ಬುಧವಾರ, ಆಗಸ್ಟ್ 4, 2021
27 °C
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆರೋಗ್ಯಾಧಿಕಾರಿಗಳಿಗೆ ಸೂಚನೆ

ಕೊರೊನಾ ಸಾವಿನ ಸಂಖ್ಯೆ ಕಡಿಮೆಗೊಳಿಸಿ: ಜಿಲ್ಲಾಧಿಕಾರಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಉತ್ತಮ ಸ್ಥಿತಿಯಲ್ಲಿದೆ. ಇದರ ಜತೆಗೆ ಸಾವಿನ ಪ್ರಮಾಣ ಕಡಿಮೆಯಾಗಲು ಮತ್ತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಮುಖ್ಯಮಂತ್ರಿಗಳ ವಿಡಿಯೊ ಸಂವಾದದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದು ಅಂದಾಜಿನಂತೆ ನೂರು ಪಾಸಿಟಿವ್ ಪ್ರಕರಣಗಳಿಗೆ ಒಂದು ಸಾವು ಸಂಭವಿಸಬಹುದು. ನಮ್ಮಲ್ಲಿ ಆ ಪ್ರಮಾಣ ಸ್ವಲ್ಪ ಹೆಚ್ಚಿದೆ. ಇದನ್ನು ತಗ್ಗಿಸಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂದರು.

ಕಂಟೈನ್‌ಮೆಂಟ್ ಝೋನ್, ಬಫರ್ ಝೋನ್ ಸೇರಿ ಎಲ್ಲ ಪ್ರದೇಶಗಳಲ್ಲಿ ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪಾಸಿಟಿವ್ ಇರುವವರನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಸೋಂಕು ಲಕ್ಷಣ ಇರುವವರು ತಡಮಾಡದೆ ಆಸ್ವತ್ರೆಗೆ ಬಂದರೆ ಶೀಘ್ರ ಗುಣಪಡಿಸಲು ನೆರವಾಗುತ್ತೆದೆ ಎಂದರು.

‘ಹೊರ ಜಿಲ್ಲೆಗಳಿಂದ ಬಂದಿರುವ 1,400 ಜನರ ಪಟ್ಟಿ ಮಾಡಲಾಗಿದೆ. ಅವರ ಮೇಲೆ ನಿಗಾ ಇರಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಹೊರ ಜಿಲ್ಲೆಗಳಿಂದ ಬಂದವರನ್ನು ಊರೊಳಗೆ ಸೇರಿಸಿಕೊಳ್ಳುತ್ತಿಲ್ಲ ಎಂಬ ದೂರುಗಳಿದ್ದವು. ಅಂತಹವನ್ನು ಪರಿಹರಿಸಲಾಗಿದೆ. ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತೆಯಿಂದ ಇರುವಂತೆ ಜಾಗೃತಿ ಮೂಡಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

ಕೊರೊನ ಪ್ರಕರಣ ವರದಿಯಾದ ತಕ್ಷಣ ಅವರ ಎಲ್ಲಾ ಮಾಹಿತಿ ಪಡೆದು ಸೋಂಕಿತರ ಮನೆ ಹಾಗೂ ಮಾರ್ಗಸೂಚಿಯಂತೆ ಮನೆಗಳನ್ನು ಮೂರು ಗಂಟೆಗಳ ಒಳಗೆ ಬ್ಯಾರಿಕೇಡ್‌ ಹಾಕಿ ಸೀಲ್‌ಡೌನ್ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಎಚ್‌ಒ ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ಡಾ ನಟರಾಜ್, ಡಾ.ಕಾಳಪ್ಪ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.