ಶುಕ್ರವಾರ, ಜನವರಿ 22, 2021
27 °C
ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ದಾವಣಗೆರೆ: ಪೈಪ್‌ನಲ್ಲಿ ಅಡುಗೆ ಅನಿಲ ಕಾಮಗಾರಿ ಶೀಘ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮುಂದಿನ ಏಳೆಂಟು ವರ್ಷಗಳಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸುಮಾರು 1.10 ಲಕ್ಷ ಮನೆಗಳಿಗೆ ಪೈಪ್‌ನಲ್ಲಿ ಅಡುಗೆ ಅನಿಲ (ಗ್ಯಾಸ್) ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ಯೂನಿಸಾನ್ ಕಂಪನಿಯ ಅಡಿಷನಲ್ ಮ್ಯಾನೇಜರ್ ಸುದೀಪ್ ಶರ್ಮಾ ತಿಳಿಸಿದರು.

ಕೇಂದ್ರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ವತಿಯಿಂದ ದಾವಣಗೆರೆ ಮತ್ತು ಚಿತ್ರದುರ್ಗ ನಗರಗಳಲ್ಲಿರುವ ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಸಂಬಂಧ ಸಂಸದ ಜಿ.ಎಂ. ಸಿದ್ಧೇಶ್ವರ ನೇತೃತ್ವದಲ್ಲಿ ಯೂನಿಸಾನ್ ಕಂಪನಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ವೇಳೆ ಈ ವಿಷಯ ತಿಳಿಸಿದರು.

‘ಯೂನಿಸಾನ್ ಕಂಪನಿ ಈಗಾಗಲೇ ಚಿತ್ರದುರ್ಗದಲ್ಲಿ ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಾರಂಭಿಸಿದ್ದು, ಈಗ ದಾವಣಗೆರೆಯ ಎಸ್.ಎಸ್. ಬಡಾವಣೆ ಮತ್ತು ವಿನಾಯಕ ಬಡಾವಣೆಗಳಲ್ಲಿ ಜನವರಿ ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಿದೆ. ಈ ಎರಡು ಬಡಾವಣೆಗಳಲ್ಲಿ ಈಗಾಗಲೇ ಸರ್ವೆ ಕಾರ್ಯ ನಡೆಸಿದ್ದು, ಸುಮಾರು 16 ಕಿ.ಮೀನಷ್ಟು ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವ ಉದ್ದೇಶ ಹೊಂದಿದೆ’ ಎಂದರು.

ಈ ಎರಡು ಬಡಾವಣೆಗಳಲ್ಲಿ ಕೈಗೊಳ್ಳಲಿರುವ ಕಾಮಗಾರಿಯ ಸಂಪೂರ್ಣ ವಿವರವನ್ನು ಮಹಾನಗರ ಪಾಲಿಕೆಗೆ ಸಲ್ಲಿಸಲಾಗಿದ್ದು, ಪೈಪ್‌ಲೈನ್ ಅಳವಡಿಸಿದ ನಂತರ ರಸ್ತೆ ದುರಸ್ತಿ ಸೇರಿ ಇತರೆ ಹಾನಿಯ ಬಗ್ಗೆ ಡಿಮ್ಯಾಂಡ್ ನೋಟ್ ಅನ್ನು ಪಾಲಿಕೆಯವರು ನೀಡಿದ ನಂತರ ಪೈಪ್‌ಲೈನ್ ಕಾಮಗಾರಿ ಪ್ರಾರಂಭಿಸುವುದಾಗಿ ಸಭೆಯಲ್ಲಿದ್ದ ಯೂನಿಸಾನ್ ಕಂಪನಿಯ ಅಡಿಷನಲ್‌ ಜನರಲ್ ಮ್ಯಾನೇಜರ್ ಸಂದೀಪ್ ಕುಮಾರ್ ಶರ್ಮಾ ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.

‘ಗೇಲ್ ಕಂಪನಿಯ ನ್ಯಾಚುರಲ್ ಗ್ಯಾಸ್ ಪೈಪ್ ಲೈನ್‌ನ ಪ್ಲಾಂಟ್ ಚಿತ್ರದುರ್ಗದಲ್ಲಿದ್ದು, ಚಿತ್ರದುರ್ಗದಿಂದ ಸುಮಾರು 60 ಕಿ.ಮೀ ಉದ್ದದ ಪೈಪ್‌ಲೈನ್ ಮಾಡಿ ದಾವಣಗೆರೆ ಸಮೀಪ 1 ಎಕರೆ ಜಾಗದಲ್ಲಿ ಗ್ಯಾಸ್ ರಿಸೀವಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

ಜಮೀನು ಒದಗಿಸಲು ಡಿಸಿಗೆ ಸೂಚನೆ: ಗ್ಯಾಸ್ ರಿಸೀವಿಂಗ್ ಸ್ಟೇಷನ್ ನಿರ್ಮಾಣಕ್ಕೆ 1 ಎಕರೆ ಜಮೀನಿನ ಹುಟುಕಾಟದಲ್ಲಿರುವುದಾಗಿ ಕಂಪನಿಯ ಅಧಿಕಾರಿಗಳು ಸಂಸದರ ಗಮನ ಸಳೆದರು. ತಕ್ಷಣ ಜಿಲ್ಲಾಧಿಕಾರಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಸಂಸದರು ಯೂನಿಸಾನ್ ಕಂಪನಿಯವರ ಜೊತೆ ಮಾತನಾಡಿ, ನಗರದ ಸಮೀಪ ಕಂಪನಿಯ ಬೇಡಿಕೆಗೆ ಅನುಸಾರ ಜಮೀನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

‘ಜನವರಿಯಲ್ಲಿ ಕಾಮಗಾರಿ ಪ್ರಾರಂಭಿಸಿ ಈ ಎರಡು ಬಡಾವಣೆಗಳಲ್ಲಿ ಕೆಲಸ ಪ್ರಾರಂಭವಾದ ತಕ್ಷಣ ಉಳಿದ ವಾರ್ಡ್‌ಗಳಿಗೆ ಅನುಮತಿ ಕೋರಿ ಪಾಲಿಕೆಗೆ ಮನವಿ ಸಲ್ಲಿಸಿದರೆ ಅನುಮತಿ ನೀಡುತ್ತೇನೆ’ ಎಂದು ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ ಮುದ್ದಜ್ಜಿ ತಿಳಿಸಿದರು.

ಸಭೆಯಲ್ಲಿ ಯೂನಿಸಾನ್ ಕಂಪನಿಯ ಸಂಪರ್ಕಾಧಿಕಾರಿ ಸುನಿಲ್ ಪೂಜಾರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.