ಗುರುವಾರ , ನವೆಂಬರ್ 14, 2019
19 °C
ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಪೊಲೀಸರು ಅರ್ಜಿ ಪರಿಶೀಲಿಸಿದ ಬಳಿಕ ಪುರಸ್ಕಾರ

Published:
Updated:
Prajavani

ದಾವಣಗೆರೆ: ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಅರ್ಜಿ ಹಾಕುವವರನ್ನು ಪೊಲೀಸರಿಂದ ಪರಿಶೀಲನೆ ಮಾಡಿಸಿ ಅವರ ಪೂರ್ವಾಪರಗಳನ್ನು ಗುರುತಿಸಿ ಬಳಿಕ ಪುರಸ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಅವರು ಮಾತನಾಡಿ,‘ಪ್ರಶಸ್ತಿಯನ್ನು ಅರ್ಹರಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದ್ದು, ಯಾವುದೇ ಪ್ರಕರಣ ಇರದವರನ್ನು ಪರಿಗಣಿಸಲಾಗುವುದು. ಅರ್ಜಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪರಿಶೀಲನೆಯ ನಂತರ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಹೇಳಿದರು.

‘ಸಿಇಒ ಅಧ್ಯಕ್ಷತೆಯಲ್ಲಿ ಉಪವಿಭಾಗಾಧಿಕಾರಿ, ನಗರಪಾಲಿಕೆ ಆಯುಕ್ತರನ್ನೊಗೊಂಡ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಅಭಿವೃದ್ಧಿಗಾಗಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಆಯ್ಕೆ ಮಾಡುತ್ತದೆ. ಪುರಸ್ಕಾರಕ್ಕೆ ಗೌರವ ಬರುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿದ ಅವರು, ಈ ಬಾರಿ 15 ಕ್ಷೇತ್ರಗಳಲ್ಲಿ ತಲಾ ಮೂವರು ಸಾಧಕರನ್ನು ವೇದಿಕೆ ಮೇಲೆ ಸನ್ಮಾನಿಸಲಾಗುವುದು’ ಎಂದು ಹೇಳಿದರು.

ಪ್ಲಾಸ್ಟಿಕ್ ನಿಷೇಧ: ‘ಸೆ.1 ರಿಂದ ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗಿದ್ದು, ರಾಜ್ಯೋತ್ಸವದ ಧ್ವಜಗಳು, ಫ್ಲೆಕ್ಸ್‌ ಹಾಗೂ ಇತರೆ ಪರಿಕರಗಳನ್ನು ಬಟ್ಟೆಯಿಂದಲೇ ತಯಾರಿಸಿ ಪ್ರದರ್ಶಿಸಬೇಕು. ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ದಂಡ ಮತ್ತು ಪ್ರಕರಣ ದಾಖಲಿಸಲಾಗುವುದು. ಕನ್ನಡ ಸಂಘಟನೆಗಳ ಕಚೇರಿಗಳೂ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳೂ ಸಹ ಸ್ವಯಂ ಪ್ರೇರಿತರಾಗಿ ಅಂದು ಕನ್ನಡ ಧ್ವಜಗಳನ್ನು ಹಾರಿಸಬೇಕು ಹಾಗೂ ವಿದ್ಯುತ್‌ ದೀಪಾಲಂಕಾರ ಮಾಡಬೇಕು’ ಎಂದು ಸೂಚಿಸಿದರು.

‘ಕನ್ನಡ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ತಮ್ಮ ತಮ್ಮ ಕಚೇರಿಗಳಲ್ಲಿ ಬೇಗ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಜಿಲ್ಲಾಡಳಿತದಿಂದ ನಡೆಸುವ ಭುವನೇಶ್ವರಿ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕನ್ನಡದ ಬಗೆಗಿನ ಅಭಿಮಾನ, ಸ್ವಾಭಿಮಾನ, ನಾಡಿನ ಬಗೆಗಿನ ಗೌರವ ಬರೀ ಮಾತಿನಲ್ಲಿ ಅಲ್ಲ. ನಮ್ಮ ನಡವಳಿಕೆಯಲ್ಲಿ ಇರಬೇಕು’ ಎಂದು ತಿಳಿಹೇಳಿದರು.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ ಜಿ, ‘ಕನ್ನಡ ರಾಜ್ಯೋತ್ಸವದ ರೂಪುರೇಷೆಗಳನ್ನು ವಿವರಿಸಿ, ‘ನ.1ರಂದು ಮೆರವಣಿಗೆ ನಂತರ ಬೆಳಿಗ್ಗೆ 10ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜಾರೋಹಣ ನೆರವೇರಿಸುವರು. ನಂತರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕನ್ನಡ ಸಂಘ ಸಂಸ್ಥೆಗಳಿಂದ ಕನ್ನಡ ನಾಡು ನುಡಿ ಕುರಿತಾದ ಸ್ತಬ್ದಚಿತ್ರ ಪ್ರದರ್ಶನವಿರುತ್ತದೆ’ ಎಂದರು.

ವಿಶ್ವಕನ್ನಡ ವೇದಿಯ ಜಿಲ್ಲಾ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಮಾತನಾಡಿ, ‘ನವೆಂಬರ್ ತಿಂಗಳು ಪೂರ್ತಿ ಕನ್ನಡ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಹಾಗೂ  ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕಬೇಕೆಂದು ಮನವಿ ಮಾಡಿದರು.

ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್, ‘ಎಲ್ಲೆಡೆ ಕಡ್ಡಾಯವಾಗಿ ಕನ್ನಡ ನಾಮಫಲಕ ಪ್ರದರ್ಶಿಸಲು ಜಿಲ್ಲಾಧಿಕಾರಿಗಳು ಆದೇಶಿಸಬೇಕು’ ಎಂದು ಆಗ್ರಹಿಸಿದರು.

ಪತ್ರಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ‘ರಾಜ್ಯೋತ್ಸವವು ಕೇವಲ ಸರ್ಕಾರಿ ಆಚರಣೆಯಾಗದಂತೆ ಜನರ ಉತ್ಸವವಾಗುವಂತೆ ಆಚರಣೆಯಾಗಬೇಕು. ಕ್ರಿಯಾತ್ಮಕವಾದ ಸ್ತಬ್ದಚಿತ್ರ ಪ್ರದರ್ಶನ, ಕೆಂಪು-ಹಳದಿ ಬಣ್ಣದ ದೀಪಾಲಂಕಾರ ಮಾಡಬೇಕು’ ಎಂದು ಮನವಿ ಮಾಡಿದರು.

ಬಯಲು ನಾಟಕ ಅಕಾಡೆಮಿಯ ಸದಸ್ಯರಾದ ಎನ್.ಎಸ್. ರಾಜು, ‘ಕಲಾತಂಡಗಳಲ್ಲಿ ಭಾಗವಹಿಸುವ ಗ್ರಾಮೀಣ ಭಾಗದ ಕಟ್ಟಕಡೆಯ ಕಲಾವಿದರನ್ನು ಗುರುತಿಸಿ ಸನ್ಮಾನಿಸಬೇಕೆಂದು’ ಮನವಿ ಮಾಡಿದರು.

ಸಭೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ಸ.ರಂ.ಗಂಗಪ್ಪ, ಕಿ. ಮಂಜನಾಯ್ಕ, ಡಿ. ಪರಮೇಶ್ವರಪ್ಪ, ಪ್ರವೀಣ್, ರಾಜುನಾಯ್ಕ, ಕೆ.ಜಿ. ಶಿವಕುಮಾರ್, ಎಸ್.ಕೆ.ಕುಲಕರ್ಣಿ, ಶಿವಾನಂದಯ್ಯ ಎಚ್.ಎಂ, ಮಂಜುನಾಥ ಬಾಳೆಕಾಯಿ, ಜಗದೀಶ್ ಎಸ್.ಪಿ, ಕೆ.ಬಿ. ರುದ್ರೇಶ್, ನಾರಾಯಣಮೂರ್ತಿ, ಯಾಕೂಬ್ ಕೊಟ್ಟೂರು, ಮಂಜುನಾಥ್ ಎಸ್, ಎನ್. ರವಿಕುಮಾರ್, ಗೋಪಾಲಗೌಡ, ಟಿ. ಮಂಜುನಾಥಗೌಡ, ಸುಧಾಕರ್, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಎಸ್‍ಎಲ್‍ಎಒ ರೇಷ್ಮಾ ಹಾನಗಲ್, ಡಿಎಚ್‍ಒ ಡಾ. ರಾಘವೇಂದ್ರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)