ಸೋಮವಾರ, ಜೂನ್ 21, 2021
24 °C
ಪಡಿತರದಾರರಿಗೆ ತಿಂಗಳಿಗೆ 1 ಲೀಟರ್‌ ಇಂಧನ ನೀಡುವಂತೆ ವರದಿ: ಡಾ. ಕೃಷ್ಣಮೂರ್ತಿ

ಸೀಮೆಎಣ್ಣೆ ವಿತರಣೆಗೆ ಸರ್ಕಾರಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಪಡಿತರದಾರರಿಗೆ ತಿಂಗಳಿಗೆ ಕನಿಷ್ಠ 1 ಲೀಟರ್‌ ಸೀಮೆಎಣ್ಣೆ ವಿತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣಮೂರ್ತಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಾಗರಿಕರ ಅಹವಾಲುಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಅನಿಲ ಭಾಗ್ಯ, ನಿರಂತರ ಜ್ಯೋತಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ತುರ್ತು ಸಂದರ್ಭದಲ್ಲಿ ದೀಪದ ಬಳಕೆ ಹಾಗೂ ಇತರ ಉದ್ದೇಶಗಳಿಗೆ ಸೀಮೆಎಣ್ಣೆ ಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೀರು ಕಾಯಿಸಲು ಇನ್ನೂ ಸೌದೆ ಒಲೆಗಳನ್ನೇ ಅವಲಂಬಿಸಲಾಗಿದೆ. ಹೀಗಾಗಿ, ಸೀಮೆಎಣ್ಣೆಯ ಅಗತ್ಯವಿದೆ ಎಂದರು.

ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದಾವಣಗೆರೆಯಲ್ಲಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಲೋಪಗಳು ಕಂಡುಬಂದಿಲ್ಲ. ಇಲ್ಲಿ 781 ನ್ಯಾಯಬೆಲೆ ಅಂಗಡಿಗಳಿದ್ದು, ಆಹಾರ ಧಾನ್ಯ ವಿತರಣೆ ಚೆನ್ನಾಗಿ ನಡೆಯುತ್ತಿದೆ. ಆಧಾರ್‌ ಜೋಡಣೆ ಮತ್ತು ಬಯೊಮೆಟ್ರಿಕ್‌ ಅಳವಡಿಕೆಯಿಂದಾಗಿ ಆಹಾರ ಧಾನ್ಯ ವಿತರಣೆಯ ಅಕ್ರಮಕ್ಕೆ ತಡೆ ಬಿದ್ದಿದೆ. ತಿಂಗಳಿಗೆ ಶೇ 20ರಷ್ಟು ಧಾನ್ಯಗಳು ಸರ್ಕಾರಕ್ಕೆ ಉಳಿತಾಯವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹಾಸ್ಟೆಲ್‌, ಅಂಗನವಾಡಿ ನಿರ್ವಹಣೆಯಲ್ಲಿ ನ್ಯೂನತೆ:

ಹಾಸ್ಟೆಲ್‌ ಮತ್ತು ಅಂಗನವಾಡಿಗಳ ಆಹಾರ ನಿರ್ವಹಣೆಯಲ್ಲಿ ನ್ಯೂನತೆ ಕಂಡುಬಂದಿದೆ. ಹಾಸ್ಟೆಲ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಆದರೆ, ಆಹಾರ ವಿತರಣೆಯ ಪ್ರಮಾಣ ಹೆಚ್ಚು ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಾಡುವ ಅಪಾಯವಿದೆ. ಇನ್ನು ಅಂಗನವಾಡಿಗಳಲ್ಲಿ ಸರ್ಕಾರದ ನಿಯಮಗಳಂತೆ ಆಹಾರ ವಿತರಣೆ ಮಾಡಲಾಗುತ್ತಿಲ್ಲ. ಅಲ್ಲದೇ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕುದಾದ ಕೌಶಲಗಳನ್ನೂ ಕಲಿಸುವಲ್ಲಿ ಸಿಬ್ಬಂದಿ ಹಿಂದೆ ಬಿದ್ದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಆಯೋಗದ ಸದಸ್ಯ ಡಿ.ಎಚ್. ಹಸಬಿ, ‘ ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಚನ್ನಾಗಿ ನಡೆಯುತ್ತಿದೆ. ಆದರೆ, ಒಂದು ಶಾಲೆಯಲ್ಲಿ ಪ್ರತಿಭಾ ಕಾರಂಜಿಗೆ ಬಿಸಿಯೂಟದ ಅಕ್ಕಿ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ಸಾಕಷ್ಟು ಆಹಾರ ಕೊಡಲು ಸಾಧ್ಯವಾಗಿಲ್ಲ. ಹೀಗಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಸದಸ್ಯರಾದ ಶಿವಕುಮಾರ್‌, ಮಂಜುಳಾ ಬಾಯಿ, ಮೊಹಮದ್‌ ಅಲಿ ಮಾತನಾಡಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಡಿಎಚ್ಒ ತ್ರಿಫುಲಾಂಭ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಪರಿಶಿಷ್ಟ ಪಂಗಡದ ಜಿಲ್ಲಾ ಅಧಿಕಾರಿ ದೇವೆಂದ್ರಪ್ಪ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಅನ್ನ ಕೇಳಿದರೆ ಹೊಡೀತಾರೆ ಸರ್‌!

‘ಶಾಲೆಯ ಹಾಸ್ಟೆಲ್ ಒಂದರಲ್ಲಿ ಸಮಿತಿ ಭೇಟಿ ನೀಡಿದಾಗ ಮಕ್ಕಳು ಸರ್ ಹೊಡೀತಾರೆ ಅಂದರು. ನಾವು ಯಾರು ಶಿಕ್ಷಕರಾ ಎಂದು ಕೇಳಿದೆವು? ಇಲ್ಲಾ ಸರ್ ಸಂಬಾರ್, ಅನ್ನ ಕೇಳಿದರೆ ಅಡುಗೆಯವರು ಹೊಡೀತಾರೆ ಎಂದು ದೂರು ನೀಡಿದ್ದಾರೆ. ಇದೊಂದು ಬಹಳ ಮುಜಗರದ ಸಂಗತಿ. ತಕ್ಷಣ ಅವರಿಗೆ ಎಚ್ಚರಿಕೆ ನೀಡಿ. ಈ ಕೂಡಲೇ ಆಯೋಗಕ್ಕೆ ವರದಿ ಸಲ್ಲಿಸಲು ವಾರ್ಡನ್‌ಗೆ ಸೂಚಿಸಲಾಗಿದೆ’ ಎಂದು ಆಯೋಗದ ಸದಸ್ಯ ಡಿ.ಎಚ್. ಹಸಬಿ ತಿಳಿಸಿದರು.

ಮರದ ಪೆಟ್ಟಿಗೆ ಬಳಸಲು ಸಲಹೆ

‘ಜಿಲ್ಲೆಯ ಗೋದಾಮುಗಳಲ್ಲಿ 890 ಕ್ವಿಂಟಾಲ್ ರಾಗಿ ದಾಸ್ತಾನಿದೆ. ಅದನ್ನು ದಾಸ್ತಾನು ಮಾಡಿ ಈಗಾಗಲೇ 3 ತಿಂಗಳು ಕಳೆದಿದೆ. ಹೆಚ್ಚು ದಿನ ಇಟ್ಟರೆ ಕೆಡುವ ಸಾಧ್ಯತೆ ಜಾಸ್ತಿ. ಕೆಲವೆಡೆ ಪಾಮ್ ಆಯಿಲ್ ಹಾಳಾಗುವ ಸಂಭವ ಇದೆ. ಹೀಗಾಗಿ, ಈ ಪದಾರ್ಥಗಳನ್ನು ಬೇಗನೇ ವಿಲೇವಾರಿ ಮಾಡಬೇಕು. ಹರಿಹರದಲ್ಲಿರುವಂತೆ ಮರದ ಪೆಟ್ಟಿಗೆಯ ದಾಸ್ತಾನು ಮಾದರಿಯನ್ನು ಎಪಿಎಂಸಿಯವರೂ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ’ ಎಂದು ಕೃಷ್ಣಮೂರ್ತಿ ಸಲಹೆ ನೀಡಿದರು.

ಜಾಗೃತ ಸಮಿತಿ ಪುನರ್‌ರಚನೆಗೆ ಪ್ರಸ್ತಾವ

ನ್ಯಾಯಬೆಲೆ ಅಂಗಡಿಗೊಂದರಂತೆ ಜಾಗೃತ ಸಮಿತಿ ರಚಿಸಿ, ಸದಸ್ಯೆಯರನ್ನು ನೇಮಕ ಮಾಡಲಾಗಿತ್ತು. ಅವರ ಮೊಬೈಲ್ ನಂಬರ್‌ಗಳನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ಆದರೆ, ಪುಂಡರು ಆ ಮೊಬೈಲ್‌ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಂಡರು. ಹೀಗಾಗಿ, ಈಗಿರುವ ಮೂವರು ಸದಸ್ಯರ ಬದಲಾಗಿ ಐವರ ಸಮಿತಿ ರಚಿಸಲು, ಸಮಿತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಇದೆ ಎಂದು ಸದಸ್ಯ ವಿ.ಬಿ. ಪಾಟೀಲ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು