ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಚೆಂಡು ಹೂ ಕೃಷಿಯಿಂದ ಚೆಂದದ ಆದಾಯ

ಬಸವಾಪಟ್ಟಣದ ರೈತ ಮೊಹಮ್ಮದ್‌ ಅಲಿ
Published 11 ಅಕ್ಟೋಬರ್ 2023, 6:34 IST
Last Updated 11 ಅಕ್ಟೋಬರ್ 2023, 6:34 IST
ಅಕ್ಷರ ಗಾತ್ರ

ಬಸವಾಪಟ್ಟಣ: ವಿವಿಧ ತರಕಾರಿಗಳನ್ನು ಬೆಳೆದು ಯಶಸ್ಸು ಕಂಡಿದ್ದ ಗ್ರಾಮದ ಯುವ ರೈತ ಮಹಮ್ಮದ್‌ ಅಲಿ ಅವರು ಈ ಬಾರಿ ಹಳದಿ ಬಣ್ಣದ ಚೆಂಡು ಹೂ ಬೆಳೆಯುವ ಮೂಲಕ ಚೆಂದದ ಆದಾಯ ಕಾಣುತ್ತಿದ್ದಾರೆ.

ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದಾದ ಈ ಹೂವನ್ನು ಸಾಮಾನ್ಯವಾಗಿ ಮಳೆಗಾಲದ ಆರಂಭದ ತಿಂಗಳು ಜೂನ್‌ನಲ್ಲಿ ನಾಟಿ ಮಾಡಲಾಗುತ್ತದೆ. ಚೆನ್ನಾಗಿ ಬಲಿತಿರುವ ಒಣಗಿದ ಚೆಂಡು ಹೂಗಳಿಂದ ಬೀಜಗಳನ್ನು ಸಂಗ್ರಹಿಸಿ ಸಸಿಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ಇದು ನಾಲ್ಕು ತಿಂಗಳ ಬೆಳೆಯಾಗಿದ್ದು, ಮರಳುಮಿಶ್ರಿತ ಕಪ್ಪುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಹಮ್ಮದ್‌ ಅಲಿ ಅವರ ಒಂದು ಎಕರೆ ಹೊಲದಲ್ಲಿ ಚೆಂಡು ಹೂ ನಳನಳಿಸುತ್ತಿದೆ.

‘ಮಾಯಕೊಂಡದ ನರ್ಸರಿಯಿಂದ ‘ಬಂಗಾಳಿ ಎಲ್ಲೋ’ ಹೆಸರಿನ ತಳಿಯ ಒಂದು ತಿಂಗಳ ಚೆಂಡು ಹೂ ಸಸಿಗಳನ್ನು ತಲಾ ₹ 3ರಂತೆ ತಂದು ನಾಟಿ ಮಾಡಿದ್ದೆ. ಈ ಬೆಳೆಗೆ ಮೂರು ಬಾರಿ ಒಟ್ಟು ಒಂದು ಕ್ವಿಂಟಲ್‌ ಎನ್‌.ಪಿ.ಕೆ ರಾಸಾಯನಿಕ ಗೊಬ್ಬರ ಬಳಸಲಾಗಿದೆ. ಸಾವಯವ ದ್ರವಗೊಬ್ಬರ ಕೋರಿಪಾಸ್‌ ಅನ್ನು ಎಕರೆಗೆ 120 ಮಿ.ಲೀ ನಂತೆ ಸಿಂಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೀಟನಾಶಕ ಸಹ ಸಿಂಪಡಿಸಿದ್ದು, ಸಸಿಗಳನ್ನು ನಾಟಿ ಮಾಡಿದ ಒಂದು ತಿಂಗಳಿಗೆ ಗಿಡಗಳಲ್ಲಿ ಮೂಡಿದ್ದ ಹೂಗಳನ್ನು ಬೆಳೆಯಲು ಬಿಡದೆ ಜಿಗುಟಿದ್ದರಿಂದ ಗಿಡಗಳು ಅಗಲವಾಗಿ ಹರಡಿ, ಹಲವು ಚಿಗುರೊಡೆದು 15 ದಿನಗಳಲ್ಲಿ ಮೊಗ್ಗುಗಳು ಕಾಣಿಸಿಕೊಂಡವು. ದಿನದಿಂದ ದಿನಕ್ಕೆ ಚೆನ್ನಾಗಿ ಅರಳಿ ಕೊಯಿಲಿಗೆ ಸಿದ್ಧವಾದವು’ ಎಂದು ಮಹಮ್ಮದ್‌ ಅಲಿ ತಿಳಿಸಿದರು.

‘ಮೊದಲ ಕೊಯಿಲಿನಲ್ಲಿ 3ರಿಂದ 4 ಕ್ವಿಂಟಲ್‌, ನಂತರದ ಒಂದು ತಿಂಗಳ ಎರಡನೇ ಕೊಯಿಲಿನಲ್ಲಿ 7ರಿಂದ 8 ಕ್ವಿಂಟಲ್‌ ಮತ್ತೆ ಒಂದು ತಿಂಗಳ ನಂತರದ ಮೂರನೇ ಕೊಯಿಲಿನಲ್ಲಿ 2ರಿಂದ 3 ಕ್ವಿಂಟಲ್‌ ಇಳುವರಿ ಸಿಕ್ಕಿತು. ಎಕರೆಗೆ ಒಂದರಿಂದ ಒಂದೂವರೆ ಟನ್‌ ಇಳುವರಿ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಚೆಂಡುಹೂ ಬೆಲೆ ಕೆ.ಜಿ.ಗೆ ₹ 20ರಿಂದ ₹  25 ಇದ್ದು, ಹಬ್ಬಗಳ ಸಮಯದಲ್ಲಿ ₹ 60ರಿಂದ ₹ 70ರವರೆಗೂ ಏರಿಕೆಯಾಗುತ್ತದೆ. ಎಕರೆಗೆ ₹ 35 ಸಾವಿರ ಖರ್ಚು ಇದ್ದು, ಬೇಡಿಕೆಗೆ ತಕ್ಕಂತೆ ದರ ನಿರ್ಧಾರವಾಗುತ್ತದೆ’ ಎಂದು ಅವರು ವಿವರಿಸಿದರು.

‘ಚೆಂಡುಹೂ ಬೆಳೆದ ರೈತರಿಗೆ ನಷ್ಟವಂತೂ ಆಗುವುದಿಲ್ಲ. ತರಕಾರಿ ಸಸಿಗಳನ್ನು ತರಲು ಮಾಯಕೊಂಡದ ನರ್ಸರಿಗೆ ಹೋದಾಗ ಮಾಲೀಕ ರಾಮಣ್ಣವರು ಚೆಂಡು ಹೂ ಬೆಳೆಯ ಬಗ್ಗೆ ವಿವರಿಸಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಈ ಕೃಷಿಗೆ ಕೈ ಹಾಕಿದೆ. ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ದಸರಾ, ನಂತರ ಬರುವ ದೀಪಗಳ ಹಬ್ಬ ದೀಪಾವಳಿಗೆ ಚೆಂಡು ಹೂವಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಆ ವೇಳೆಗೆ ಸರಿಯಾಗಿ ಹೂ ಲಭ್ಯವಾಗುವ ಮುಂದಾಲೋಚನೆಯಿಂದ ಬೆಳೆ ಬೆಳೆದಿದ್ದೇನೆ’ ಎಂದು ರೈತ ಮಹಮ್ಮದ್‌ ಅಲಿ ಹೇಳಿದರು.

ಬಸವಾಪಟ್ಟಣದ ತಮ್ಮ ಹೊಲದಲ್ಲಿ ಬೆಳೆದಿರುವ ಚೆಂಡು ಹೂಗಳೊಂದಿಗೆ ಮಹಮ್ಮದ್ ಅಲಿ
ಬಸವಾಪಟ್ಟಣದ ತಮ್ಮ ಹೊಲದಲ್ಲಿ ಬೆಳೆದಿರುವ ಚೆಂಡು ಹೂಗಳೊಂದಿಗೆ ಮಹಮ್ಮದ್ ಅಲಿ

ಬೇಡಿಕೆಯ ಬೆಳೆಯಿಂದ ಲಾಭ

ಈ ಬಾರಿ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಯುವಕ ಮಹಮ್ಮದ್‌ ಅಲಿ ಅವರು ಒಂದು ಎಕರೆ ಹೊಲದಲ್ಲಿಯೇ ಕೊಳವೆಬಾವಿ ಆಶ್ರಯದಲ್ಲಿ ಚೆಂಡು ಹೂ ಫಸಲನ್ನು ಉತ್ತಮವಾಗಿ ಬೆಳೆದಿದ್ದಾರೆ. ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳನ್ನು ನಂಬಿಕೊಳ್ಳದೇ ಬೇಡಿಕೆ ಇರುವ ಬೆಳೆಗಳನ್ನೂ ಬೆಳೆದು ಕೃಷಿಯಲ್ಲಿ ಉತ್ತಮ ಆದಾಯ ಪಡೆಯಬೇಕು ಎಂದು  ಇಲ್ಲಿನ ವೈದ್ಯ ಹಾಗೂ ಕೃಷಿಕ ಬಸವನಗೌಡ ಕುಸಗೂರ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT