ಭಾನುವಾರ, ಮಾರ್ಚ್ 26, 2023
23 °C
ತಪ್ಪದ ಜನರ ಅಲೆದಾಟ, ಮೂಲಸೌಲಭ್ಯಗಳಿಂದ ದೂರವಾದ ಉಪನೋಂದಣಾಧಿಕಾರಿ ಕಚೇರಿ

ಸರ್ವರ್‌ ನಿಧಾನ: ಇಲ್ಲಿ ಎಲ್ಲವೂ ಅಧ್ವಾನ

ಚಂದ್ರಶೇಖರ ಆರ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇತರೆ ಇಲಾಖೆಗಳಿಗೆ ಹೋಲಿಸಿದರೆ ಉಪನೋಂದಣಾಧಿಕಾರಿ ಕಚೇರಿಯಿಂದ ಸರ್ಕಾರಕ್ಕೆ ಬರುವ ವರಮಾನ ಹೆಚ್ಚು. ಆದರೆ ಇಂತಹ ಇಲಾಖೆಯ ಕಚೇರಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

ಜಿಲ್ಲೆಯ ಬಹುತೇಕ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್‌ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಆಸ್ತಿ ನೋಂದಣಿ, ವಿವಾಹ ನೋಂದಣಿ, ಮನೆ ಸಾಲ, ಉದ್ಯಮ, ಸಹಕಾರ ಸಂಘಗಳ ನೋಂದಣಿ, ದಾನಪತ್ರ, ಕ್ರಯಪತ್ರ ಸೇರಿ ಹಲವು ಕೆಲಸ–ಕಾರ್ಯಗಳಿಗೆ ಪ್ರತಿದಿನ ನೂರಾರು ಜನರು ಕಚೇರಿಗಳಿಗೆ ಬರುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಕೆಲಸ ಆಗುವುದಿಲ್ಲ. ಯಾವುದೇ ನೋಂದಣಿಗೆ ಹಲವು ದಿನಗಳು ಬೇಕು ಎಂಬುದು ಅಲಿಖಿತ ನಿಯಮದಂತಾಗಿದೆ. ಕಚೇರಿಯಲ್ಲಿ ಸರ್ವರ್‌, ನೆಟ್‌ವರ್ಕ್‌ ನಿಧಾನ ಎನ್ನುವ ಸಮಸ್ಯೆ ವರ್ಷಗಳಿಂದ ಸಾಮಾನ್ಯ ಎಂಬಂತಿದೆ. 

ಸರ್ಕಾರ ವಿವಾಹ ನೋಂದಣಿ ಕಡ್ಡಾಯ ಮಾಡಿರುವುದರಿಂದ ಪರ ಊರಿನಲ್ಲಿ ಉದ್ಯೋಗದಲ್ಲಿರುವ ಜೋಡಿಗಳು ವಿವಾಹ ನೋಂದಣಿಗೆಂದು ಒಂದು ದಿನ ರಜೆ ಹಾಕಿ ಬಂದರೆ ಮೂರು ದಿನ ಇರಬೇಕಾದ ಅನಿವಾರ್ಯ ವ್ಯವಸ್ಥೆ ಇಲ್ಲಿನದ್ದು.

ದಾವಣಗೆರೆ ನಗರದಲ್ಲಿ ಇರುವ ಉಪನೋಂದಣಾಧಿಕಾರಿ ಕಚೇರಿಗೆ ಒಮ್ಮೆ ಹೋದರೆ ವಿವಿಧ ನೋಂದಣಿಗೆ ಬಂದಿರುವ ಜನರ ಸರತಿ ಸಾಲು ಪ್ರತಿದಿನ ಕಾಣುವುದು ಸಾಮಾನ್ಯ. ಬೆಳಿಗ್ಗೆ ಆರಂಭವಾಗುವ ಜನರ ಸರತಿ ಸಾಲು ಸಂಜೆಯಾದರೂ ಕರಗುವುದೇ ಇಲ್ಲ.

ದಾವಣಗೆರೆ ನಗರ ಸೇರಿ ಇಡೀ ತಾಲ್ಲೂಕಿಗೆ ಇರುವುದು ಒಂದೇ ಉಪನೋಂದಣಾಧಿಕಾರಿ ಕಚೇರಿ. ಹೀಗಾಗಿ ಇಲ್ಲಿ ಸಮಸ್ಯೆ ಹೆಚ್ಚು. ಮಹಾನಗರಗಳಲ್ಲಿ ಇರುವಂತೆ ಇನ್ನೊಂದು ಶಾಖಾ ಕಚೇರಿ ಬೇಕೆಂಬ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.

ಸರ್ವರ್‌ ಸಮಸ್ಯೆಯಿಂದ ಪ್ರತಿದಿನ ಕಾಯುವಂತಾಗಿದೆ ಎಂದು ಜನರು ದೂರಿದರೆ, ‘ಸರ್ವರ್‌ ಸಮಸ್ಯೆ ಇಲ್ಲ. ನೆಟ್‌ವರ್ಕ್‌ ಸ್ಲೋ ಇದೆ. ಯಾವುದೇ ನೋಂದಣಿಗೆ ಹಲವು ದಾಖಲೆಗಳ ವಿವರ ಬೇಕಿರುವುದರಿಂದ ಬೇರೆ ಇಲಾಖೆಯ ಸರ್ವರ್‌ ಸಮಸ್ಯೆಯಿಂದ ನಮ್ಮ ಕೆಲಸಗಳು ನಿಧಾನವಾಗುತ್ತಿವೆ’ ಎಂದು ಸಮಜಾಯಿಷಿ ನೀಡುತ್ತಾರೆ ಅಧಿಕಾರಿಗಳು.

ಮೂಲಸೌಲಭ್ಯ ಕಾಣದ ಕಚೇರಿ: ನಗರದ ಶಂಕರ ವಿಹಾರ ಬಡಾವಣೆಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಮೂಲ
ಸೌಲಭ್ಯಗಳಿಂದ ವಂಚಿತವಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡವನ್ನು ಒಮ್ಮೆ ನೋಡಿದರೆ ಮೇಲ್ನೋಟಕ್ಕೆ ಉಗ್ರಾಣದಂತೆ ಕಾಣುತ್ತದೆ. ಕಚೇರಿಯಲ್ಲಿ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಕುಡಿಯಲು ನೀರು, ಶೌಚಾಲಯ ವ್ಯವಸ್ಥೆ ಬಲು ದೂರ. ಇನ್ನು ಕಚೇರಿಗೆ ಹೋಗುವ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಸುತ್ತ ಗಿಡಗಂಟಿಗಳು ಬೆಳೆದಿವೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲ.

ಪ್ರತಿ ಸಿಬ್ಬಂದಿಯ ಟೇಬಲ್‌ ಎದುರು ಸರತಿ ಸಾಲು ಸಾಮಾನ್ಯ. ಸಿಬ್ಬಂದಿ ಶುಲ್ಕದ ನೆಪದಲ್ಲಿ ಸಾವಿರಾರು ರೂಪಾಯಿ ಪಡೆಯುತ್ತಾರೆ. ₹ 50 ಶುಲ್ಕ ಇದ್ದರೆ ₹ 150 ಕೇಳುತ್ತಾರೆ. ಎಲ್ಲವೂ ಮಧ್ಯವರ್ತಿಗಳ ಮೂಲಕವೇ ನಡೆಯುತ್ತದೆ ಎಂಬುದು ಜನರ ಆರೋಪ.  

‘ಆಸ್ತಿ ನೋಂದಣಿಗೆ ಮನೆಯವರೆಲ್ಲರ ಸಹಿ ಅಗತ್ಯವೆಂದು ಎರಡು ದಿನಗಳಿಂದ ಕುಟುಂಬಸ್ಥರೆಲ್ಲ ಕಚೇರಿ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತುಕೊಂಡಿದ್ದೇವೆ. ಅತ್ತ ಕೃಷಿ ಕೆಲಸವೂ ಇಲ್ಲ. ದಿನಾಲೂ ಇದೇ ಕತೆ’ ಎಂದು ಬೇಸರಿಸಿದರು ಕುರ್ಕಿಯ ಪ್ರಶಾಂತ್.

‘ಆಸ್ತಿ ನೋಂದಣಿಗೆ ವಾರದಿಂದ ಅಲೆದಾಡುತ್ತಿದ್ದೇನೆ. ಕೆಲಸ ಆಗುತ್ತಿಲ್ಲ. ಪ್ರತಿದಿನ ಸರ್ವರ್‌ ಸಮಸ್ಯೆ ಎನ್ನುತ್ತಾರೆ. ನಿಜವಾಗಿಯೂ ಸಮಸ್ಯೆ ಇದೆಯೇ ಅಥವಾ ಪ್ರತಿದಿನ ನೂರಾರು ಜನರು ಬರುವ ಕಾರಣ ಜನರಿಂದ ಕಿರಿಕಿರಿ ಎಂದು ಭಾವಿಸಿ ಸಿಬ್ಬಂದಿ ಸುಳ್ಳು ಹೇಳುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ’ ಎಂದರು ವಿನೋಬನಗರದ ಶ್ರೀಶೈಲ ಮಠದ.

ಶಾಖಾ ಕಚೇರಿ ತೆರೆಯಲಿ: ಇನ್ನೊಂದು ಕಚೇರಿ ತೆರೆಯಬೇಕು. ದಾವಣಗೆರೆ ಉತ್ತರ, ದಕ್ಷಿಣ ಎಂದು ಎರಡು ಶಾಖಾ ಕಚೇರಿ ಮಾಡಿದರೆ ಅನುಕೂಲವಾಗಲಿದೆ. ಆದರೆ ಈಗಿನ ಕಚೇರಿ ಬಳಿಯೇ ಇನ್ನೊಂದು ಕಚೇರಿ ತೆರೆದರೆ ಸಮಸ್ಯೆ ಪರಿಹಾರ ಆಗದು. ಬೇರೆಡೆ ಸುಸಜ್ಜಿತವಾದ ಹೊಸ ಕಚೇರಿ ನಿರ್ಮಿಸಬೇಕು ಎನ್ನುತ್ತಾರೆ ಅಧಿಕಾರಿಗಳು.

‘ಕಂದಾಯ ಇಲಾಖೆ ಅಧೀನದಲ್ಲಿ ಬರುವ ಉಪನೋಂದಣಾಧಿಕಾರಿ ಕಚೇರಿಗಳ ಪಾಡು ಹೇಳತೀರದು. ಅದೇ ಹಣಕಾಸು ಇಲಾಖೆ ಅಧೀನದಲ್ಲಿ ಇರುವ ಬೇರೆ ರಾಜ್ಯಗಳಲ್ಲಿ ಕಚೇರಿಗಳು ಸುಸಜ್ಜಿತವಾಗಿವೆ. ಕಂದಾಯ ಇಲಾಖೆ ಅಧೀನದಲ್ಲಿ ಬಂದರೂ ಮೇಲಧಿಕಾರಿಗಳು ನಮಗೂ ಸಂಪರ್ಕವೇ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಬೇಕು’ ಎಂದು ಇಲಾಖೆಯ ಅವ್ಯವಸ್ಥೆ ಬಗ್ಗೆ ಬಿಚ್ಚಿಟ್ಟರು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು.

ಮಧ್ಯವರ್ತಿಗಳ ಹಾವಳಿ

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸಕ್ಕಾಗಿ ಬರುವ ಜನರ ಅರ್ಧದಷ್ಟು ಮಧ್ಯವರ್ತಿಗಳೇ ಇದ್ದಾರೆ. 

‘ಮಧ್ಯವರ್ತಿಗಳು ಶುಲ್ಕಕ್ಕಿಂತ ಹೆಚ್ಚಿಗೆ ಹಣ ಪಡೆಯುತ್ತಾರೆ. ಆಸ್ತಿ ನೋಂದಣಿ ಸಂಬಂಧಿಸಿದ ಕೆ–2 ಚಲನ್‌ ತುಂಬಲು
ಮಧ್ಯವರ್ತಿಗಳೇ ಬೇಕು ಎಂಬಂತಿದೆ. ಮಧ್ಯವರ್ತಿಗಳಿಲ್ಲದೇ ಸಲ್ಲಿಸಿದ ಅರ್ಜಿ ತಿರಸ್ಕಾರಗೊಂಡಿದ್ದೇ ಹೆಚ್ಚು. ಅರ್ಜಿಯ ಶುಲ್ಕವನ್ನೂ ಕಳೆದುಕೊಳ್ಳಬೇಕಿದೆ. ಅರ್ಜಿ ನಮೂನೆ, ಚಲನ್‌ ತುಂಬುವ ವಿಧಾನ ಸರಳೀಕರಣಗೊಳಿಸಬೇಕು. ನನ್ನ ಸ್ನೇಹಿತನೊಬ್ಬ ತಾನೇ ಚಲನ್ ತುಂಬಿ ₹ 5 ಸಾವಿರ ಶುಲ್ಕ ನಷ್ಟ ಮಾಡಿಕೊಂಡಿದ್ದ. ಆ ಅನುಭವದಿಂದ ಮಧ್ಯವರ್ತಿಗಳ ಜತೆ ಬಂದಿದ್ದೇನೆ’ ಎಂದರು ಆವರಗೆರೆಯ ಶಂಕರಪ್ಪ.

ನೋಂದಣಿಗೆ ಬರುವ ಜನರಿಗಿಂತ ಮಧ್ಯವರ್ತಿಗಳೇ ಹೆಚ್ಚಿದ್ದಾರೆ. ಅವರನ್ನು ತಡೆಯುವುದು ಕಷ್ಟಸಾಧ್ಯ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. 

ಅವ್ಯವಸ್ಥೆ ಸರಿಪಡಿಸಿ

‘ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಆದಾಯ ತರುವಂತಹ ಉಪನೋಂದಣಾಧಿಕಾರಿಗಳ ಕಚೇರಿಯ ಪರಿಸ್ಥಿತಿ ಶೋಚನೀಯವಾಗಿದೆ. ಕಚೇರಿಗೆ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಪ್ರತಿದಿನ ಸಾವಿರಾರು ಜನರು ಬರುತ್ತಿದ್ದರೂ ಕೂರಲು ಸ್ಥಳವಿಲ್ಲ, ಶೌಚಾಲಯವಿಲ್ಲ. ಕಚೇರಿಯಲ್ಲಿ ಸಿಬ್ಬಂದಿಯ ವರ್ತನೆ ನೋಡಿದರೆ ಆಸ್ತಿಯ ನೋಂದಣಿಗೆ ಬಂದಿದ್ದೇವೆಯೋ ಅಥವಾ ಇವರ ಹತ್ತಿರ ಸಹಾಯ ಕೇಳಲು ಬಂದಿದ್ದೇವೆಯೋ ಎನ್ನುವ ರೀತಿ ಇರುತ್ತದೆ. ಮಧ್ಯವರ್ತಿಗಳು ಹಾಗೂ ಕಚೇರಿ ಕೆಲ ಸಿಬ್ಬಂದಿ ವರ್ತನೆ ಅಸಹನೀಯವಾಗಿದೆ’ ಎಂದು ದೂರುತ್ತಾರೆ ಕಾಂಗ್ರೆಸ್‌ ಮುಖಂಡ ಕೆ.ಎಲ್‌. ಹರೀಶ್ ಬಸಾಪುರ.

ಶುಲ್ಕದ ಮಾಹಿತಿ ಫಲಕ ಅಳವಡಿಸಿ

ಮೊದಲು ದೊಡ್ಡ ಕಚೇರಿ ಇತ್ತು. ಈಗ ಅದನ್ನೂ ವಿಭಾಗಿಸಿದ್ದಾರೆ. ದಾವಣಗೆರೆಯಂತಹ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಒಂದೇ ಉಪನೋಂದಣಾಧಿಕಾರಿ ಕಚೇರಿ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನೋಂದಣಿಗೆ ಜನರಿಂದ ಸಿಬ್ಬಂದಿ ಹಣ ಸುಲಿಗೆ ಮಾಡುತ್ತಿದ್ದಾರೆ. ಯಾವ ನೋಂದಣಿಗೆ ಎಷ್ಟು ಶುಲ್ಕ ಇದೆ ಎಂಬುದನ್ನು ಸೂಚನಾ ಫಲಕದಲ್ಲಿ ಹಾಕಿ ಜನರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸಿಪಿಐನಿಂದ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಎಚ್ಚರಿಸಿದರು.

‘ಸರ್ವರ್‌ ಸಮಸ್ಯೆ ಇಲ್ಲ’

‘ಸರ್ವರ್‌ ಸಮಸ್ಯೆ ಇಲ್ಲ. ಉತ್ತಮ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಚೇರಿಯಲ್ಲಿದೆ. ನೋಂದಣಿಗೆ ಹಲವು ಇಲಾಖೆಗಳಿಂದ ಮಾಹಿತಿ ಪಡೆಯಬೇಕಿರುತ್ತದೆ. ಆ ಇಲಾಖೆಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಕೆಲಸಗಳು ನಿಧಾನವಾಗುತ್ತಿವೆ ಅಷ್ಟೇ. ಕಚೇರಿಯಲ್ಲಿ ಮೂಲಸೌಲಭ್ಯಗಳ ಕೊರತೆ ನಿವಾರಣೆಗಾಗಿ ಹೊಸ ಕಚೇರಿ ನಿರ್ಮಿಸುವಂತೆ ಹಲವು ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಆದರೆ ಕೊರೊನಾ ಹಾಗೂ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಗದ ಕಾರಣ ಅದು ಸಾಧ್ಯವಾಗಿಲ್ಲ. ಮತ್ತೊಮ್ಮೆ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು ಉಪನೋಂದಣಾಧಿಕಾರಿ ಕರಿಬಸನಗೌಡ ಪಿ.

‘ಕೊರೊನಾ ಕಾರಣ ಕಚೇರಿಯಲ್ಲಿ ಆಸನದ ವ್ಯವಸ್ಥೆ ಮಾಡಿಲ್ಲ. ಮೊದಲೇ ಕಚೇರಿಯಲ್ಲಿ ಸಮರ್ಪಕ ಜಾಗ ಇಲ್ಲ. ಆಸನ‌ದ ವ್ಯವಸ್ಥೆ ಮಾಡಿದರೆ ಎಲ್ಲರೂ ಇಲ್ಲಿಯೇ ಇರುತ್ತಾರೆ. ಜನರಿಗೆ ನೋಂದಣಿ ಅರ್ಜಿ ಸಲ್ಲಿಸಿದ ಬಳಿಕ ಇಂತಹ ದಿನ ಬನ್ನಿ ಎಂದು ಹೇಳುತ್ತೇವೆ. ಆದರೆ ಜನರು ದಿನ ಬರುತ್ತಾರೆ. ಅವರಿಗೆ ಹೇಳಿ ಸಾಕಾಗಿದೆ’ ಎಂದರು ಅವರು.

ಬಾಡಿಗೆ ಕಟ್ಟಡದಲ್ಲಿ ಕಚೇರಿ

ಹೊನ್ನಾಳಿ: ನಗರದಲ್ಲಿರುವ ಉಪನೋಂಣಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ಇಲ್ಲ. ಈಗ ಬಾಡಿಗೆ ಕಟ್ಟಡದಲ್ಲಿದ್ದು. ಅದು ಎರಡನೇ ಅಂತಸ್ತಿನಲ್ಲಿದೆ. ಹೀಗಾಗಿ ಯಾವುದೇ ಆಸ್ತಿ ನೋಂದಣಿ, ಸಂಘ ಸಂಸ್ಥೆಗಳ ನೋಂದಣಿ ಇತರೆ ಕೆಲಸ ಕಾರ್ಯಗಳಿಗೆ ವಯೋವೃದ್ಧರು, ಅಂಗವಿಕಲರು, ಮಹಿಳೆಯರು ಮೆಟ್ಟಿಲು ಹತ್ತಿ ಹೋಗಬೇಕಾಗಿದೆ.

‘ಕಚೇರಿಗೆ ಬರುವ ನೂರಾರು ಜನರಿಗೆ ಕೂರಲು, ನಿಲ್ಲಲು ಸ್ಥಳವಿಲ್ಲ. ಕಚೇರಿಯಲ್ಲಿ ಸದಾ ಜನಜಂಗುಳಿ.  ಈ ಹಿಂದೆ ಸರ್ವರ್ ಸಮಸ್ಯೆ ಇತ್ತು ಎನ್ನುವ ದೂರುಗಳಿದ್ದವು. ಇದೀಗ ಹಳೆಯ ಯುಪಿಎಸ್  ಬದಲಾಯಿಸಿದ್ದರಿಂದ ಈಗ ಸರ್ವರ್ ಸಮಸ್ಯೆ ಇಲ್ಲ’ ಎನ್ನುತ್ತಾರೆ ತಾಲ್ಲೂಕು ನೋಂದಣಾಧಿಕಾರಿ ಆರ್.ಎಲ್. ವೀಣಾ.

ಕಚೇರಿಯಲ್ಲಿ ಮೂವರು ಸಿಬ್ಬಂದಿ ಬೇಕು. ಇಬ್ಬರು ಇದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಭರ್ತಿಮಾಡಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

‘ಕಾನೂನು ಬಾಹಿರ ನೋಂದಣಿ ಹೆಚ್ಚಾಗುತ್ತಿದೆ. ವ್ಯಕ್ತಿಯನ್ನು ಖದ್ದು ಇಟ್ಟುಕೊಂಡು ನೋಂದಣಿ ಮಾಡಿಸುವುದರ ಬದಲು ಫೋಟೊಗಳನ್ನು ಹಚ್ಚಿ ನೋಂದಣಿ ಮಾಡಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇ–ಸ್ವತ್ತು ಪಡೆದುಕೊಳ್ಳಲು ವಾರಗಟ್ಟಲೇ ಕಾಯಬೇಕು. ದಾನಪತ್ರ, ಮಾರ್ಟ್‍ಗೇಜ್, ಆಧಾರ ಖುಲಾಸೆ, ಹಕ್ಕು ಖುಲಾಸೆ ಮತ್ತು ಇತರೆ ಕೆಲಸ ಕಾರ್ಯಕ್ಕೆ ಅದರದ್ದೇ ಆದ ಸರ್ಕಾರಿ ಶುಲ್ಕ ಹೊರತುಪಡಿಸಿ ಇತರೆ ಖರ್ಚು ವೆಚ್ಚಗಳನ್ನು ಭರಿಸಬೇಕಾಗಿದೆ’ ಎಂದು ದೂರುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್.

ಕಚೇರಿಯಲ್ಲಿ ಸರತಿ ಸಾಲು..

ಚನ್ನಗಿರಿ: ತಾಲ್ಲೂಕು ಕಚೇರಿಯ ಒಳಗಡೆ ಇರುವ ನೋಂದಣಿ ಕಚೇರಿ ಎದುರು ಹೋದರೆ ಸಾಲು ಸಾಲಾಗಿ ಜನರು ನಿಂತಿರುವುದನ್ನು ಸಾಮಾನ್ಯ.

ಆಹಾರ ಇಲಾಖೆ, ಪಹಣಿ ತೆಗೆಯುವುದು, ಆಧಾರ್ ಕಾರ್ಡ್ ನೋಂದಣಿ ಕಚೇರಿ ಎದುರು ಸರ್ವರ್ ಇಲ್ಲ ಎಂಬ ಫಲಕವನ್ನು ನೇತು ಹಾಕಿರುವುದನ್ನು ಕಾಣಸಿಗುತ್ತದೆ. ತಾಲ್ಲೂಕಿನ ಚನ್ನಗಿರಿ, ಬಸವಾಪಟ್ಟಣ, ನಲ್ಲೂರು, ತ್ಯಾವಣಗಿ, ಸಂತೇಬೆನ್ನೂರು, ದೇವರಹಳ್ಳಿ, ತಾವರೆಕೆರೆ ಗ್ರಾಮಗಳಲ್ಲಿ ನೆಮ್ಮದಿ ಕೇಂದ್ರಗಳಿದ್ದು, ಇಲ್ಲಿಯೂ ‌ಸರ್ವರ್ ಸಮಸ್ಯೆ ಇದೆ. ಇದರಿಂದ ಜನರು ಪ್ರತಿದಿನ ಅಲೆದಾಡುವುದು ತಪ್ಪಿಲ್ಲ.

ಹತ್ತು ಹಲವಾರು ಕಾರ್ಯಗಳಿಗಾಗಿ ಎರಡು ತಿಂಗಳು ನಿರಂತರವಾಗಿ ಸರ್ವರ್ ಸಮಸ್ಯೆಯಿಂದಾಗಿ ಜನರು ತಾಲ್ಲೂಕು ಕಚೇರಿಗೆ ಅಲೆದಾಡಬೇಕಾಗಿತ್ತು. ವಾರದ ಹಿಂದೆ ಸಕಾಲ ಆರಂಭವಾಗಿದ್ದರೂ, ಈ ತಂತ್ರಾಂಶ ನಿರಂತರವಾಗಿ ತೆರೆಯುತ್ತಿಲ್ಲ.

ಜನರು ಬೆಳಿಗ್ಗೆ 8 ಗಂಟೆಯಿಂದ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಇದೆ.  ಒಂದು ಇಡೀ ದಿನ ಕಾದರೂ ಸರ್ವರ್ ಸಮಸ್ಯೆಯಿಂದ ಮತ್ತೆ ಮರುದಿನ ಕಚೇರಿಗಳಿಗೆ ಬರುವಂತಾಗಿದೆ. ಕಂದಾಯ ಇಲಾಖೆ, ನೋಂದಣಿ ಕಚೇರಿ ಸಿಬ್ಬಂದಿ ಸರ್ವರ್ ಸಮಸ್ಯೆ ಎಂಬ ನೆಪ ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಯಾವಾಗ ಇದು ಸರಿಯಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ ಎಂದರು ಹೊದಿಗೆರೆ ಗ್ರಾಮದ ನಾಗರಾಜ್.

 ಆಸ್ತಿ ನೋಂದಣಿಗಾಗಿ ಕಂದಾಯ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿ ಕಚೇರಿಗೆ ಅಲೆದಾಡಿಸಿದರು. ಅಲ್ಲಿ ದಾಖಲೆ ಪಡೆದು ಈಗ ಉಪನೋಂದಣಾಧಿಕಾರಿ ಕಚೇರಿಗೆ ಬಂದರೆ ಇಲ್ಲಿಯೂ ಇದೇ ಗೋಳು. ಅಲೆದಾಟ ತಪ್ಪಿಲ್ಲ.

–ಕೆಂಚಣ್ಣ, ಕಂದಗಲ್ ನಿವಾಸಿ

ಕಚೇರಿಯಲ್ಲಿ ನೋಂದಣಿ ಕೆಲಸ ಸಮರ್ಪಕವಾಗಿಲ್ಲ. ಅಂಗವಿಕಲ ಸಹೋದರನೊಂದಿಗೆ ಬಂದಿದ್ದೇನೆ. ಇಲ್ಲಿ ಕೂರಲೂ ಸ್ಥಳವಿಲ್ಲ. ಎರಡು ದಿನದಿಂದ ವೀಲ್‌ಚೇರ್‌ ಹಿಡಿದು ನಿಲ್ಲುವುದೇ ಕೆಲಸವಾಗಿದೆ.

–ಕುಬೇರಪ್ಪ, ಆನಗೋಡು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು