗ್ಗೆ 10.15 ಪರೀಕ್ಷೆ ಆರಂಭದ ಸಮಯವಾಗಿದ್ದರೂ ವಿದ್ಯಾರ್ಥಿಗಳನ್ನು ಬೆಳಿಗ್ಗೆ 8.30ಕ್ಕೇ ಹಾಜರಾಗುವಂತೆ ತಿಳಿಸಿದ್ದರಿಂದ ಬೇಗನೇ ಎದ್ದು ಪರೀಕ್ಷಾರ್ಥಿಗಳು ಧಾವಿಸಿದ್ದರು. ಬರುತ್ತಿದ್ದಂತೆ ಕೈತೊಳೆಯಲು ನೀರು, ಸೋಪು, ಸ್ಯಾನಿಟೈಸರ್ ನೀಡಲಾಯಿತು.

ಪರೀಕ್ಷಾ ಕೊಠಡಿಗೆ ತೆರಳುವ ಮುಂಚೆ ಎಲ್ಲರನ್ನೂ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳ‍ಪಡಿಸಲಾಯಿತು. ಅದಕ್ಕಾಗಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

ಬೆಳಿಗ್ಗೆ 10.15ಕ್ಕೆ ಇದ್ದ ಪರೀಕ್ಷೆಗೆ 8.30ರ ಒಳಗೆ ವಿದ್ಯಾರ್ಥಿಗಳನ್ನು ಪೋಷಕರು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಟ್ಟಿದ್ದರು. ಮಧ್ಯಾಹ್ನ 1.30ಕ್ಕೆ ಪರೀಕ್ಷೆ ಮುಗಿಯುವ ಹೊತ್ತಿಗೆ ಪಾಲಕರು ಮಕ್ಕಳನ್ನು ಕರೆದುಕೊಂಡು ಹೋಗಲು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಕಾಲೇಜು ಆವರಣದಿಂದ ದೂರ ಹೋಗಿ ಎಂದು ಪೊಲೀಸರು ಅವರನ್ನು ದೂರ ಕಳುಹಿಸಿದರು.

ದಾವಣಗೆರೆ ನಗರದಲ್ಲಿ ಮೋತಿ ವೀರಪ್ಪ ಕಾಲೇಜು, ಎವಿಕೆ ಕಾಲೇಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿ 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಎಲ್ಲ 16 ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಕಂಟೈನ್‌ಮೆಂಟ್ ವಲಯದಿಂದ ಮೂವರು ವಿದ್ಯಾರ್ಥಿಗಳು ಇದ್ದು, ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಗೊಂದಲ, ಅವ್ಯವಹಾರ, ತೊಂದರೆಗಳಿಲ್ಲದೇ ಸರಾಗವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಡಿಬಾರ್‌ ಪ್ರಕರಣಗಳೂ ಆಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್‌. ನಾಗರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಾಸ್ಕ್‌ ಸಮಸ್ಯೆ: ‘ಮಾಸ್ಕ್‌ ಧರಿಸಿ ಪರೀಕ್ಷೆ ಬರೆದು ಅಭ್ಯಾಸ ಇಲ್ಲದ ಕಾರಣ ಸ್ವಲ್ಪ ಕಿರಿಕಿರಿ ಉಂಟಾಯಿತು. ಬೇರೆ ಯಾವ ತೊಂದರೆಗಳು ಉಂಟಾಗಿಲ್ಲ’ ಎಂದು ಎವಿಕೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಮಂಗಳೂರು ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಸ್ನಾ ಜೋಹ್ರಾ ಅನುಭವ ಹಂಚಿಕೊಂಡರು.

ಲಾಕ್‌ಡೌನ್‌ ಇದ್ದಿದ್ದರಿಂದ ಓದಲು ದೀರ್ಘ ಕಾಲದ ಅವಕಾಶ ಸಿಕ್ಕಿತು. ಆದರೂ ಪರೀಕ್ಷೆ ನಿಗದಿಯಾದ ಮೇಲಷ್ಟೇ ಓದಲು ಸಾಧ್ಯವಾಗಿದೆ ಎಂದು ಅತ್ತಿಗೆರೆಯ ವಿದ್ಯಾರ್ಥಿ ಮಧು ಅನಿಸಿಕೆ ವ್ಯಕ್ತಪಡಿಸಿದರು.

ಪರೀಕ್ಷೆ ಸುಲಭವಾಗಿತ್ತು. ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಎಸ್‌ಪಿಎಸ್‌ಎಸ್‌ ಪಿಯು ಕಾಲೇಜಿನ ವರುಣ್‌ ಕುಮಾರ್‌, ಅತ್ತಿಗೆರೆಯ ಸುಮಾ, ತಿಮ್ಮಾರೆಡ್ಡಿ ಪಿಯು ಕಾಲೇಜಿನ ರಮ್ಯಾ ತಿಳಿಸಿದರು.

ಜ್ವರ ಇದ್ದರೂ ಪರೀಕ್ಷೆ ಬರೆದ ವಿದ್ಯಾರ್ಥಿ

ಒಬ್ಬ ವಿದ್ಯಾರ್ಥಿಗೆ ಜ್ವರ ಇರುವುದು ಕಂಡು ಬಂತು. ಮೇಲಧಿಕಾರಿಗಳಿಗೆ ತಿಳಿಸಿ ಜ್ವರಕ್ಕೆ ಸಂಬಂಧಿಸಿದ ಮಾತ್ರೆ ನೀಡಿದೆವು. ಬಳಿಕ ಆ ವಿದ್ಯಾರ್ಥಿ ಪ್ರತ್ಯೇಕ ಕೊಠಡಿಯಲ್ಲಿ ಆರಾಮವಾಗಿ ಪರೀಕ್ಷೆ ಬರೆದಿದ್ದಾನೆ ಎಂದು ಕಿರಿಯ ಆರೋಗ್ಯ ಸಹಾಯಕಿ ಜ್ಞಾನೇಶ್ವರಿ, ಆಶಾಕಾರ್ಯಕರ್ತೆ ಲಲಿತಮ್ಮ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು