ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡರನಾಯ್ಕನಹಳ್ಳಿ: ಗ್ರಾಮಸ್ಥರಿಂದ ₹ 6 ಲಕ್ಷ ದೇಣಿಗೆ ಸಂಗ್ರಹ, ಸುಂದರಗೊಂಡ ಶಾಲೆ

Last Updated 10 ಫೆಬ್ರವರಿ 2023, 4:29 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಸಮೀಪದ ಹಿಂಡಸಘಟ್ಟ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಹಿಂಡಸಘಟ್ಟ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 20 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಸಂಪೂರ್ಣ ನವೀಕರಣಗೊಂಡು ಆಕರ್ಷಿಸುತ್ತಿದೆ.

ಬೆಟ್ಟಗುಡ್ಡ, ತೋಟ, ಗದ್ದೆಗಳ ಮಧ್ಯದಲ್ಲಿರುವ ಈ ಪುಟ್ಟ ಗ್ರಾಮದಲ್ಲಿ 85 ಮನೆಗಳಿವೆ. ಬಹುಪಾಲು ಪರಿಶಿಷ್ಟ ಸಮುದಾಯದ, ಕೃಷಿ ಕಾರ್ಮಿಕರೇ ಇಲ್ಲಿ ವಾಸವಿದ್ದಾರೆ. ಅವರ ಮಕ್ಕಳಿಗಾಗಿ ಇರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5 ನೇ ತರಗತಿಯವರೆಗೆ ಕಲಿಯಲು ಅವಕಾಶವಿದ್ದು, 20 ವಿದ್ಯಾರ್ಥಿಗಳು, 16 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 36 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮುಖ್ಯೋಪಾಧ್ಯಾಯ ಅರುಣ್ ಕುಮಾರ್ ಬಿ, ಸಹಶಿಕ್ಷಕಿ ಲಕ್ಷ್ಮೀದೇವಿ ಎಚ್.ಸೇವೆ ಸಲ್ಲಿಸುತ್ತಿದ್ದು, ಎರಡು ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. ಇನ್ನೊಂದು ಕೊಠಡಿಯ ಅವಶ್ಯವಿದೆ. ಶಾಲೆಯ ಆವರಣದಲ್ಲೇ ಪುಟ್ಟ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವಿದೆ.

ಶಿಕ್ಷಕರ ಶ್ರಮ, ಪಾಲಕರ ಪ್ರೋತ್ಸಾಹದಿಂದ ಕಲಿಕೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಾಲೆ ಹೆಸರು ಮಾಡಿದೆ. ಶಾಲೆಯ ನವೀಕರಣಕ್ಕಾಗಿ ಮುಖ್ಯೋಪಾಧ್ಯಾಯರು, ಶಿಕ್ಷಕಿ, ಎಸ್‌ಡಿಎಂಸಿ ಅದ್ಯಕ್ಷ ನಾಗರಾಜ ನಾಯ್ಕ, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ನಾಯ್ಕ, ಗ್ರಾಮದ ಯುವಕು ಶ್ರಮಿಸಿ, ಅಕ್ಕಪಕ್ಕದ ಗ್ರಾಮದ ದಾನಿಗಳಿಂದ ಹಣ, ವಸ್ತುಗಳ ರೂಪದಲ್ಲಿ ₹ 6 ಲಕ್ಷದವರೆಗೆ ದೇಣಿಗೆ ಸಂಗ್ರಹಿಸಿದ್ದಾರೆ. ಎಲ್ಲರ ಸಹಕಾರದಿಂದ ಸುಸಜ್ಜಿತ ಗೇಟ್‌, ದ್ವಜಸ್ಥಂಭ, ಪ್ರವೇಶದ್ವಾರ ಸಿದ್ಧಗೊಂಡಿವೆ.

‘ನಲಿ ಕಲಿ’ ಕೊಠಡಿಯಲ್ಲಿ ಮಕ್ಕಳ ಕಲಿಕೆಗೆ ಅವಶ್ಯವಾದ ಕಲಿಕಾ ಅಂಶಗಳನ್ನು ಬಣ್ಣ ಬಣ್ಣದ ಅಕ್ಷರಗಳಿಂದ ಫ್ಲೆಕ್ಸ್‌ನಲ್ಲಿ ಮಾಡಿಸಿ ನಾಲ್ಕು ಗೋಡೆಗಳಿಗೂ ಅಂಟಿಸಲಾಗಿದೆ. ಅಕ್ಷರ ಚಪ್ಪರ ಈ ಕೊಠಡಿಗೆ ಮೆರುಗು ನೀಡಿದೆ.

700 ಅಡಿ ಕಾಂಪೌಂಡ್‌ಗೆ ಆಕರ್ಷಕ ಬಣ್ಣ ಬಳಿಯಲಾಗಿದೆ. ಕಾಂಪೌಂಡ್‌ ಮುಂದಿನ ಗೋಡೆಯಲ್ಲಿ ಭಾರತ ಮಾತೆ, ಕನ್ನಡ ತಾಯಿ ಭುವನೇಶ್ವರಿಯ ಚಿತ್ರಗಳು, ವಿಜ್ಞಾನದ ಪ್ರಗತಿಗೆ ಸಂಬಂಧಿಸಿದ ಚಿತ್ರಗಳು, ರೋಬೋ, ಯೋಗಾಸನ ಭಂಗಿಗಳು ಮುಂತಾದ ಕಲಿಕಾ ಅವಶ್ಯಕ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರಾದ ನಾಗರಾಜ ಅವರು ವರ್ಲಿ ಕಲೆಯಿಂದ ಚಿತ್ರಿಸಿದ್ದಾರೆ.

ಆವರಣದಲ್ಲಿ 11 ತೆಂಗಿನ ಮರಗಳು, ಎರಡು ಅಡಿಕೆ, 4 ವಿವಿಧ ಜಾತಿಯ ಮರಗಳಿದ್ದು 60 ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಜನರು ತಮ್ಮ ಕಷ್ಟಗಳ ನಡುವೆಯೂ ಶಾಲಾ ನವೀಕರಣಕ್ಕಾಗಿ ದೇಣಿಗೆ ನೀಡಿದ್ದು ಗಮನ ಸೆಳೆದಿದೆ.

‌*
ಶಾಲೆಯನ್ನು ಆಧುನಿಕ ರೀತಿಯಲ್ಲಿ ನವೀಕರಿಸಿದ ಎಸ್‌ಡಿಎಂಸಿ, ಶಿಕ್ಷಕರು, ದಾನಿಗಳು, ಗ್ರಾಮಸ್ಥರ ಶ್ರಮ ಶ್ಲಾಘನೀಯ. ಇಂತಹ ವಾತಾವರಣ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಬರಲಿ.
-ಎಂ. ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಹರಿಹರ

*

ಶೀಘ್ರದಲ್ಲಿ ಸೌರವ್ಯೂಹದ ಚಿತ್ರ, ಅಕ್ಷರ ಗುಚ್ಛಗಳ ಚಿತ್ರ ರಚಿಸಲಾಗುವುದು. ಈಗಾಗಲೇ ಟಿ.ವಿ, ಲ್ಯಾಪ್‌ಟಾಪ್‌ ದಾನದ ರೂಪದಲ್ಲಿ ಪಡೆಯಲಾಗಿದೆ. ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ.
-ಅರುಣ್ ಕುಮಾರ್ ಬಿ., ಮುಖ್ಯೋಪಾಧ್ಯಾಯ

*

ನಮ್ಮ ಶಾಲೆ ನಮ್ಮ ಹೆಮ್ಮೆ. ಖಾಸಗಿ ಶಾಲೆಗಿಂತ ನಮ್ಮ ಶಾಲೆ ಯಾವುದರಲ್ಲೂ ಕಡಿಮೆ ಇಲ್ಲ. ಯಾವೊಬ್ಬ ಮಗುವೂ ಶಾಲೆ ಬಿಡದಂತೆ ನೋಡಿಕೊಳ್ಳುತ್ತೇವೆ.
–ನಾಗರಾಜ್ ನಾಯಕ್, ಅಧ್ಯಕ್ಷ, ಎಸ್‌ಡಿಎಂಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT