ಸಂತೇಬೆನ್ನೂರು: ಕೇಂದ್ರ ಸರ್ಕಾರದ ಮಹತ್ವದ ಯೋಜನೆ ‘ಜಲ ಜೀವನ್ ಮಿಷನ್’ (ಜೆಜೆಎಂ) ಗ್ರಾಮದಲ್ಲಿ ಸಂಪೂರ್ಣ ವೈಫಲ್ಯವಾಗಿದ್ದು, ಹಳೇ ವ್ಯವಸ್ಥೆಯಲ್ಲಿಯೇ ನೀರು ಪೂರೈಸಲಾಗುತ್ತಿದೆ.
ಗ್ರಾಮದ ಭೌಗೋಳಿಕ ರಚನೆಯನ್ನು ಪರಿಗಣಿಸದೇ ಅವೈಜ್ಞಾನಿಕವಾಗಿ ಪೈಪ್ ಲೈನ್ ಅಳವಡಿಸಲಾಗಿದೆ. ಇದರಿಂದಾಗಿ ಜೆಜೆಎಂ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕುತ್ತಿದೆ ಎಂಬುದು ಬಹುತೇಕ ಮನೆಗಳ ಸದಸ್ಯರ ದೂರು.
‘ಜೆಜೆಎಂ ವ್ಯವಸ್ಥೆಯಲ್ಲಿ ತಿಂಗಳುಗಟ್ಟಲೆ ನೀರು ಹರಿಸಿದರೂ, ವ್ಯವಸ್ಥೆ ಸುಧಾರಿಸಿಲ್ಲ. ಹಳೇ ನಲ್ಲಿಯಲ್ಲಿಯೇ ನೀರು ಬಿಡಿ ಎಂದು ಜನರು ಆಗ್ರಹಿಸಿದ್ದರು. ಸರಿಪಡಿಸಲಾಗದ ಅನಿವಾರ್ಯತೆಯಲ್ಲಿ ಹಳೇ ವ್ಯವಸ್ಥೆಗೆ ಮೊರೆ ಹೋಗಲಾಗಿದೆ’ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರ ಸಮರ್ಥನೆಯಾಗಿದೆ.
‘₹ 5 ಕೋಟಿ ವೆಚ್ಚದ ಜೆಜೆಎಂ ಯೋಜನೆ ವಿಫಲವಾಗಿದೆ. ಗ್ರಾಮದ 8 ವಾರ್ಡ್‌ಗಳಲ್ಲಿ 3,100 ನಲ್ಲಿಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗಿತ್ತು. ಸಾರ್ವಜನಿಕರು ನೀರಿಗಾಗಿ ಪರದಾಡಿದ ಪರಿಣಾಮ ಕಳೆದ 6 ತಿಂಗಳಿನಿಂದ ಜೆಜೆಎಂ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮ ಪಂಚಾಯಿತಿಯ ಪೈಪ್‌ಲೈನ್‌ಗಳಲ್ಲಿಯೇ ನೀರು ಬಿಡಲಾಗುತ್ತಿದೆ’ ಎನ್ನುತ್ತಾರೆ ಪಿಡಿಒ ಗೋಪಾಲ ಕೃಷ್ಣ.
‘ಜೆಜೆಎಂ ಕುಡಿಯುವ ನೀರಿನ ಯೋಜನೆ ಸರಿಪಡಿಸಲು ಸಭೆ ಕರೆಯಲಾಗಿತ್ತು. ಗುತ್ತಿಗೆದಾರರು ಸಭೆಗೆ ಹಾಜರಾಗಿಲ್ಲ. ಅಳವಡಿಸಿದ ನಲ್ಲಿಗಳಲ್ಲಿ ಶೇ 80ರಷ್ಟು ಮುರಿದು ಬಿದ್ದಿವೆ. ಪ್ರತಿ ಮನೆಯ ನಲ್ಲಿಗಳಿಗೆ ಮೀಟರ್, ನಿಯಂತ್ರಕಗಳು ತೋರಿಕೆಗಾಗಿ ಇವೆ. ಸಮಗ್ರವಾಗಿ ಪರಿಶೀಲಿಸಿ ಪೂರಕ ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ವಿಜಯ್ ಕುಮಾರ್.
‘ಮನೆ ಮನೆಗೆ ಗಂಗೆ ಘೋಷಣೆ ಅಡಿಯಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಪೈಪ್ ಲೈನ್ ಅಳವಡಿಸಲಾಗಿದೆ. ಇತ್ತ ರಸ್ತೆಯೂ ಹಾಳು, ನೀರೂ ಇಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಸ್.ಶಿವರಾಜ್, ಕೆ.ಸಿ.ಮಂಜು, ವೈ.ಎಸ್.ರುದ್ರೇಶ್.
ಗ್ರಾಮದಲ್ಲಿ 16,000 ಜನಸಂಖ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆ ಈಡೇರಿಸಲು ಜೆಜೆಎಂ ಯೋಜನೆ ಮೊದಲ ಹಂತದಲ್ಲಿಯೇ ಕಳೆದ ವರ್ಷ ಕಾಮಗಾರಿ ಪೂರ್ಣಗೊಂಡಿತು. ಹಲವು ಪ್ರಾಯೋಗಿಕ ಪರೀಕ್ಷೆಯಲ್ಲಿ ವಿಫಲತೆ ಕಂಡಿತು. ದೂರು ಸ್ವೀಕರಿಸಿ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ನಡೆಸಿದರೂ, ನೀರು ಬರಲೇ ಇಲ್ಲ. ಅನಿವಾರ್ಯವಾಗಿ ಹಳೇ ವ್ಯವಸ್ಥೆಯಲ್ಲಿಯೇ ನೀರು ಪೂರೈಸಲಾಗುತ್ತಿದೆ ಎನ್ನುತ್ತಾರೆ ಗ್ರಾ.ಪಂ. ಸದಸ್ಯ ರಹಮತ್ ಉಲ್ಲಾ.
ಜೆಜೆಎಂ ನೀರು ಪೂರೈಕೆ ಕಾಮಗಾರಿ ಪೂರ್ಣಗೊಂಡ ನಂತರ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರುವುದನ್ನು ಗ್ರಹಿಸಿಯೇ ಗ್ರಾಮ ಪಂಚಾಯಿತಿ ನಿರ್ವಹಣೆಗೆ ವಹಿಸಲಾಗಿತ್ತು. ಲೋಪದೋಷಗಳಿದ್ದರೆ ಗುತ್ತಿಗೆದಾರರನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು
-ಬಿ.ಎನ್.ಲೋಹಿತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.