ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಪರಿಷ್ಕರಣೆಗೆ ಆಗ್ರಹ

ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳ ಸಂಘದಿಂದ ಪ್ರತಿಭಟನೆ
Last Updated 2 ಡಿಸೆಂಬರ್ 2019, 10:23 IST
ಅಕ್ಷರ ಗಾತ್ರ

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳ ಸಂಘದಿಂದ ನಗರದ ಮಂಡಿಪೇಟೆಯ ಕೆನರಾ ಬ್ಯಾಂಕ್ ಶಾಖೆಯ ಆವರಣದಲ್ಲಿ ಭಾನುವಾರ ಪಿಂಚಣಿದಾರರು ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಎ.ಎನ್. ಕೃಷ್ಣಮೂರ್ತಿ ಮಾತನಾಡಿ, ‘ಎರಡು ದಶಕಗಳಿಂದಲೂ ಪಿಂಚಣಿ ಪರಿಷ್ಕರಣೆಯಾಗಿಲ್ಲ. ಜಿಎಸ್‍ಟಿಯನ್ನೂ ಹೇರಲಾಗುತ್ತಿದೆ. ಇದರಿಂದ ನಿವೃತ್ತ ನೌಕರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ವೇತನ ಹೆಚ್ಚಳ ಮಾಡುತ್ತಿದ್ದಂತೆಯೇ ತೆರಿಗೆಯನ್ನೂ ಹೆಚ್ಚಿಸುತ್ತಿವೆ.

1999ರಿಂದಲೂ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಹೆಚ್ಚಳವಾಗಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟ, ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಸರ್ಕಾರವಾಗಲೀ, ಬ್ಯಾಂಕ್‍ನ ಆಡಳಿತ ಮಂಡಳಿಯಾಗಲೀ ಸ್ಪಂದಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ನೌಕರರಿಗೆ 1994ರಲ್ಲಿ ಪಿಂಚಣಿ ಯೋಜನೆ ಜಾರಿಗೊಂಡರೂ ಈವರೆಗೂ ಪರಿಷ್ಕರಣೆಯಾಗಿಲ್ಲ. ಕುಟುಂಬ ಪಿಂಚಣಿ ಶೇ 15ರಷ್ಟು ಮಾತ್ರ ನೀಡಲಾಗುತ್ತಿದೆ. ಆರೋಗ್ಯ ಪಿಂಚಣಿಯೂ ದುಬಾರಿಯಾಗಿದ್ದು, ಅದಕ್ಕೆ ಶೇ 18 ಜಿಎಸ್‍ಟಿ ಇದೆ. ಮದ್ಯಪಾನದ ಮೇಲೆ ಶೇ 5 ತೆರಿಗೆ ಹೇರುವ ಸರ್ಕಾರವು ಕುಟುಂಬ ಆರೋಗ್ಯ ಕಾಪಾಡುವ ಯೋಜನೆ ಮೇಲೆ ಶೇ 18 ತೆರಿಗೆ ಹೇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ‘ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ವೇತನ ಆಯೋಗದಡಿ ತಕ್ಷಣವೇ ಪಿಂಚಣಿ ಪರಿಷ್ಕರಣೆಯಾಗುತ್ತದೆ. ಆದರೆ, ಬ್ಯಾಂಕ್ ನೌಕರರಿಗೆ ಮಾತ್ರ 25 ವರ್ಷಗಳಿಂದಲೂ ಆಗಿಲ್ಲ. ಕೇಂದ್ರ ಸರ್ಕಾರ, ಬ್ಯಾಂಕ್‍ನ ಆಡಳಿತ ಮಂಡಳಿಯು ಪಿಂಚಣಿ ಪರಿಷ್ಕರಣೆ ಮಾಡುವ ಮೂಲಕ ಸ್ಪಂದಿಸಲಿ’ ಎಂದು ಒತ್ತಾಯಿಸಿದರು.

20 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಪರಿಷ್ಕರಣೆ, ರಿಯಾಯಿತಿ ದರದಲ್ಲಿ ನಿವೃತ್ತರಿಗೆ ಆರೋಗ್ಯ ವಿಮೆ ಸೌಲಭ್ಯ ನೀಡುವುದು, ಆರಂಭಿಕ ವೇತನ, ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ವಿವಿಧ ಬ್ಯಾಂಕ್ ನೌಕರರ, ನಿವೃತ್ತರ ಸಂಘಟನೆಗಳ ಮುಖಂಡರಾದ ಅಜಿತ್‍ಕುಮಾರ ನ್ಯಾಮತಿ, ಸಂಘಟನೆ ಜಿಲ್ಲಾ ಕಾಯದರ್ಶಿ ಎಚ್. ನಾಗರಾಜ್, ಎಚ್.ವಿರುಪಾಕ್ಷಪ್ಪ, ಎನ್.ಟಿ.ಎರ‍್ರಿಸ್ವಾಮಿ, ಎಂ.ಗುಡ್ಡಪ್ಪ, ರಾಮಚಂದ್ರ ನಾಯಕ, ಹುಲುಗಪ್ಪ ಪೂಜಾರ್, ಕೆ.ಎಸ್. ಮಹೇಶ್ವರಪ್ಪ, ಪಿ.ಕೆ.ಗೊಂಬಿ, ಗಾಯತ್ರಿ ಡಿ.ಗುಡ್ಡಪ್ಪ, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಆರ್. ಆಂಜನೇಯ, ವಿಶ್ವನಾಥ ಬಿಲ್ಲವ, ಎಚ್. ನಾಗರಾಜ, ಹರಿಹರದ ಗಾಯತ್ರಿ, ಜಿ.ರಂಗಸ್ವಾಮಿ, ವಿರುಪಾಕ್ಷಪ್ಪ, ಜೆ.ಒ.ಮಹೇಶ್ವರಪ್ಪ, ಎಚ್. ಸೂರಪ್ಪ, ಎಂ.ಶಿವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT