ಬುಧವಾರ, ಸೆಪ್ಟೆಂಬರ್ 29, 2021
21 °C

ಚರಂಡಿ, ವಸತಿ ನಿರ್ಮಾಣಕ್ಕೆ ಆದ್ಯತೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ಶಾಮನೂರು ಶಿವಶಂಕರಪ್ಪ, ಶಾಸಕ, ದಾವಣಗೆರೆ ದಕ್ಷಿಣ

 ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದ ವರದಿಗಳಲ್ಲಿ ಕೆಲವನ್ನು ಗಮನಿಸಿದ್ದೇನೆ. ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಜನರಿಗೆ ಒಳ್ಳೆಯದಾಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

* ನಮ್ಮ ಕ್ಷೇತ್ರದಲ್ಲಿನ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ಅವಧಿಯಲ್ಲೇ ಮಂಜೂರಾತಿ ಸಿಕ್ಕಿದೆ. ಈಗ ಅವುಗಳನ್ನು ಅನುಷ್ಠಾನಗೊಳಿಸಬೇಕಷ್ಟೇ. ಚುನಾವಣೆ ಪೂರ್ವದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದೆ.
ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದ ಬಳಿಕ ಈಗಾಗಲೇ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಒಟ್ಟು ₹ 65 ಕೋಟಿ ವೆಚ್ಚದಲ್ಲಿ ಆರು ಕಡೆ ಮಳೆನೀರಿನ ದೊಡ್ಡ ಚರಂಡಿಗಳ ಆಧುನೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಕೆಲಸ ಆರಂಭಿಸಲಾಗಿದೆ. ಮೂರು– ನಾಲ್ಕು ತಿಂಗಳಲ್ಲಿ ಕ್ಷೇತ್ರದ ಕೆಲವು ಭಾಗಗಳಿಗೆ 24 ಗಂಟೆ ನಿರಂತರವಾಗಿ ಕುಡಿಯುವ ನೀರು ಕೊಡುವ ವ್ಯವಸ್ಥೆ ಮಾಡುತ್ತೇವೆ.

* ಹಳೆ ದಾವಣಗೆರೆ ಭಾಗದಲ್ಲಿ ಚರಂಡಿ ಹಾಗೂ ನೈರ್ಮಲ್ಯ ಸಮಸ್ಯೆ ಹೆಚ್ಚಿದೆ. ಕಸ, ಕೆಸರಿನಿಂದ ಜನರಿಗೆ ತೊಂದರೆಯಾಗುತ್ತಿದೆ. ಮೊದಲು ಈ ಕೆಲಸ ನಡೆಯಲಿ ಎಂದು ಜನ ಕಾಯುತ್ತಿದ್ದಾರೆ. ಕ್ಷೇತ್ರದಲ್ಲಿನ ಸಣ್ಣ ಚರಂಡಿಗಳ ಅಭಿವೃದ್ಧಿಗಾಗಿ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದಕ್ಕೆ ಮಂಜೂರಾತಿ ಪಡೆದು ಕೆಲಸ ಮಾಡಿಸುತ್ತೇನೆ. ಚರಂಡಿ ಮಾಡಿದರೆ ಸೊಳ್ಳೆಗಳ ಕಾಟ ಕಡಿಮೆಯಾಗಿ ಜನರೂ ನೆಮ್ಮದಿಯಾಗಿರುತ್ತಾರೆ.

* ನಮ್ಮ ಕ್ಷೇತ್ರದ ಜನರಿಗೆ ಬೇಕಾಗಿರುವುದು ಉಚಿತ ಸೈಟು ಹಾಗೂ ಮನೆ. ಅವರಿಗೆ ಇದನ್ನೆಲ್ಲ ಕೊಟ್ಟರೂ ಅದನ್ನಷ್ಟೇ ನೋಡಿ ಚುನಾವಣೆಯಲ್ಲಿ ಜನ ವೋಟ್‌ ಕೊಡುವುದಿಲ್ಲ. ಎಷ್ಟು ಆಶ್ರಯ ಮನೆ ಕೊಟ್ಟರೂ ಸಾಲದು. ತಂದೆ, ಮಕ್ಕಳು ಬೇರೆ ಬೇರೆ ಇರುತ್ತಾರೆ. ಹೆಂಡತಿಯೂ ಮನೆ ಕೇಳುತ್ತಾಳೆ. 50 ಸಾವಿರ ಮನೆ ಕೊಟ್ಟರೂ ಸಾಲದು. ಕ್ಷೇತ್ರದಲ್ಲಿ ಎಷ್ಟು ಜನರಿಗೆ ನಿಜವಾಗಿಯೂ ಆಶ್ರಯ ಮನೆಯ ಅಗತ್ಯವಿದೆ ಎಂಬ ಬಗ್ಗೆ ಸರ್ವೆ ನಡೆಸಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು.

* ಕ್ಷೇತ್ರಕ್ಕೆ ಈಗಾಗಲೇ ಹಲವು ಯೋಜನೆಗಳು ಮಂಜೂರಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯೂ ಬೇಕಾದಷ್ಟು ಅನುದಾನವಿದೆ. ಮೊದಲು ಅದನ್ನು ಖರ್ಚು ಮಾಡಿದರೆ ಸಾಕು. ಈ ಹಿಂದೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಈಗ ದಕ್ಷಿಣ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಉತ್ತರ ಕ್ಷೇತ್ರಕ್ಕೆ ಸರಿಸಮನಾಗಿ ದಕ್ಷಿಣ ಕ್ಷೇತ್ರವನ್ನೂ ಅಭಿವೃದ್ಧಿಗೊಳಿಸಲಾಗುವುದು.

ಮೊದಲು ಮಂಡಕ್ಕಿ ಭಟ್ಟಿಯನ್ನು ಊರಿನ ಹೊರಗೆ ಹಾಕಬೇಕು. ಆಗ ಆ ಪ್ರದೇಶ ತಾನಾಗಿಯೇ ಅಭಿವೃದ್ಧಿಯಾಗುತ್ತದೆ. ಈ ಕೆಲಸ ಸ್ವಲ್ಪ ತಡವಾಗಬಹುದು. ಸ್ಮಾರ್ಟ್‌ ಸಿಟಿ ಯೋಜನೆಯಡಿ ತುಂಗಭದ್ರಾ ನದಿಗೆ ₹ 95 ಕೋಟಿ ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸುವ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ₹ 35 ಕೋಟಿ ವೆಚ್ಚದಲ್ಲಿ ಹಳೆ ಬಸ್‌ನಿಲ್ದಾಣ ಅಭಿವೃದ್ಧಿ ಮಾಡಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಾಗ ಕ್ಷೇತ್ರದ ಚಿತ್ರಣವೂ ಬದಲಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು