ಬುಧವಾರ, ಸೆಪ್ಟೆಂಬರ್ 22, 2021
22 °C
ಬಹುತೇಕ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹದ ವ್ಯವಸ್ಥೆಯೇ ಇಲ್ಲ

ದಾವಣೆಗೆರೆ: ತುಂಬಿ ತುಳುಕುತ್ತಿರುವ ಹಳೇ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಮರೀಚಿಕೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಾಣಿಜ್ಯ ನಗರ ಎಂಬ ಹೆಸರಿಗೆ ತಕ್ಕಂತೆ ದಾವಣಗೆರೆಯಲ್ಲಿ ಸುತ್ತಲೂ ಕಟ್ಟಡಗಳೇ ಕಾಣುತ್ತವೆ. ಎಲ್ಲ ಕಡೆ ವ್ಯಾಪಾರ ವಹಿವಾಟುಗಳು ಇರುತ್ತವೆ. ಅದಕ್ಕೆ ಸರಿಯಾಗಿ ವಸತಿ ಸಮುಚ್ಚಯಗಳೂ ದೊಡ್ಡದಾಗಿವೇ ಇವೆ. ದೊಡ್ಡ ದೊಡ್ಡ ಸರ್ಕಾರಿ ಕಟ್ಟಡಗಳು, ಬಂಗಲೆಗಳು ಸಾಲು ಸಾಲು ಇವೆ. ಆದರೆ ಈ ಕಟ್ಟಡಗಳ ಮೇಲೆ ಬೀಳುವ ನೀರು ಮಾತ್ರ ಸಂಗ್ರಹವಾಗದೇ ಹಾಗೆ ಹರಿದು ಹೋಗುತ್ತಿದೆ.

ಮಳೆ ನೀರು ಸಂಗ್ರಹ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚನೆಗಳನ್ನು ನೀಡಿವೆ. ನೀರು ಸಂಗ್ರಹ ಮಾಡದ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಸುತ್ತೋಲೆ ಹೊರಡಿಸಿದೆ. ಇದರ ಪರಿಣಾಮ ಸ್ವಲ್ಪ ಮಟ್ಟಿನಲ್ಲಿ ಆಗಿದೆ. ಹೊಸ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಗಳಾಗುತ್ತಿವೆ. ಆದರೆ, ನಗರದಲ್ಲಿ ತುಂಬಿ ತುಳುಕುತ್ತಿರುವ ಹಳೇ ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹ ಮರೀಚಿಕೆಯಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಖಾತರಿ ಪಡಿಸಬೇಕು. ಕಟ್ಟಡಗಳ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ಕಡ್ಡಾಯ ಮಾಡಬೇಕು. ಹೊಸಕಟ್ಟಡಗಳಿಗೆ ಅನುಮೋದನೆ ನೀಡುವ ಪೂರ್ವದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯ ಮಾಡಬೇಕು. ಎಲ್ಲ ಸಮೂಹ ಮನೆಗಳು, ಅಪಾರ್ಟ್‌ಮೆಂಟ್‌ಗಳಿಗೂ ಇದು ಅನ್ವಯವಾಗಬೇಕು. ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಎಲ್ಲ ಸರ್ಕಾರಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ಸಮುದಾಯ ಭವನ, ಬಸ್‌ ನಿಲ್ದಾಣ ಮುಂತಾದ ಸಾರ್ವಜನಿಕ ಕಟ್ಟಡಗಳಲ್ಲಿ ನೀರು ಸಂಗ್ರಹ ವ್ಯವಸ್ಥೆ ಇರಬೇಕು. ಪಾರ್ಕಿಂಗ್‌ ಸ್ಥಳಗಳು, ರಸ್ತೆ, ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಮಳೆ ನೀರು ಸಂಗ್ರಹದ ಜತೆ ಜಲ ಮರುಪೂರಣ ವ್ಯವಸ್ಥೆಗಳನ್ನೂ ಬಲಪಡಿಸಬೇಕು. ಚಾಲನೆಯಲ್ಲಿ ಇರುವ ಮತ್ತು ಬತ್ತಿ ಹೋಗಿರುವ ಎಲ್ಲ ಬೋರ್‌ವೆಲ್‌ಗಳಿಗೆ ಜಲ ಮರುಪೂರಣ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮಗಳಿವೆ. ಆದರೆ, ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.

ಮಳೆ ನೀರು ಸಂಗ್ರಹ ಮತ್ತು ಮಳೆ ನೀರು ಇಂಗಿಸುವ ಯೋಜನೆ ಹಿಂದೆಯೇ ಇದ್ದರೂ ಇದೀಗ ಅವುಗಳನ್ನು ಹೇಗೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಿರ್ದೇಶನ ನೀಡಿವೆ. ‘ಜಲಶಕ್ತಿ ಅಭಿಯಾನ– ಕ್ಯಾಚ್‌ ದಿ ರೈನ್‌’ ಎಂಬ ಯೋಜನೆ ರೂಪಿಸಿದ್ದು, ಅದನ್ನು ಜಾರಿಗೊಳಿಸುವಂತೆ ಪೌರಾಡಳಿತ ನಿರ್ದೇಶನಾಲಯವು ಎಲ್ಲ ಸ್ಥಳೀಯಾಡಳಿತಗಳಿಗೆ ಸುತ್ತೋಲೆ ನೀಡಿದೆ. ಸಾರ್ವಜನಿಕರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಬೇಕು. ನೀರಿನ ಸಾಕ್ಷರತೆ ಹೆಚ್ಚಿಸಬೇಕು. ಜಲಶಕ್ತಿ ಉದ್ಯಾನವನ್ನು ನಿರ್ಮಿಸಬೇಕು ಎಂದು ಸೂಚನೆ ನೀಡಿದೆ.

ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಲಮೂಲಗಳನ್ನು ಗುರುತಿಸಬೇಕು. ಜಲಮೂಲ ಒತ್ತುವರಿ ತೆರವುಗೊಳಿಸಬೇಕು. ಜಲಮೂಲಗಳ ಮೇಲೆ ತ್ಯಾಜ್ಯ ಸುರಿಯಬಾರದು. ಮಳೆ ನೀರು ಜಲಮೂಲಗಳನ್ನು ಸೇರಲು ವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಕೊಳಚೆ ನೀರನ್ನು ಸಂಸ್ಕರಿಸಿ ಮರು ಬಳಕೆಗೆ ಯೋಗ್ಯವನ್ನಾಗಿ ಮಾಡಬೇಕು. ರಸ್ತೆ ಬದಿ, ಶಾಲಾ, ಕಾಲೇಜು ಆವರಣ, ಮೈದಾನ, ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕವೂ ಮಳೆ ನೀರು ಹರಿದು ಹೋಗುವ ಬದಲು ಇಂಗುವಂತೆ, ಭೂಮಿ ತಂಪಿರುವಂತೆ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಸರ್ಕಾರದ ಸೂಚನೆಯಂತೆ ವಿದ್ಯಾನಗರ ಪಾರ್ಕ್‌ನಲ್ಲಿ ತೆರೆದ ಬಾವಿಗೆ ಸುತ್ತಲಿನ ಮನೆಗಳ ಚಾವಣಿಯ ನೀರನ್ನು ಹರಿಸಲು ಯೋಜನೆ ಹಮ್ಮಿಕೊಂಡಿದ್ದೇವೆ. ಇದು ಯಶಸ್ವಿಯಾದರೆ ತೆರೆದ ಬಾವಿಗಳಿರುವ ಎಲ್ಲ ಪಾರ್ಕ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸುತ್ತೇವೆ. ಮಳೆ ನೀರು ಸಂಗ್ರಹದ ಜತೆಗೆ ಈ ರೀತಿ ಇಂಗುವಂತೆ ಮಾಡಿ ಎಂಥ ಬೇಸಿಗೆ ಬಂದರೂ ನೀರು ಕಡಿಮೆಯಾಗದಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಭರವಸೆ ನೀಡಿದ್ದಾರೆ.

ಸಿದ್ಧಗಂಗಾ ವಿದ್ಯಾಲಯದಲ್ಲಿ ಮಾದರಿ ಮಳೆ ನೀರು ಸಂಗ್ರಹ: ಮಳೆ ನೀರು ಸಂಗ್ರಹ ಮತ್ತು ಬಳಕೆಗೆ ಮಾದರಿಯಾಗುವ ರೀತಿಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಮಳೆ ನೀರು ಸಂಗ್ರಹಿಸಲಾಗುತ್ತಿದೆ. 4 ಲಕ್ಷ ಲೀಟರ್‌ ನೀರು ಸಂಗ್ರಹವಾಗುವ ತೊಟ್ಟಿಯನ್ನು ನಿರ್ಮಿಸಲಾಗಿದೆ.

‘ವಿದ್ಯಾ ಸಂಸ್ಥೆಯ ಮೂರು ಕಟ್ಟಡಗಳಿಂದ ನೀರು ಪೈಪ್‌ಗಳ ಮೂಲಕ ಹರಿದು ಬಂದು ಈ ತೊಟ್ಟಿ ಸೇರುತ್ತದೆ. ಜೋರಾಗಿ ಮಳೆ ಬಂದರೆ ನಾಲ್ಕೈದು ಗಂಟೆಗಳಲ್ಲಿ ಈ ತೊಟ್ಟಿ ತುಂಬಿ ಬಿಡುತ್ತದೆ. ಉಳಿದ ಹೆಚ್ಚಾದ ಮಳೆ ನೀರನ್ನು ಪಾಳು ಬಿದ್ದ ಬಾವಿಗೆ ಬಿಡಲಾಗುತ್ತಿದೆ. ಜತೆಗೆ ಹಾಳಾದ ಕೊಳವೆಬಾವಿಯಲ್ಲೂ ಇಂಗುವಂತೆ ಮಾಡಿದ್ದೇವೆ. ಚಾವಣಿಯ ಇದಲ್ಲದೇ ಮೈದಾನದ ಮೇಲೆ ಬೀಳುವ ನೀರು ಕೂಡ ಇದೇ ರೀತಿ ಇಂಗುವಂತೆ ಮಾಡಿದ್ದೇವೆ’ ಎಂದು ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಜಯಂತ್‌ ವಿವರಿಸಿದರು.

ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ಇದನ್ನು ಅಳವಡಿಸಿಕೊಂಡರೆ ನೀರು ಸದ್ಬಳಕೆ ಆಗುವ ಜತೆಗೆ ಮಕ್ಕಳಿಗೆ ಅದೇ ಒಂದು ಪಾಠವಾಗಲಿದೆ. ಮಕ್ಕಳೂ ಅದನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಅವರು ಸಲಹೆ ನೀಡಿದರು.

ಹೊಸ ಕಟ್ಟಡಗಳಲ್ಲಿವೆ ಮಳೆ ನೀರಿನ ತೊಟ್ಟಿ

ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡದ ಯಾವುದೇ ಕಟ್ಟಡಗಳಿಗೆ ಪಾಲಿಕೆಯಿಂದ ಅನುಮತಿ ನೀಡುತ್ತಿಲ್ಲ. ಹಾಗಾಗಿ ಹೊಸ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹದ ತೊಟ್ಟಿಗಳಿವೆ. ಪಾಲಿಕೆ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಸಹಿತ ಸರ್ಕಾರಿ ಕಚೇರಿಗಳಲ್ಲಿಯೂ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಪಾರ್ಕ್‌ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಇಂಗುಗುಂಡಿಗಳನ್ನು ಮಾಡುತ್ತಿದ್ದೇವೆ. ಈಗಾಗಲೇ 200ಕ್ಕೂ ಅಧಿಕ ಇಂಗುಗುಂಡಿಗಳನ್ನು ಮಾಡಲಾಗಿದೆ.

– ವಿಶ್ವನಾಥ ಪಿ.ಮುದಜ್ಜಿ, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ


ಪಾರ್ಕ್‌ನಲ್ಲಿ ಮಳೆ ನೀರು ಸಂಗ್ರಹ ಮಾದರಿ ನಿರ್ಮಾಣ

ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಮಳೆ ನೀರು ಸಂಗ್ರಹ ತೊಟ್ಟಿ ಇದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಹಿತ ಸ್ಮಾರ್ಟ್‌ಸಿಟಿಯಿಂದ ನಿರ್ಮಿಸುವ ಬೃಹತ್‌ ಯೋಜನೆಗಳಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತೀರ ಜಾಗದ ಕೊರತೆ ಇರುವ ಕೆಲವು ಕಾಮಗಾರಿಗಳು ಮಾತ್ರ ಇದರಿಂದ ಹೊರತಾಗಿವೆ. ಮಳೆ ನೀರು ಸಂಗ್ರಹ ಮತ್ತು ಇಂಗಿಸುವಿಕೆಗೆ ಒಂದು ಪಾರ್ಕ್‌ ಅನ್ನು ಬಳಸಿಕೊಂಡು ಮಾದರಿಯಾಗಿ ರೂಪಿಸಬೇಕು ಎಂಬ ಸೂಚನೆ ಬಂದಿದೆ. ಅದರಂತೆ ಒಂದು ಪಾರ್ಕ್‌ ಅನ್ನು ಇದಕ್ಕಾಗಿ ನಮಗೆ ಹಸ್ತಾಂತರಿಸಲು ಪಾಲಿಕೆಯನ್ನು ಕೋರಿದ್ದೇವೆ.

– ರವೀಂದ್ರ ಮಲ್ಲಾಪುರ, ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ


ಸಿದ್ಧಗಂಗಾದಲ್ಲಿ ಜಲ ಸಂರಕ್ಷಣೆ ಪಾಠ

ಪ್ರಪಂಚದಲ್ಲಿ ಶೇ 73ರಷ್ಟು ನೀರಿದೆ. ಆದರೆ, ಅದರಲ್ಲಿ ಶೇ 98 ಉಪ್ಪು ನೀರು. ಶೇ 2ರಷ್ಟು ಮಾತ್ರ ಸಿಹಿನೀರು ಆಗಿದೆ. ಅದರಲ್ಲಿಯೂ ಶೇ 1.3ರಷ್ಟು ನೀರು ಪೋಲಾರ್‌ ಐಸ್‌ನಲ್ಲಿ ಇರುತ್ತದೆ. ಹಾಗಾಗಿ ಮನುಷ್ಯರಿಗೆ, ಪ್ರಾಣಿ ‍ಪಕ್ಷಿಗಳಿಗೆ, ಕೃಷಿ, ಗಿಡ, ಮರಗಳಿಗೆ ಶೇ 0.7ರಷ್ಟು ಮಾತ್ರ ನೀರು ಲಭ್ಯವಾಗುತ್ತದೆ. ಹಾಗಾಗಿ ನೀರು ಉಳಿತಾಯ ಮಾಡುವುದು ಬಹಳ ಮುಖ್ಯ. ನಾವು ಪಾಠ ಮಾಡುವವರು. ನಾವೇ ಆ ಕೆಲಸವನ್ನು ಅಳವಡಿಸಿಕೊಳ್ಳದೇ ಇದ್ದರೆ ತಪ್ಪಾಗುತ್ತದೆ. ಅದಕ್ಕಾಗಿ ಸಿದ್ಧಗಂಗಾ ಶಾಲೆಯಲ್ಲಿ ನೀರು ಸಂಗ್ರಹ ತೊಟ್ಟಿಯಲ್ಲದೇ, ನೀರು ಇಂಗಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ.

– ಡಾ. ಜಯಂತ್‌, ಸಿದ್ಧಗಂಗಾ ವಿದ್ಯಾಸಂಸ್ಥೆಗಳ ನಿರ್ದೇಶಕ


ನಿಯಮ ಕಡ್ಡಾಯವಾಗಿ ಜಾರಿಗೊಳಿಸಲಿ

ಯಾವುದೇ ಮನೆ, ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡಬೇಕಿದ್ದರೆ ಸೋಲಾರ್‌ ಕಡ್ಡಾಯ ಎಂಬ ನಿಯಮವನ್ನು ಬೆಸ್ಕಾಂ ಮಾಡಿದೆ. ಹಾಗಾಗಿ ಈಗ ಸೋಲಾರ್‌ ಇಲ್ಲದ ಮನೆಗಳಿಲ್ಲ. ಅದೇ ರೀತಿ ಮಳೆ ನೀರು ಸಂಗ್ರಹ ಕಡ್ಡಾಯ ಎಂಬ ಪತ್ರವನ್ನು ಕಡತದಲ್ಲಿ ಇಟ್ಟುಕೊಳ್ಳುವ ಬದಲು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆಗ ಜನರು ಸಹಜವಾಗಿಯೇ ಮಳೆನೀರು ಸಂಗ್ರಹವನ್ನು ಅಳವಡಿಸಿಕೊಳ್ಳುತ್ತಾರೆ.

– ಗಿರೀಶ್‌ ದೇವರಮನೆ, ಪರಿಸರ ಪ್ರೇಮಿ, ದಾವಣಗೆರೆ


ನೀರಿನ ಸಮಸ್ಯೆಗೆ ಪರಿಹಾರ

ಮಳೆ ನೀರು ಸಂಗ್ರಹ ಮಾಡಿಟ್ಟುಕೊಂಡರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಬಹುದು. ಜತೆಗೆ ಇಂಗುಗುಂಡಿಗಳನ್ನು ಪ್ರತಿ ಕಟ್ಟಡಗಳ ಕೆಳಗೆ ಮಾಡಿದರೆ ಅಂತರ್ಜಲ ಕುಸಿಯುವುದನ್ನು ಕೂಡ ತಡೆಯಬಹುದು. ನಗರಕ್ಕೆ ಸೀಮಿತವಾಗದೇ ಜಿಲ್ಲೆಯ ಎಲ್ಲ ಕಡೆ ನೀರು ಇಂಗಿಸಲು ಸಾಧ್ಯವಾದರೆ ಕೃಷಿಗೂ ಅನುಕೂಲ ಆಗಲಿದೆ. ಕೆಟ್ಟು ಹೋದ ಕೊಳವೆಬಾವಿಗಳನ್ನು ಮುಚ್ಚುವ ಬದಲು ನೀರಿಂಗಿಸಲು ಬಳಸಬೇಕು. ಹಾಗೆ ಮಾಡಿದರೆ ಮುಂದೆ ಕೊಳವೆಬಾವಿಯನ್ನು ಕೊರೆದಾಗ ಬೇಗ ನೀರು ಸಿಗಲಿದೆ. ಹಾಗಂತ ಕೊಳವೆಬಾವಿಗಳನ್ನು ಹೆಚ್ಚು ಮಾಡೋದು ಬೇಡ. ಅಂತರ್ಜಲ ಹೆಚ್ಚು ಮಾಡು ಕಾರ್ಯ ಅಧಿಕವಾಗಬೇಕು.

– ನಾಗಜ್ಯೋತಿ, ಹೋರಾಟಗಾರ್ತಿ, ರಾಜೀವಗಾಂಧಿ ಬಡಾವಣೆ, ದಾವಣಗೆರೆ

ಮಳೆ ವಿವರ

662 ಮಿ.ಮೀ.: ವಾಡಿಕೆ ಮಳೆ

849 ಮಿ.ಮೀ.: 2019ರಲ್ಲಿ ಬಿದ್ದ ಮಳೆ

826 ಮಿ.ಮೀ.: 2020ರಲ್ಲಿ ಬಿದ್ದ ಮಳೆ

468 ಮಿ.ಮೀ.: 2021ರಲ್ಲಿ ಇಲ್ಲಿವರೆಗೆ ಆಗಿರುವ ಮಳೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.